ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಅಹಮದ್ ಹಗರೆ
ಭಾರತ ಜ್ಞಾನ ವಿಜ್ಞಾನ ಸಮಿತಿ, ಹಾಸನ
ನಮ್ಮ ಶಾಲಾ-ಕಾಲೇಜುಗಳು ಸೌಂದರ್ಯ ಸ್ಪರ್ಧೆ ನಡೆಸಲು ತಲೆ ಕೆಡಿಸಿಕೊಂಡಿರುವಾಗ, ವಿದ್ಯಾರ್ಥಿಗಳು ವ್ಯಾಲೆಂಟೇನ್ಸ್ ಡೇ ಸಂಬ್ರಮದ ಅಮಲಿನಲ್ಲಿ ತೇಲುತ್ತಿರುವಾಗ ವಿಜ್ಞಾನದ ನೆನಪಾದರೂ ಬರುದಾದರು ಹೇಗೆ ಸಾಧ್ಯ? ಅಲ್ಲದೆ ಈ ದಿನಾಚರಣೆ ಪರೀಕ್ಷಾ ವೇಳೆಯಲ್ಲಿ ಬರುವುದರಿಂದ ಅಂಕ ಕಬಳಿಸಲು ಉರುಹಚ್ಚುವ ಬ್ರಮಾಲೋಕದಲ್ಲಿ ಪೋಷಕರು, ಶಿಕ್ಷಕರು ತೊಳಲಾಡುತ್ತಿರುವಾಗ ಈ ದಿನಾಚರಣೆ ಬಗ್ಗೆ ತಲೆಕೆಡಿಸಿ ಕೊಳ್ಳುವುದಾದರೂ ಹೇಗೆ?
ಈ ದೇಶಕ್ಕೆ ಈ ದೇಶದ ಜನರಿಗೆ ರಾಷ್ಟ್ರೀಯ ದಿನಾಚರಣೆ ಈ ನಾಲ್ಕು ಅಂಶಗಳಲ್ಲಿ ಮಹತ್ತರವಾದುದು.
ಮೊದಲನೆಯದಾಗಿ ವಿಶ್ವ ಭೂಪಟದಲ್ಲಿ ಈ ದೇಶಕ್ಕೆ ಮಹತ್ತರ ಸ್ಥಾನಮಾನ ನೀಡಿದಂತಹ ದಿನ, ಇಂಗ್ಲೇಂಡ್, ಅಮೇರಿಕ, ರಷ್ಯದಂತಹ ದೇಶಗಳ ಸಾಲಿನಲ್ಲಿ ನಿಲ್ಲಿಸಿದ ದಿನ. ಕೇವಲ ಶ್ರೀಮಂತ ಬಂಡವಾಳಶಾಹಿ ರಾಷ್ಟ್ರಗಳಿಗೇ ಸೀಮಿತವಾಗಿದ್ದ ವಿಜ್ಞಾನದ ಸಾಧನೆಯ ಫಲಶೃತಿಯನ್ನು ಮೊದಲಬಾರಿಗೆ ಮೂರನೆ ಜಗತ್ತಿನ ದೇಶವೊಂದು ತನ್ನದಾಗಿಸಿಕೊಂಡ ದಿನ.
ಎರಡನೆಯದಾಗಿ ಜಗತ್ತಿನ ಬಹುತೇಕ ಪ್ರಜಾಪ್ರಭುತ್ವೀಯ ದೇಶಗಳು ರಾಜಕೀಯ ಅಸ್ಥಿರತೆಯನ್ನು ಎದುರಿಸಿದಾಗ ಮಿಲಿಟರಿ ಹಿಡಿತಕ್ಕೆ ಹೋಗುವುದು ಸಾಮಾನ್ಯ, ಹೋಗಿರುವುದು ಇತಿಹಾಸ ಆದರೆ ಕಳೆದ 60ವರ್ಷಗಳಲ್ಲಿ ಹತ್ತಕ್ಕೂ ಹೆಚ್ಚುಬಾರಿ ಈ ದೇಶ ರಾಜಕೀಯ ಅಸ್ಥಿರತೆ ಅನುಭವಿಸಿದ್ದರೂ, ಈಗಲೂ ಅನುಭವಿಸುತ್ತಿದ್ದರೂ ಈ ದೇಶ ಮಿಲಿಟರಿ ತೆಕ್ಕೆಗೆ ಬೀಳದಿರಲು ಕಾರಣ ಈ ರಾಷ್ಟ್ರದ ಪ್ರಜಾಸತ್ತೆಯ ತಳಹದಿ ವೈಜ್ಞಾನಿಕ ಮನೋಧರ್ಮದ್ದು ಆ ವೈಜ್ಞಾನಿಕ ಮನೋಧರ್ಮವನ್ನು ನಮ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಆದರ ನೇತಾರರಿಗೆ ಅಚ್ಚೊತ್ತಿಸಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಿಕೊಳ್ಳುವುದು ಮೂಲಭೂತ ಕರ್ತವ್ಯ ಎಂದು ಸಂವಿಧಾನದ ಪುಟಗಳಲ್ಲಿ ಸೇರಿಸಲು ಪ್ರೇರಣೆ ನೀಡಿದ ದಿನ. ನೆಹರೂರಂತಹ ಪ್ರಧಾನಿಗಳಿಗೆ ರಾಷ್ಟ್ರ ನಿರ್ಮಾಣಕ್ಕೆ ವೈಜ್ಞಾನಿಕ ಹಾದಿಯ ಆಧಾರ ಒದಗಿಸಿದ ದಿನ.
