Friday, September 21, 2018

*🌻ದಿನಕ್ಕೊಂದು ಕಥೆ🌻                                                  ತಾನೊಬ್ಬನೇ ತಿನ್ನಬೇಕೆನ್ನುವುದು ನರಕವಾದರೆ, ಸ್ವರ್ಗ ಯಾವುದು?*

ಸ್ವರ್ಗ ನರಕಗಳ ಕತೆಗಳನ್ನು ಹೇಳುವವರನ್ನು ನೀವು ಅವುಗಳನ್ನು ನೋಡಿದ್ದೀರಾ ಎಂದು ಕೇಳಿ ನೋಡಿ. ಬೇರೆಯವರು ತಲೆ ಆಡಿಸುವಂತೆ ಕತೆ ಹೇಳುವ ಅವರು ಇಲ್ಲವೆಂದು ತಲೆ ಅಲ್ಲಾಡಿಸುತ್ತಾರೆ. ಕತೆ ಹೇಳುವವರು ಯಾರೂ ಅವುಗಳನ್ನು ಹೋಗಿ ನೋಡಿಲ್ಲ. ಹೋಗಿದ್ದಿದ್ದರೆ ಕತೆ ಹೇಳಲು ಅವರು ಇಲ್ಲಿ ಇರುತ್ತಿರಲಿಲ್ಲ. ನಮಗೂ ಅವರಿಗೂ ಗೊತ್ತಿರುವುದೆಲ್ಲ ಕಲ್ಪನೆಯ ಕತೆಗಳು ಮಾತ್ರ! ಈಗ ಅಂತಹದ್ದೇ ಒಂದು ಅರ್ಥಪೂರ್ಣ ಕಾಲ್ಪನಿಕ ಕತೆ ಇಲ್ಲಿದೆ!

ಒಮ್ಮೆ ವಿದ್ವಜ್ಜನರ ಸಮಿತಿಯಲ್ಲಿ ಸ್ವರ್ಗ–ನರಕಗಳು ಎಂದರೆ ಏನೆಂದು ಚರ್ಚೆ ನಡೆಯಿತು. ಜನ ಎಲ್ಲಿ ನರಳುತ್ತಾರೋ ಅದು ನರಕವೆಂದೂ, ಜನ ಎಲ್ಲಿ ಆನಂದದಿಂದ ಇರುತ್ತಾರೋ ಅದು ಸ್ವರ್ಗವೆಂದೂ ಸಮಿತಿ ಒಮ್ಮತದಿಂದ ಒಪ್ಪಿಕೊಂಡರಂತೆ. ಸ್ವರ್ಗ–ನರಕಗಳನ್ನು ನೋಡಿ ಮಾಡುವ ಅಪರೂಪದ ಅವಕಾಶ ಅವರಿಗೆ ಕಲ್ಪಿಸಿಕೊಡಲಾಯಿತಂತೆ!

