Tuesday, August 7, 2018

ಕರುಣಾಳು ಬಾ ಬೆಳಕೆ ಮುಸುಕಿದೀ ಮಬ್ಬಿನಲಿ
ಕೈ ಹಿಡಿದು ನಡೆಸೆನ್ನನು

ಇರುಳು ಕತ್ತಲೆಯ ಗವಿ ಮನೆ ದೂರ ಕನಿಕರಿಸಿ
ಕೈ ಹಿಡಿದು ನಡೆಸೆನ್ನನು

ಹೇಳಿ ನನ್ನಡಿಯಿಡಿಸು ಬಲುದೂರ ನೋಟವನು
ಕೇಳಿದೊಡನೆಯೇ ಸಾಕು ನನಗೊಂದು ಹೆಜ್ಜೆ
ಮುನ್ನೆ ಇಂತಿರದಾದೆ ನಿನ್ನ ಬೇಡದೆ ಹೋದೆ
ಕೈ ಹಿಡಿದು ನಡೆಸೆನ್ನನು

ಇಷ್ಟುದಿನ ಸಲಹಿರುವೆ ಈ ಮೂರ್ಖನನು ನೀನು ಮುಂದೆಯೂ
ಕೈ ಹಿಡಿದು ನಡೆಸದಿಹೆಯಾ
ಕಷ್ಟದಡವಿಯ ಕಳೆದು ಬೆಟ್ಟ ಹೊಳೆಗಳ ಹಾದು
ಇರುಳನ್ನು ನೂಕದಿಹೆಯಾ?

ಬೆಳಗಾಗ ಹೊಳೆಯದೆ ಹಿಂದೊಮ್ಮೆ ನಾನೊಲಿದು
ಈ ನಡುವೆ ಕಳಕೊಂಡೆ ದಿವ್ಯ ಮುಖ ನಗುತ

ಸಾಹಿತ್ಯ –  ಬಿ ಎಂ ಶ್ರೀಕಂಠಯ್ಯ
ಭಾವಾರ್ಥ..   
ಇದೊಂದು ಭಕ್ತಿ ಭಾವದಿಂದ ಕೂಡಿದ ಕವನ.  ದೇವರು ಇದ್ದಾನೋ ಇಲ್ಲವೋ ಗೊತ್ತಿಲ್ಲ. ಆದರೆ  ಕವಿತೆಯನ್ನು ಹಾಡುತ್ತಿದ್ದರೆ ಎಂತಹವರೂ ಭಾವಪರವಶವಾಗಿಬಿಡುತ್ತಾರೆ. ನಮಗೆ ಅರಿವಿಲ್ಲದೆ ಮನಸ್ಸು ಭಗವಂತನಲ್ಲಿ ಲೀನವಾಗಿಬಿಡುತ್ತದೆ. ಬದುಕಿನಲ್ಲಿ ಏನನ್ನೋ ಕಳೆದುಕೊಂಡ ಮನಸ್ಸು ಮತ್ತೆ ಅದನ್ನು ಪಡೆಯಲು ಹಂಬಲಿಸುತ್ತದೆ. ಮನಸ್ಸು ಸಂಸ್ಕಾರಗೊಂಡು, ಹೊಸ ಚೈತನ್ಯ ಪಡೆಯುತ್ತದೆ.
ನಮ್ಮ ಬದುಕು ಪ್ರಕೃತಿಯೊಂದಿಗೆ ಮಿಳಿತವಾಗಿದೆ. ಪ್ರಕೃತಿಯೇ ನಮಗೆ ದೇವರು. ಇಲ್ಲಿಯ ಬೆಟ್ಟಗುಡ್ಡ, ಮರಗಿಡ, ನದಿ ಸರೋವರ, ಬೆಳಕು ಎಲ್ಲವೂ ನಮಗೆ ಪೂಜನೀಯ. ಬೆಳಕು ಜ್ಞಾನದ ಸಂಕೇತ. ತಮಸೋಮಾ ಜ್ಯೋತಿರ್ಗಮಯ ಎಂಬ ಆಶಯದಂತೆ ಕತ್ತಲು ತುಂಬಿರುವ ಈ ಬಾಳಿನಲ್ಲಿ ನಮ್ಮ ಕೈಯನ್ನು ಹಿಡಿದು ನಡೆಸು  ಎಂಬ ಆರ್ತವಾದ ಬೇಡಿಕೆ ಈ ಗೀತೆಯಲ್ಲಿದೆ. ಕರುಣಾಳು ಬಾ ಬೆಳಕೇ, ಮುಸುಕಿದೀ ಮಬ್ಬಿನಲಿ ಕೈ ಹಿಡಿದು ನಡೆಸೆನ್ನನು .. ಪ್ರಕೃತಿಗೆ, ದೈವತ್ವಕ್ಕೆ ಸಂಪೂರ್ಣವಾಗಿ ಶರಣಾದ, ಅಹಂಕಾರದ ಲವಲೇಶವೂ ಇಲ್ಲದ ಹೃದಯ ಇಲ್ಲಿ ಬೇಡುತ್ತಿದೆ- ಕೈ ಹಿಡಿದು ನಡೆಸೆನ್ನನು….  ಇಷ್ಟು ದಿನ ಸಲಹಿರುವೆ ಈ ಮುರ್ಖನನು ನೀನು ಮುಂದೆಯೂ ಸಲಹಲಾರೆಯಾ ನನ್ನನು ? ಕವಿಯು ತನ್ನನ್ನು ತಾನೂ ಅಂದರೆ ಮಾನವನನ್ನು ಮುರ್ಖನೆಂದೂ , ಸಣ್ಣವನೆಂದೂ  ಭಾವಿಸುತ್ತಾನೆ. ಇಷ್ಟು ದಿನ ಕರುಣೆಯಿಂದ ಕಾಪಾಡಿದ ಹಾಗೆ ಇನ್ನು ಮುಂದೆಯೂ ಮುನ್ನಡೆಸುವಂತೆ ಜ್ಞಾನವನ್ನು, ಬೆಳಕನ್ನೂ  ಬೇಡುತ್ತಾನೆ.  ತಾಯಿ ತನ್ನಮಗುವಿನ ತಪ್ಪು ಒಪ್ಪುಗಳನ್ನೆಲ್ಲ ಮನ್ನಿಸಿ ಕೈ ಹಿಡಿದು ನಡೆಸುವಂತೆ ಕಷ್ಟದಡವಿಯ ಕಳೆದು, ಬೆಟ್ಟ ಹೊಳೆಗಳ ದಾಟಿಸಿ, ಇರುಳನ್ನು ಅಂದರೆ ಅಜ್ಞಾನವನ್ನು ನೂಕಿ ಬೆಳಕನ್ನು ತೋರುವಂತೆಯೂ ಬೇಡಿಕೊಳ್ಳುತ್ತಾನೆ. ಬಿ. ಎಂ. ಶ್ರೀ ಅವರು ಅನುವಾದಿಸಿದ ಈ ಕವನ ಕನ್ನಡ ಭಾವಗೀತಾ ಪ್ರಪಂಚದಲ್ಲಿ ಸುಪರಿಚಿತವಾಗಿದೆ.

No comments:

Post a Comment