ಮೂರನೆಯದಾಗಿ ಈ ದೇಶದ ಎಲ್ಲಾ ಮೂಲಭೂತ ಸೌಕರ್ಯಗಳನ್ನು ಬಳಸಿಕೊಂಡು ಪದವಿ, ಪಿಎಚ್‍ಡಿ ಪಡೆದು ಸಧೃಡ ಕಾಯ ಬೆಳೆಸಿಕೊಂಡು ಈ ದೇಶದಲ್ಲಿ ಏನೂ ಇಲ್ಲ, ಇಲ್ಲೇ ಇದ್ದರೆ ಏನೂ ಸಾಧನೆ ಮಾಡಲಿಕ್ಕಾಗುವುದಿಲ್ಲ ಎಂದು ಸಾಗರೋಲ್ಲಂಗನ ಮಾಡುವ ಸೋಕಾಲ್ಡ್ ಪ್ರತಿಭಾವಂತರಿಗೆ ನಾಚಿಸುವಂತಹ ದಿನ, ದೇಶ ಪ್ರೇಮ ಎಂದರೆ ಏನು ಎಂದು ತಿಳಿಸಿ ತೋರಿಸುವ ದಿನ, ರಾಮನ್ ಎಂದರೆ ಏನು ಮತ್ತು ಯಾರು ಎಂದು ತೋರಿಸುವ ದಿನ.
ನಾಲ್ಕನೆಯದಾಗಿ ಭಾರತದ ಬೆಳವಣಿಗೆ ವಿಜ್ಞಾನದ ಬೆಳವಣಿಗೆಯಲ್ಲಿ ಮತ್ತು ವೈಜ್ಞಾನಿಕ ಮನೋಧರ್ಮ ಬಿತ್ತುವಲ್ಲಿ ಇದೆ ಎಂದು ಎತ್ತಿ ತೋರಿಸುವ ದಿನ

ನಮ್ಮ ಪ್ರಜಾಸತ್ತೆ ಕಾಲ ಉರುಳಿದಂತೆ ಬಲವಾಗುತ್ತಾ ಬಂದರೂ ಅನಕ್ಷರತೆ, ಅನೈರ್ಮಲ್ಯ, ಅನಾರೋಗ್ಯ ಇತ್ಯಾದಿಗಳಿಂದ ಬಳಲಿ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾರದಂತಹ ಸ್ಥಿತಿ ಒಂದು ಕಡೆ. ಮಧ್ಯಮ ಶಿಕ್ಷಿತರಿಗೆ ಉದ್ಯೋಗ ಅವಕಾಶ ಸೃಷ್ಠಿಸಲಾರದಂತಹ ಸ್ಥಿತಿ ಇನ್ನೊಂದು ಕಡೆ, ಉತ್ತಮ ಶಿಕ್ಷಿತ ವರ್ಗ ಪಲಾಯನ ಮಾಡುವ ಪರಿಸ್ಥಿತಿ ಮತ್ತೊಂದು ಕಡೆ ಇದ್ದಾಗ ಬೆಳೆಯಲಿಕ್ಕೆ ಹಾಗೂ ಬಲಿಯಲಿಕ್ಕೆ ಸಾಧ್ಯವಾಗುವುದಾದರೂ ಹೇಗೆ? ರಾಷ್ಟ್ರ ಪ್ರೇಮ ಸೆಲೆಬ್ರಿಟಿ ಕಾರ್ಯಕ್ರಮಗಳ ಗುಣವಾಚಕದಲ್ಲಿ ಹೊರಹೊಮ್ಮುವ ನಾಲಗೆ ತುದಿಯಲ್ಲಿರದೆ ಕ್ರಿಯಾತ್ಮಕ ರೂಪದಲ್ಲಿ ಕೃದಯಾಂತರಾಳದಲ್ಲಿ ಅರಳಿದಾಗ ಮಾತ್ರ ಈ ಮೂರೂ ಸಮಸ್ಯೆಗಳಿಗೆ ಪರಿಹಾರ ಹುಡುಕಲು ಸಾಧ್ಯ. ಈ ಸಾದ್ಯತೆಗೆ ಪ್ರತಿಯೊಬ್ಬರೂ ವೈಜ್ಞಾನಿಕ ಮನೋಧರ್ಮ ಬೆಳಸಿಕೊಳ್ಳಲೇ ಬೇಕು ಅದನ್ನೇ ಸರ್.ಸಿ.ವಿ.ರಾಮನ್ ತಮ್ಮ ಪ್ರಯೋಗ ಹಾಗೂ ತದನಂತರದ ಚಟುವಟಿಕೆಗಳಲ್ಲಿ ಪ್ರತಿಪಾದಿಸಿದ್ದು. ಹಾಗಾಗಿಯೇ ಭಾರತ ಸರ್ಕಾರ ಕಲಿಕಾ ಹಂತಗಳಲ್ಲೇ ಮಕ್ಕಳಲ್ಲಿ ವೈಜ್ಞಾನಿಕ ಮನೋಧರ್ಮ ಬೆಳಸಿಕೊಳ್ಳಲು ನೆರವಾಗಲು ವಿಜ್ಞಾನ ಸಂಘ ಸಂಸ್ಥೆಗಳನ್ನು ನಿರ್ಮಿಸಲಿಕ್ಕೆ ಪ್ರೋತ್ಸಾಹ ನೀಡಿ ಅವುಗಳಿಗೆ ಧನ ಸಹಾಯ ಮಾಡಲು ಶುರುಮಾಡಿತು ಅದಸರ ಫಲವಾಗಿಯೇ ಅಖಿಲ ಭಾರತ ಜನವಿಜ್ಞಾನ ಸಂಘಟನೆಗಳ ಜಾಲ, ರಾಷ್ಟ್ರೀಯ ಸಾಕ್ಷರತಾ ಮಿಷನ್, ವಿಜ್ಞಾನ ಪರಿಷತ್ ಗಳು, ವಿಜ್ಞಾನ ಕೇಂದ್ರಗಳು ಹಾಗೂ ಶಾಲಾ-ಕಾಲೇಜುಗಳಲ್ಲಿ ವಿಜ್ಞಾನ ಸಂಘಗಳು ಹುಟ್ಟಿಕೊಂಡವು ಮಾತ್ರವಲ್ಲ ಪ್ರತೀ ಸಂಘ-ಸಂಸ್ಥೆಗಳು ಹಾಗೂ ಶಾಲಾ-ಕಾಲೇಜುಗಳು ವಿಜ್ಞಾನದ ಬಗ್ಗೆ ಹೆಚ್ಚು ಪ್ರಚಾರ ಮಾಡಬೇಕು ಅನ್ನುವ ಉದ್ದೇಶದಿಂದ ಸರ್.