ಅವರ ಮೊದಲ ಭೇಟಿ ನರಕಕ್ಕೆ. ಅವರಿಗೆ ಆಶ್ಚರ್ಯ ಉಂಟುಮಾಡಿದ ವಿಷಯವೆಂದರೆ ಅದಕ್ಕೆ ನರಕವೆಂಬ ಹೆಸರಿದ್ದರೂ, ಅದೂ ಶ್ರೀಮಂತ ಪ್ರದೇಶವಾಗಿತ್ತು. ಊಟದ ಮನೆಯಲ್ಲಿ ಯಥೇಚ್ಚ ತಿಂಡಿ–ತಿನಿಸುಗಳಿದ್ದವು. ಆದರೆ ಅಲ್ಲಿದ್ದ ಜನ ಮಾತ್ರ ಹಸಿವೆಯಿಂದ ಸೊರಗಿದ್ದರು. ಯಾರ ಮುಖದ ಮೇಲೂ ಕಳೆಯೇ ಇಲ್ಲ. ಸಿಟ್ಟು ಸೆಡವು ಎದ್ದು ತೋರುತ್ತಿದ್ದವು. ಪರಸ್ಪರ ಜಗಳವಾಡುತ್ತಿದ್ದರು. ಒಬ್ಬರನ್ನೊಬ್ಬರು ಬೈದುಕೊಳ್ಳುತ್ತಿದ್ದರು. ಯಾರೂ ಊಟ ಮಾಡುತ್ತಿರಲಿಲ್ಲ. ಇದು ಹೀಗೇಕೆಂದು ಸಮಿತಿಯವರು ಗಮನಿಸಿದಾಗ, ಗಮನಕ್ಕೆ ಬಂದದ್ದೇನೆಂದರೆ ಅಲ್ಲಿದ್ದ ಜನರಿಗೆಲ್ಲ ಒಂದು ದೈಹಿಕ ದೌರ್ಬಲ್ಯವಿತ್ತು. ಎಲ್ಲರ ತೋಳುಗಳೂ ಭುಜದಿಂದ ಕೈವರೆಗೆ ನೇರವಾಗಿದ್ದವು. ಮೊಣಕೈ ಮಡಿಸಲಾಗುತ್ತಿರಲಿಲ್ಲ. ಹೀಗಾಗಿ ಕೈತುಂಬ ತಿನಿಸು ತೆಗೆದುಕೊಂಡರೂ ಅದನ್ನು ಬಾಯಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಕಷ್ಟಪಟ್ಟು ಬಾಯ ಬಳಿ ಕೈ ಬಂದರೂ ಒಂದೆರಡು ಅಗಳು ಬಾಯಿ ಸೇರುತ್ತಿತ್ತು. ಉಳಿದದ್ದೆಲ್ಲ ನೆಲದ ಮೇಲೆ ಚೆಲ್ಲಿಹೋಗುತ್ತಿತ್ತು. ಹೊಟ್ಟೆ ತುಂಬುವಷ್ಟು ತಿಂಡಿ–ತಿನಿಸು ಇದ್ದರೂ ತಿನ್ನಲಾಗುತ್ತಿರಲಿಲ್ಲ. ಎಲ್ಲರೂ ಹಸಿದುಕೊಂಡೇ ಊಟದ ಮನೆಯಿಂದ ಹೊರಗೆ ಹೋಗುತ್ತಿದ್ದರು. ‘ತಿನ್ನಲು ಬೇಕಾದಷ್ಟಿದ್ದರೂ ಇವರಿಗೆ ತಿನ್ನಲಾಗುತ್ತಿಲ್ಲವಲ್ಲ. ನಿರ್ದಯ ಅನ್ಯಾಯ’ ಎಂದು ಸಮಿತಿಯವರಿಗೆ ಬಹಳ ಬೇಸರವಾಯಿತು.

ಸಮಿತಿಯವರು ಅಲ್ಲಿಂದ ಸ್ವರ್ಗಕ್ಕೆ ಹೋದರು. ನರಕಕ್ಕೂ ಸ್ವರ್ಗಕ್ಕೂ ಅಂತಹ ವ್ಯಾತ್ಯಾಸವೇನೂ ಕಾಣಲಿಲ್ಲ. ಎರಡೂ ಶ್ರೀಮಂತ ಸುಂದರ ಪ್ರದೇಶಗಳೇ! ಆದರೆ ಸಮಿತಿಯವರು ಎಲ್ಲೂ ನಿಲ್ಲದೆ ನೇರ ಊಟದ ಮನೆಗೆ ಹೋದರು. ಅಲ್ಲಿ ಕೂಡಾ ಊಟದ ಮೇಜಿನ ತುಂಬಾ ತಿಂಡಿ ತಿನಿಸುಗಳಿದ್ದವು. ಆದರೆ ಜನ ಅಲ್ಲಿ ಆನಂದವಾಗಿದ್ದರು. ಪರಸ್ಪರ ಸ್ನೇಹದ ಪ್ರೀತಿಯ ಮಾತುಗಳನ್ನಾಡುತ್ತ ಊಟ ಮಾಡುತ್ತಿದ್ದರು. ಇಲ್ಲಿಯೂ ಸಮಿತಿಯವರಿಗೆ ಆಶ್ಚರ್ಯ ಕಾದಿತ್ತು. ಇಲ್ಲಿನ ಮೊಣಕೈ ಬಗ್ಗುತ್ತಿರಲಿಲ್ಲ. ನೇರವಾಗಿ ತಿಂಡಿಯನ್ನು ಬಾಯಲಿಟ್ಟುಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಯಾರೂ ಹಸಿವೆಯಿಂದ ಬಳಲುತ್ತಿರಲಿಲ್ಲ. ಎಲ್ಲರೂ ಆನಂದವಾಗಿ ಊಟ ಮಾಡುತ್ತಿದ್ದರು. ತಮ್ಮ ಕೈ ಬಳಸಿ ತಾವೇ ತಿನ್ನಲು ಸಾಧ್ಯವಿಲ್ಲವಾದುದರಿಂದ ಅವರು ತಮ್ಮ ಕೈ ಬಳಸಿ ಮತ್ತೊಬ್ಬರಿಗೆ ತಿನ್ನಿಸುತ್ತಿದ್ದರು. ತಿನ್ನಿಸುವಾಗ ಒಳ್ಳೆಯ ಮಾತಗಳನ್ನಾಡುತ್ತಿದ್ದರು. ಉಪಚಾರ ಮಾಡುತ್ತಿದ್ದರು. ಊಟದ ಮನೆಯಲ್ಲಿ ಆನಂದದ ವಾತಾವರಣವಿತ್ತು!