ಸಿ.ವಿ.ರಾಮನ್ನರ ಜನ್ಮ ಶತಾಬ್ಧಿ ವರ್ಷವಾದ 1988 ರಲ್ಲಿ ಅವರ ಮೂಲಕ ಈ ದೇಶಕ್ಕೆ ವಿಜ್ಞಾನ ಪ್ರಗತಿಯಲ್ಲಿ ನೊಬೆಲ್ ಪಾರಿತೋಷಕ ಪಡೆಯಲು ಅವರ ಬೆಳಕಿನ ಚದುರುವಿಕೆ ಸಂಶೋಧನೆ ನಿಖರತೆ ಪಡೆದು ಪ್ರಕಟಿಸಿದ ದಿ£ವಾದÀ(ನೊಬೆಲ್ ಪಾರಿತೋಷಕ ಪಡೆದ ದಿನ ಅಲ್ಲ ತಮ್ಮ ಸಂಶೋಧನೆಯನ್ನು ಪ್ರಕಟ ಮಾಡಿದ ದಿನ ಫೆ-28) ಫೆಬ್ರವರಿ 28ರಿಂದ ಮೊದಲ್ಗೊಂಡು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲು ತೀರ್ಮನಿಸಿ ಪ್ರಾರಂಬಿಸಲಾಯಿತು. ಅಂದಿನಿಂದ ಪ್ರತಿ ವರ್ಷದ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಆಚರಿಸಲಾಗುತ್ತಿದೆ ಆದರೆ ಅದರ ಪರಿಮಾಣ ಮಾತ್ರ ತೀರಾ ಶೋಚನೀಯ.
ರಾಷ್ಟ್ರೀಯ ವಿಜ್ಞಾನ ದಿನ ರಾಮನ್ನರನ್ನು ನೆನಪಿಸಿಕೊಳ್ಳದೆ ಅವರ ಪರಿಚಯ ಮಾಡಿಕೊಳ್ಳದೆ, ಅವರ ಸಂಶೋಧನೆನ್ನು ತಿಳಿದುಕೊಳ್ಳದೆ ಪೂರ್ಣವಾಗುವುದಿಲ್ಲ.
ಜಗತ್ತಿನ ಶ್ರೇಷ್ಠ ವಿಜ್ಞಾನಿಗಳ ಸಾಲಿನಲ್ಲಿ ಸೇರುವ ಕೆಲವೇ ವಿಜ್ಞಾನಿಗಳಲ್ಲಿ ಸಿ.ವಿ.ರಾಮನ್ ಒಬ್ಬರು. ಏಕೆಂದರೆ ತನ್ನ ದೇಶದ ಪ್ರಜೆಯಾಗಿಯೇ ಇದ್ದುಕೊಂಡು, ಅದೇ ದೇಶದ ಸಲಕರಣೆಗಳನ್ನು ಬಳಸಿಕೊಂಡು ಅದೇ ನೆಲದಲ್ಲಿ ಸಂಶೋಧನೆ ಮಾಡಿ ನೊಬೆಲ್ ಪಾರಿತೋಷಕ ಪಡೆದ ಮೊದಲ ಹಾಗೂ ಏಕೈಕ ಏಷ್ಯದ ವಿಜ್ಞಾನಿ ಇವರು, ಇವರ ನಂತರ ಹಲವಾರು ವಿಜ್ಞಾನಿಗಳು ಪಾರಿತೋಷಕಗಳಿಸಿದÀರೂ ಅವರು ವಿದೇಶಿ ಪ್ರಜೆಗಳಾಗಿ ಇಲ್ಲವೆ ವಿದೇಶಿ ನೆಲದಲ್ಲಿ ಜಂಟಿಯಾಗಿ ಸಂಶೋಧನೆ ಮಾಡಿ ಪಡೆದಿದ್ದಾರೆ.

ಈ ದೇಶ ಹಲವಾರು ವಿಜ್ಞಾನಿಗಳನ್ನ ಕಂಡಿದೆ ಆದರೆ ಸಮಾಜ ವಿಜ್ಞಾನಿಗಳು ಕೆಲವರು ಮಾತ್ರ ಅವರುಗಳಲ್ಲಿ ಸರ್.ಎಂ.ವಿಶ್ವೇಶ್ವರಯ್ಯ, ಆಚಾರ್ಯ ಪಿ.ಸಿ.ರೇ, ಮೇಘನಾದ ಸಹಾ ಹಾಗೂ ಸರ್.ಸಿ.ವಿ. ರಾಮನ್ ಈ ದೇಶದ ಆರ್ಥಿಕ, ಶೈಕ್ಷಣಿಕ ಹಾಗೂ ಕೈಗಾರಿಕಾಬ್ಯುದಯದ ಆಧಾರ ಸ್ಥಂಬಗಳು.
ಸಿ.ವಿ.ರಾಮನ್ ವಿಜ್ಞಾನಿಗಳಿಗೆ ಕೇವಲ ವಿಜ್ಞಾನಿಯಾಗಿರದೆ ಸಮಾಜ ವಿಜ್ಞಾನಿಗಳಾಗಿ ಎಂದು ಕರೆನೀಡಿ ಸಮಾಜದ ಅಬ್ಯುದಯಕ್ಕೆ ಸಂಶೋಧನಾ ಕೇಂದ್ರಗಳನ್ನು ತೆರೆಯುವಲ್ಲಿ ಬಹಳಷ್ಟು ಶ್ರಮಿಸಿದರು.
ಬಹುಮುಖ ವ್ಯಕ್ತಿತ್ವದ ಚಂದ್ರಶೇಖರ ವೆಂಕಟರಾಮನ್ 1888ರ ನವೆಂಬರ್ 7ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ ಅಧ್ಯಾಪಕರ ಮಗನಾಗಿ ಜನಿಸಿ ಹದಿನಾರು ವರ್ಷ ತುಂಬುವುದೊರಳಗಾಗಿ ಬಿ.ಎ.ಪದವಿಯನ್ನು ಪ್ರಥಮ ಸ್ಥಾನದಲ್ಲಿ ಪಡೆದರು, ಹತ್ತೊಂಬತ್ತು ವರ್ಷ ತುಂಬುವುದರೊಳಗೆ ಒಂದು ಸಂಶೋಧನಾ ಪ್ರಬಂಧ ಬರೆದು ಲಂಡನ್ನಿನ ಫಿಲಾಸಫಿಕಲ್ ಮ್ಯಾಗಝೈನ್‍ನಲ್ಲಿ ಪ್ರಕಟಿಸಿದರು, ಎಫ್.ಸಿ.ಎಸ್( ಫೈನಾನ್ಷಿಯಲ್ ಸಿವಿಲ್ ಸರ್ವಿಸ್) ಪರೀಕ್ಷೆಯನ್ನು ಪ್ರಥಮ ದರ್ಜೆಯಲ್ಲಿ ಪಾಸು ಮಾಡಿ ಇಪ್ಪತ್ತು ವರ್ಷ ತುಂಬುವುದರೊಳಗೆ(1905) ಭಾರತ ಸಕಾರದ ಹಿರಿಯ ಅಧಿಕಾರಿಯಾದರು. ತಮ್ಮ ಈ ಅತಿ ಒತ್ತಡ ಕೆಲಸದ ನಡುವೆಯೂ ಸಂಶೋಧನಾ ಕೆಲಸ ಮುಂದುವರೆಸಿದ ರಾಮನ್ (ನಮ್ಮಲ್ಲಿ ಅನೇಕ ಜನ ಕೇವಲ ಓದಲಿಕ್ಕೆ ಟೈಮೇ ಇಲ್ಲಾ ಆಂತಾರೆ) 1917ರಲ್ಲಿ ಕಲ್ಕತ್ತಾ ವಿಶ್ವ ವಿದ್ಯಾಲಯದ ಪ್ರಾಧ್ಯಾಪಕರಾಗಿ, 1924ರಲ್ಲಿ ಇಂಗ್ಲೇಂಡಿನ ರಾಯಲ್ ಸೊಸೈಟಿಯ ಫೆಲೋ ಆಗಿ ಆಯ್ಕೆಯಾದರು 1930ರಲ್ಲಿ ಬೆಳಕಿನ ಚದುರುವಿಕೆಯ ಕುರಿತು ನಡೆಸಿದ ಸಂಶೋಧನೆ ಜಗನ್ಮನ್ನಣೆ ಪಡೆದು ನೊಬೆಲ್ ಪಾರಿತೋಷಕಗಳಿಸಿತು ನಂತರ ರಾಯಲ್ ಸೊಸೈಟಿ ಸರ್ ಪದವಿ ಹಾಗೂ ಭಾರತ ಸರ್ಕಾರದ ಭಾರತ ರತ್ನ ಇವರ ಕೊರಳ ಬಳಸಿ ತಮ್ಮ ಗೌರವವನ್ನು ಹೆಚ್ಚಿಸಿಕೊಂಡವು. 1933ರಲ್ಲಿ ಬೆಂಗಳೂರಿಗೆ ಬಂದು ಇಂಡಿಯನ್ ಇನ್ಸಟಿಟ್ಯೂಟ್ ಆಫ್ ಸೈನ್ಸ್(ಭಾರತೀಯ ವಿಜ್ಞಾನ ಮಂದಿರ) ಟಾಟಾರ ನೆರವಿನೊಂದಿಗೆ ಸ್ಥಾಪಿಸಿ ತಾವು ಗತಿಸುವವರೆಗೂ(1970) ಅದರ ಅಭಿವೃದ್ಧಿಯತ್ತ ತಮ್ಮ ಕಾಲ ಸವೆಸಿದರು.