ಸಮಿತಿಯವರು ಹಿಂತಿರುಗಿ ಬಂದು ಒಂದು ಒಳ್ಳೆಯ ವರದಿ ಸಲ್ಲಿಸಿದರು. ಅದೇನೆಂದರೆ ಸ್ವರ್ಗ–ನರಕಗಳಿಗೆ ಬಹಳ ವ್ಯತ್ಯಾಸವೇನಿಲ್ಲ. ತಾನೊಬ್ಬನೇ ತಿನ್ನಬೇಕು. ಬೇರೆಯವರ ಎನಗೇಕೆ ಎಂದು ಪ್ರಯತ್ನಿಸುವ ಜನರಿದ್ದರೆ ಅದು ನರಕ! ಇತರರಿಗೆ ತಿನಿಸಿ ಸಂತೋಷ ಪಡುವುದಾದರೆ, ಅವರು ನಮಗೂ ತಿನಿಸುತ್ತಾರೆ ಎಂದು ಅರಿತು ಬಾಳುವ ಜನರಿದ್ದರೆ ಅದು ಸ್ವರ್ಗ! ಕತೆ ಕಾಲ್ಪನಿಕವಿರಬಹುದು! ಆದರೆ ಅದರ ಹಿಂದಿನ ತತ್ವ ಮಾತ್ರ ಸತ್ವಪೂರ್ಣ ಅಲ್ಲವೇ ? ನಾವಿರುವಲ್ಲಿಯೇ ಸ್ವರ್ಗ ನರಕಗಳನ್ನು ಸೃಷ್ಠಿಸಿಕೊಳ್ಳುವ ಹಠ ಯೋಗ ನಾವು ಬೆಳೆಸಿಕೊಳ್ಳುವುದು ನಮಗೆ ಸಾಧ್ಯವಲ್ಲವೇ?
ಕೃಪೆ ಷಡಕ್ಷರಿ.ವಿಶ್ವ ವಾಣಿ.

Tuesday, September 4, 2018

*🌻🌻ದಿನಕ್ಕೊಂದು ಕಥೆ🌻🌻*

ರವೀಂದ್ರನಾಥ್ ಠಾಕೂರ್ ಅವರನ್ನು ಋಷಿ ಅಂಥ ಕರೆದಿದ್ದೇವೆ. ಆತ ಮಹಾನ್ ವಿದ್ವಾಂಸ. ಒಮ್ಮೆ ಶಾಂತಿನಿಕೇತನದಲ್ಲಿ ಕುಳಿತಿರುತ್ತಾರೆ. ಶಾಂತಿನಿಕೇತನ ಹೆಸರು ಎಷ್ಟು ಚೆಂದವಾಗಿದೆ. ಶಾಂತಿನಿಕೇತನದಲ್ಲಿ ಗಿಡಗಳು ಹಸಿರಿನಿಂದ ತುಂಬಿವೆ. ನೀರಿನ ಸಣ್ಣಸಣ್ಣ ಝರಿಗಳಿವೆ. ಏನು ಸುಂದರ ವಾತಾವರಣ! ಆಕಾಶದಲ್ಲಿ ಹಕ್ಕಿಗಳು ದೂರಕ್ಕೆ ಹಾರಿ ಹಾರಿ ಮತ್ತೆ ಮರಗಳಿಗೆ ಬಂದು ಕೂರುವ ಸಮಯ. ಸೂರ್ಯ ಕೆಳಗಿಳಿಯುತ್ತಿದ್ದಾನೆ. ಮೇಘಗಳಿವೆ. ಸೂರ್ಯನ ಹೊನ್ನಿನ ಕಿರಣಗಳು ಬೆಳಗಿವೆ, ಹಕ್ಕಿಗಳ ಸುಂದರ ಧ್ವನಿ ಇದೆ. ಏನು ಸುಂದರ ವಾತಾವರಣ. ಅದನ್ನು ಹಣ ಕೊಟ್ಟು ಪಡೆಯೋಕೆ ಆಗುವುದಿಲ್ಲ, ಹೃದಯ ಕೊಟ್ಟು ಪಡೆಯಬೇಕು.