ಅಚಲ ವಿಶ್ವಾಸವುಳ್ಳ, ಅತ್ಯಂತ ಆತ್ಮವಿಶ್ವಾಸ ಬಲ ಹೊಂದಿದ್ದ ತ್ಯಾಗ ಮತ್ತು ಪರಿಶ್ರಮದ ಚೇತನ ರಾಮನ್ ಆಗಿದ್ದರು. ವಿದೇಶಕ್ಕೆ ಆಮಂತ್ರಣ ಬಂದಾಗ ತಾವು ಹೋಗಲೊಪ್ಪದೆ ಇಲ್ಲಿಯೇ ತಳವೂರಿ ಸಂಶೋಧನೆ ಆರಂಬಿಸಿದರು. ತಮ್ಮ ಸಂಶೋಧನೆಗೆ ವಿದೇಶಿಯರ ಅಂಗೀಕಾರದ ಅಗತ್ಯ ಇಲ್ಲ ಎಂದು ಖಚಿತ ನಿಲುವು ತಳೆಯುವ ಮೂಲಕ ತಮ್ಮ ದೇಶೀಯ ಸ್ವಾಭಿಮಾನವನ್ನು ಪ್ರದರ್ಶಿಸಿದರು ವಿದೇಶಕ್ಕೆ ಹಾರಲು ತುದಿಗಾಲಿನಲ್ಲಿ ನಿಂತಿರುವ ನಮ್ಮ ಈಗಿನ ಪ್ರತಿಭೆಗಳಿಗೂ ಇವರಿಗೂ ಎಷ್ಟು ಅಂತರ ಅಲ್ಲವೆ?
ರಾಮನ್ ಕಡಿಮೆ ಎಂದರೆ ನೂರುಬಾರಿ ನನಗೆ ನೊಬೆಲ್ ಬಹುಮಾನ ಬಂದೇ ಬರುತ್ತದೆ ಎಂದು ಜಗಜ್ಜಾಹೀರು ಪಡಿಸಿದ್ದರು ಆದರೆ ಅವರ ಮಾತಿಗೆ ಅವರ ಆಪ್ತರು ಅಪಹಾಸ್ಯ ಮಾಡುತ್ತಿದ್ದರು ಆದರೂ ಅದನ್ನು ನಿರೂಪಿಸಲು ಹೊರಟಾಗ ನೊಬೆಲ್ ಬಹುಮಾನ ತರುತ್ತೇನೆ ಎಂದು ಹೇಳಿಯೇ ಹಡಗಿನಲ್ಲಿ ಪ್ರಯಾಣ ಬೆಳೆಸಿದ್ದರು ಅಷ್ಟು ಆತ್ಮ ವಿಶ್ವಾಸವಿತ್ತು ಅವರಿಗೆ ಅವರ ಸಂಶೋಧನೆಯ ಮೇಲೆ ಆದರೆ ಆ ಪಾರಿತೋಷಕವನ್ನು ಬ್ರಿಟೀಷ್ ಧ್ವಜದಡಿಯಲ್ಲಿ ಪಡೆಯಬೇಕಾಗಿ ಬಂದಂತಹ ಅನಿವಾರ್ಯತೆಗೆ ಅವರಲ್ಲಿ ವಿಷಾದ ಕೊನೆಯವರೆಗೂ ಇತ್ತು ಇದು ಅವರ ವೈಯುಕ್ತಿಕ ವಿಜಯದಲ್ಲೂ ದೇಶಕ್ಕೊಂದು ಸ್ಥಾನವಿಲ್ಲದ ಬಗ್ಗೆ ಕೊರಗು ರಾಮನ್ನರ ವ್ಯಕ್ತಿತ್ವಕ್ಕೆ ಹಿಡಿದ ಕನ್ನಡಿ.
ರಾಮನ್ ಪ್ರಯೋಗಗಳಿಗೆ ಬಳಕೆ ಮಾಡಿದ ಉಪಕರಣಗಳನ್ನು ಬಹುತೇಕ ತಾವೇ ರೂಪಿಸಿಕೊಳ್ಳುತ್ತಿದ್ದರು ಹಾಗೂ ಸರಳವಾಗಿಯೂ ಇರುತ್ತಿತ್ತು ಅದರ ಬೆಲೆ ಕೇವಲ 150ರೂಗಳು ಮಾತ್ರ ಅಲ್ಲದೆ ಅವರೆಂದೂ ತಮ್ಮ ಸಂಶೋಧನೆಗಳ ಮೇಲೆ ಪೇಟೆಂಟ್ ಪಡೆಯಲೇ ಇಲ್ಲ. ಅತ್ಯಂತ ನಿಷ್ಠುರವಾದಿಯಾಗಿದ್ದ ರಾಮನ್ ಒಮ್ಮೆ ಅಖಿಲ ಭಾರತ ವಿಜ್ಞಾನ ಕಾಂಗ್ರೆಸ್ ಅನ್ನು ಉದ್ಘಾಟಿಸಲು ಪ್ರಧಾನ ಮಂತ್ರಿಯನ್ನು ಆಹ್ವಾನಿಸಬೇಕೆಂದು ಬೇರೆ ವಿಜ್ಞಾನಿಗಳು ಅಭಿಪ್ರಾಯ ಪಟ್ಟಾಗ ಅದನ್ನು ಬಲವಾಗಿ ಖಂಡಿಸಿ ವಿರೋಧಿಸಿದಾಗ ಅವರ ಮಾತಿಗೆ ಬೆಲೆಸಿಗದಿದ್ದಾಗ ವಿಜ್ಞಾನ ಕಾಂಗ್ರೇಸ್‍ಗಳಿಗೆ ಹೋಗುವುದನ್ನೇ ಬಿಟ್ಟರು ರಾಮನ್ನರಿಲ್ಲದ ವಿಜ್ಞಾನ ಕಾಂಗ್ರೇಸ್ ಇಂದಿನ ಸಾಹಿತಿಗಳಿಲ್ಲದ ಸಾಹಿತ್ಯ ಸಮ್ಮೇಳನದಂತಾಯಿತು.
ರಾಮನ್ನರಿಗೆ ಜಗನ್ಮನ್ನಣೆ ತಂದು ಕೊಟ್ಟ ಸಂಶೋಧನೆಯ ಸಾರವೇನು?
ಬೆಳಗಿನ ಬಿಸಿಲು ಕೋಲಿನಲ್ಲಿ ಧೂಳಿನ ಕಣಗಳು ಮಿನುಗುತ್ತಾ ತೇಲಾಡುತ್ತಿರುವುದನ್ನು ಕಾಣುತ್ತೇವೆ, ಅಂದರೆ ಆ ಧೂಳೀನ ಕಣಗಳು ಬೆಳಕನ್ನು ಚದುರಿಸುತ್ತವೆ ಎಂದಾಯಿತು ಹಾಗೆ ಚದುರಿದ ಬೆಳಕು ನಮ್ಮ ಕಣ್ಣನ್ನು ತಲುಪುವುದರಿಂದ ಕಣಗಳು ನಮಗೆ ಕಾಣಿಸುತ್ತವೆ. ನಮ್ಮ ವಾತಾವರಣದಲ್ಲಿ ಧೂಳಿನ ಕಣಗಳು ಸೂಕ್ಷ್ಮಾತಿ ಸೂಕ್ಷ್ಮ ಆಮ್ಲಜನಕ, ಸಾರಜನಕದ ಕಣಗಳು ಸೂರ್ಯನ ಕಿರಣವನ್ನು ಚದುರಿಸಬಲ್ಲವು ಸೂರ್ಯನ ಬಿಳಿ ಬಣ್ಣ ನೀಲಿಯಿಂದ ಕೆಂಪಿನವರೆಗೆ ಏಳು ಬಣ್ಣಗಳನ್ನು ತನ್ನೊಳಗೆ ಹುದುಗಿಸಿಕೊಂಡಿರುತ್ತದೆ ಅದರಲ್ಲಿನ ನೀಲಿ ಹಾಗೂ ನೇರಳೆ ಬಣ್ಣಗಳನ್ನು ಧೂಳಿನ ಕಣಗಳು ಹೆಚ್ಚಾಗಿ ಚದುರಿಸುತ್ತವೆ, ಕಿತ್ತಳೆ ಹಾಗೂ ಕೆಂಪು ಬಣ್ಣಗಳನ್ನು ಕಡಿಮೆ ಚದುರಿಸುತ್ತವೆ, ನೀಲಿ ಬಣ್ಣ ಹೆಚ್ಚು ಚದುರುವುದರಿಂದ ಆಕಾಶ ನೀಲಿಯಾಗಿ ಕಾಣುತ್ತದೆ. ಬೆಳಕು ಹೆಚ್ಚಾಗಿ ಚದುರಲಿ ಅಥವ ಕಡಿಮೆ ಚದುರಲಿ ಈ ಎರೆಡೂ ಸಂದರ್ಬಗಳಲ್ಲಿ ಚದುರಿದ ಬೆಳಕಿನ ಬಣ್ಣ ಬದಲಾಯಿಸುವುದಿಲ್ಲ ಚದುರಿ ಬಂದ ಬೆಳಕು ಅದೇ ಬಣ್ಣದ್ದಾಗಿರುತ್ತದೆ ಈ ಬಗೆಯ ಚದುರುವಿಕೆಯನ್ನು ಬ್ರಟಿಷ್ ವಿಜ್ಞಾನಿ ರಾಲೆ ಕಂಡು ಹಿಡಿದ ಅದಕ್ಕಾಗಿ ಇದಕ್ಕೆ ರಾಲೆ ಚದುರಿಕೆ (ರಾಲೆ ಎಫೆಕ್ಟ್) ಎಂದು ಹೆಸರು.

ಅನಿಲದ ಅಥವ ದ್ರಾವಣದ ಅಣುಗಳ ಮೇಲೆ ಬೀಳುವ ಬೆಳಕಿನ ಬಹುಭಾಗ ರಾಲೆ ಚದುರಿಕೆಗೆ ಒಳಗಾಗುವುದಾದರೂ ಅದರ ಸ್ವಲ್ಪ ಭಾಗ ಮಾತ್ರ ಬೇರೊಂದು ಬಗೆಯ ಚದುರಿಕೆಗೆ ಒಳಗಾಗುತ್ತದೆ ಆಗ ಚದುರಿದ ಬೆಳಕು ಬಣ್ಣವನ್ನು ಬದಲಾಯಿಸುತ್ತದೆ ಆ ಬೆಳಕು ಮಸುಕಾಗಿರುವುದರಿಂದ ಕಾಣಿಸುವುದಿಲ್ಲ ಅದಕ್ಕೆ ತಕ್ಕ ಸಲಕರಣೆಗಳನ್ನು ತಯಾರಿಸಿ ಮೊದಲ ಬಾರಿಗೆ 1928ರಲ್ಲಿ ರಾಮನ್ ತೋರಿಸಿದರು ಈ ಬಗೆಯ ಚದುರುವಿಕೆಗೆ ರಾಮನ್ ಚದುರಿಕೆ, ಚದುರಿಕೆಯ ಪರಿಣಾಮವಾಗಿ ಬಣ್ಣ ಬದಲಾಯಿಸುವುದಕ್ಕೆ ರಾಮನ್ ಪರಿಣಾಮ(ರಾಮನ್ ಎಫೆಕ್ಟ್) ಎಂದು ಹೆಸರು ಬಂತು. ಈ ಸಂಶೋಧನೆ ಬೆಳಕಿನ ಕಿರಣಗಳ ಚಲನೆಗೆ ಕ್ರಿಶ್ಚಿಯನ್ ಹೈಗೆನ್ಸ್, ನ್ಯೂಟನ್ ಮತ್ತು ಮ್ಯಾಕ್ಸ್ ಫ್ಲಾಂಕರ ನಡುವೆ ತಿಕ್ಕಾಟ ನಡೆಯುತ್ತಿದ್ದಾಗ ಸಹಾಯಕ್ಕೆ ಬಂದಿತು. ಅದೇನೆಂದರೆ ಬೆಳಕಿನ ಕಿರಣ ಎಂಬುದು ಕಣಗಳು ವೇಗವಾಗಿ ಚಲಿಸುತ್ತಿರುವ ಪ್ರವಾಹ ಎಂದು ನ್ಯೂಟನ್ ಅಭಿಪ್ರಾಯ ಪಟ್ಟ ಆದರೆ ಆತನ ಸಮಕಾಲೀನ ವಿಜ್ಞಾನಿ ಹೈಗೆನ್ಸ್ ಬೆಳಕು ಅಲೆರೂಪದ ಪ್ರವಾಹ ಎಂದ ಬಹು ಕಾಲ ಕಣ ಮತ್ತು ಅಲೆ ಸಿದ್ಧಾಂತಗಳ ನಡುವೆ ಸಂಘರ್ಷ ಏರ್ಪಟ್ಟು 19ನೇ ಶತಮಾನದಂಚಿನ ವೇಳೆಗೆ ವಿಜ್ಞಾನಿಗಳು ಹೈಗೆನ್ಸ್‍ನ ಅಭಿಪ್ರಾಯವನ್ನು ಎತ್ತಿ ಹಿಡಿದರು.
ಒಂದು ಕೊಳಕ್ಕೆ ಕಲ್ಲೆಸೆದರೆ ಅಲೆಗಳು ಉಂಟಾಗಿ ಚಲಿಸಲಾರಂಬಿಸುತ್ತದೆ ಆ ಚಲನಾ ಹಾದಿಗೆ ಏನಾದರು ಅಡ್ಡ ಬಂದರೆ ಆ ಅಡಚಣೆಯ ಎರೆಡೂ ಬದಿಗಳಲ್ಲಿ ಅಲೆ ಬಾಗಿ ಮುಂದುವರೆಯುವುದನ್ನು ನೋಡಬಹುದು ಹಾಗೆಯೇ ಶಬ್ದದ ಅಲೆಗಳೂ ಕೂಡ ಅಡಚಣೆಯ ಅಂಚಿನಲ್ಲಿ ಬಾಗಿ ಮುಂದುವರೆಯುವುದರಿಂದ ಗೋಡೆ ಆಚೆ ಮಾತನಾಡುವವರ ಧ್ವನಿ ನಮಗೆ ಕೇಳಿಸುವುದು. ಬೆಳಕೂ ಕೂಡ ಈ ಮಾದರಿಯ ಲಕ್ಷಣವನ್ನು ಪ್ರಯೋಗ ಮಾಡಿದಾಗ ತೋರಿ ಬಂದದ್ದರಿಂದ ಅಲೆ ಸಿದ್ಧಾಂತಕ್ಕೆ ಮನ್ನಣೆ ನೀಡಿದರು.
ಆದರೆ ಜರ್ಮನ್ ಭೌತವಿಜ್ಞಾನಿ ಮ್ಯಾಕ್ಸ್ ಪ್ಲಾಂಕ್ ಈ ಎರೆಡೂ ಸಿದ್ಧಾಂತಗಳು ಸರಿ ಆದರೆ ಪೂರ್ಣ ಸತ್ಯವಲ್ಲ ಎಂದು ಅಭಿಪ್ರಾಯ ಪಟ್ಟರು. ಸೂರ್ಯನಿಂದ ಶಕ್ತಿ ಶಾಖ ಹಾಗೂ ಬೆಳಕಿನ ರೂಪದಲ್ಲಿ ಹೊರಸೂಸುತ್ತದೆ ಆದರೆ ಈ ಶಕ್ತಿ ಅವಿಚ್ಛಿನ್ನವಾಗಿ ಹೊರಸೂಸದೆ ಬಿಡಿ ಬಿಡಿಯಾದ ಪೊಟ್ಟಣಗಳಾಗಿ ( ಬೆಂಕಿ ಪೊಟ್ಟಣದ ಬಂಡಲಿನಿಂದ ಬೆಂಕಿ ಪೊಟ್ಟಣಗಳು ಹೊರತೆಗೆದಂತೆ) ಹೊರಸೂಸುವುದೆಂದು ಪ್ರಾಯೋಗಿಕಾವಾಗಿ ತಿಳಿಸಿದರು ಶಕ್ತಿಯ ಅಂತಹ ಪೊಟ್ಟಣಗಳಿಗೆ ಕ್ವಾಂಟಮ್ ಎಂದು ಕರೆದರು. ಆದರೆ ಈ ಸಿದ್ದಾಂತವನ್ನು ಸಾಬೀತುಮಾಡಲು ಪರದಾಡುತ್ತಿದ್ದಾಗ ರಾಮನ್ ಪರಿಣಾಮ ಸಹಾಯಕ್ಕೆ ಬಂತು. ಅಲೆ ರೂಪದ ಬೆಳಕು ಕ್ವಾಂಟಮ್ ರೂಪದಲ್ಲಿ ಬರಲು ಬೆಳಕಿನ ರಶ್ಮಿ ಅಣುಗಳ ಮೇಲೆ ಚದುರಿದಾಗ ಬಣ್ಣ ಬದಲಾಯಿಸುವದೇ ಕಾರಣ ಎಂದು ಬಯಲಾಯಿತು.
ಈ ಮೂರೂ ಸಿದ್ಧಾಂತಗಳು ಒಂದಕ್ಕೊಂದು ಪೂರಕ ಎಂದು ತೀರ್ಮಾನಿಸಿ ಅಂತಿಮವಾಗಿ ಕ್ವಾಂಟಮ್ ಸಿದ್ಧಾಂತ ಬೆಳಕು ಕಂಡು ಭೌತ ಪ್ರಪಂಚಕ್ಕೆ ಕ್ರಾಂತಿಕಾರಿ ತಿರುವು ಕೊಡಲು ರಾಮನ್ ಪರಿಣಾಮ ಮಹತ್ತರ ಪಾತ್ರವಹಿಸಿತು.

ರಾಮನ್ನರ ಸಂಶೋಧನೆ ಪ್ರಕಟಗೊಂಡ ಹತ್ತು ವರ್ಷಗಳಲ್ಲಿ ರಾಮನ್ನರ ಪರಿಣಾಮದ ಮೇಲೆ ಎರೆಡು ಸಾವಿರ ಸಂಶೋಧನೆಗಳು ಪ್ರಕಟಗೊಂಡವು ರಾಮನ್ ಗತಿಸುವ ವೇಳೆಗೆ ಆ ಸಂಖ್ಯೆ ಸಹಜವಾಗಿಯೇ ಹತ್ತು ಸಾವಿರ ದಾಟಿತ್ತು. ವಿಜ್ಞಾನ ಕ್ಷೇತ್ರಕ್ಕೆ ವಿಜ್ಞಾನಿಯೊಬ್ಬನ ಕೊಡುಗೆಯ ವಿಷಯ ಬಂದಾಗ ಆತನ ಸಂಶೋಧನೆ ಸೋದರ ವಿಜ್ಞಾನಿಗಳ ಮೇಲೆ ಹಾಗೂ ಪ್ರಪಂಚದ ಒಟ್ಟು ವಿಜ್ಞಾನದ ಬೆಳವಣಿಗೆಯ ಮೇಲೆ ಎಷ್ಟರ ಮಟ್ಟಿಗೆ ಪ್ರಭಾವ ಬೀರಿರುತ್ತದೆ ಎನ್ನುವುದಾಗಿರುತ್ತದೆ ಈ ದಿಸೆಯಲ್ಲಿ ರಾಮನ್ನರ ಕೊಡುಗೆ ರಾಮನ್ ಪರಿಣಾಮದಷ್ಟೇ ದೊಡ್ಡದು.

ಅರಿಸ್ಟಾಟಲ್ ಕಾಲದ ವಿಜ್ಞಾನಿಗಳ ಧೋರಣೆಗಳಿಗೂ ಇಂದಿನ ಕಾಲದ ವಿಜ್ಞಾನಿಗಳ ಧೋರಣೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ನಿಸರ್ಗದ ಗುರಿ ನಿಸರ್ಗದ ವಿದ್ಯಮಾನಗಳನ್ನು ಗುರುತಿಸಿ, ಅರಿತು ಅರ್ಥೈಸುವ ಆನಂದದಾಯಕ ಚಟುವಟಿಕೆ. ಅಂದಿನ ವಿಜ್ಞಾನಿಗಳನ್ನು ನೈಸರ್ಗಿಕ ವಿಜ್ಞಾನಿಗಳು ಹಾಗೂ ಸೈದ್ಧಾಂತಿಕ ವಿಜ್ಞಾನಿಗಳು ಆಗಿದ್ದರು ಇಂದಿನ ವಿಜ್ಞಾನಿಗಳ ಸಂಶೋಧನೆಗಳು ಮಿಲಿಟರಿ ಹಾಗೂ ವೈಯುಕ್ತಿಕ ಲಾಭಕ್ಕಾಗಿ ಮೀಸಲಾಗಿದೆ ಹಿಂದಿನ ವಿಜ್ಞಾನಿಗಳಿಗೆ ಇದ್ದ ಸ್ವಾತಂತ್ರ್ಯ, ಸರಳತೆ, ಆನಂದ ಮಾಯವಾಗಿ ವಾಣಿಜ್ಯೀಕರಣಗೊಂಡಿದ್ದಾರೆ ಈ ದಿಸೆಯಲ್ಲಿ ಪರಿಶೀಲಿಸಿದಾಗ ಸಿ.ವಿ.ರಾಮನ್ ಈ ಭೂಮಿ ಮೇಲಿನ ಕಟ್ಟ ಕಡೆಯ ನೈಸರ್ಗಿಕ ತತ್ವಜ್ಞಾನಿ ಎಂದು ಬಣ್ಣಿಸಲಾಗಿದೆ.
ಜಗತ್ತು ವಾಣಿಜ್ಯೀಕರಣಗೊಳ್ಳುತ್ತಿರುವ ಮತ್ತು ಮಿಲಿಟರೀಕರಣಗೊಳ್ಳುತ್ತಿರುವ ಹಿನ್ನಲೆಯಲ್ಲಿ ರಾಮನ್ನರು ಪ್ರತಿಪಾದಿಸಿದ ಧೋರಣೆ ಎಷ್ಟು ಅಮೂಲ್ಯ ಹಾಗೂ ಮೌಲಿಕವಾದುದು ಎಂದು ಗುರುತಿಸಬೇಕಾಗಿದೆ ಹಾಗೂ ಜಾತಿ ಧೃವೀಕರಣಗೊಂಡು ಗಲ್ಲಿ ಗಲ್ಲಿಗಳಲ್ಲಿ ಏಳುತ್ತಿರುವ ವ್ಯಾಪಾರಿ ದೇವಸ್ಥಾನಗಳ ಜಾಗದಲ್ಲಿ ವೈಜ್ಞಾನಿಕ ಸಂಶೋಧನೆಯ ವಿಜ್ಞಾನ ಮಂದಿರಗಳು ಬೆಳೆದು ಬರಲಿ ಎಂಬುದೇ ನಿಜವಾದ ಭಾರತೀಯರ ಆಶಯವಾಗಲಿ ಇದೇ ರಾಮನ್ನರಿಗೆ ಕೊಡುವ ಗೌರವ.