ರವೀಂದ್ರನಾಥ್ ಠಾಕೂರ್ ಕುಳಿತಿರುವ ಆ ಸಮಯದಲ್ಲಿ ಅಲ್ಲಿಗೆ ಅವರ ಗೆಳೆಯ ಬರುತ್ತಾನೆ. "ರವೀಂದ್ರರೇ,ನೀವು ಶ್ರೇಷ್ಠ ಜ್ಞಾನಿಗಳು, ಕವಿಗಳು, ಎಂಥ ಸಾಧನೆ ಮಾಡಿದ್ದೀರಿ! ಆದರೆ ನಿಮ್ಮನ್ನು ಜನ ಎಷ್ಟು ಟೀಕೆ ಮಾಡುತ್ತಿದ್ದಾರೆ. ಪತ್ರಿಕೆಗಳಲೆಲ್ಲ ಅವಹೇಳನ ಮಾಡುತ್ತಿದ್ದಾರೆ. ನೀವು ನೋಡಿದಿರೇನು?"

ರವೀಂದ್ರನಾಥ ಠಾಕೂರ್ ಹೇಳಿದರು: "ನೋಡಲಿಕ್ಕೆ ವೇಳೆ ಇಲ್ಲ".

ನಮ್ಮಂಥವರಾದರೆ ಓದಿ ಮರು ಟೀಕೆಗೆ ತೊಡಗುತ್ತಿದ್ದೆವು. ಆದರೆ ಇವರಿಗೆ ಅವುಗಳನ್ನು ಓದುವುದಕ್ಕೂ ವೇಳೆ ಇಲ್ಲ. ನಿಸರ್ಗ ಅಷ್ಟು ಶ್ರೀಮಂತವಾಗಿದೆ.
Hundred years are not sufficient for enjoying the beauty.
ರವೀಂದ್ರರಿಗೆ ಏಕೆ ಋಷಿ ಅಂಥ ಕರೆದೆವು? ಅವರು ಪುಸ್ತಕ ಬರೆದಿದ್ದಾರೆ ಅಂಥ ಅಲ್ಲ. ಅವರಲ್ಲಿ ಅಂಥ ಶಾಂತ ವ್ಯಕ್ತಿತ್ವ ಇತ್ತು. ಇಂಥವರನ್ನು ನೆನೆಯುವುದು ನಮ್ಮಂಥವರಿಗೆ ಪರಮ ಸುಖ.

ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರು.          ಸಂಗ್ರಹ: ವೀರೇಶ್ ಅರಸಿಕೆರೆ. ****************************************** 🌻🌻 *ದಿನಕ್ಕೊಂದು ಕಥೆ*🌻🌻

💐 *ಕತ್ತೆಯ ಉಪಾಯ*💐

ಬಟ್ಟೆ ವ್ಯಾಪಾರಿಯೊಬ್ಬ ಕತ್ತೆ ಹಾಗೂ ಕುದುರೆಯನ್ನು ಸಾಕಿಕೊಂಡಿದ್ದ. ಕತ್ತೆಗೆ ಭಾರವಾದ ಬಟ್ಟೆ ಮೂಟೆಗಳನ್ನು ಹೊರಿಸಿ ಕುದುರೆ ಮೇಲೆ ಕುಳಿತು ಪ್ರಯಾಣ ಆರಂಭಿಸಿದ. ಮಾರ್ಗ ಮಧ್ಯೆ ದಣಿವಾರಿಸಿಕೊಳ್ಳಲು ಮರದಡಿ ವಿರಮಿಸಿದ. ಆಗ ಕುದುರೆ ಮೆಲ್ಲನೆ ಕತ್ತೆಯ ಹತ್ತಿರ ಹೋಗಿ "ಎಂಥಾ ಜನ್ಮವಪ್ಪಾ ನಿಂದೂ? ಜೀವನ ಪೂರ್ತಿ ಭಾರವಾದ ವಸ್ತುಗಳನ್ನು ಹೊತ್ತುಕೊಂಡು ಸಾಗೋದೇ ನಿನ್ನ ಹಣೆ ಬರಹವಾಯ್ತು ಅಲ್ವಾ! ಇಂತಹ ದುರ್ಗತಿ ಯಾರಿಗೂ ಬೇಡಪ್ಪಾ. ಮುಂದಿನ ಜನ್ಮ ಅಂತ ಇದ್ರೆ ಕತ್ತೆಯಾಗಿ ಮಾತ್ರ ಹುಟ್ಟಲಾರೆ." ಎಂದು ಪರಿಹಾಸ್ಯ ಮಾಡಿ ನಕ್ಕಿತು.

ಈ ಮಾತು ಕೇಳಿ ಕತ್ತೆಗೆ ತುಂಬಾ ಅವಮಾನವಾಯಿತು. ಸೊಕ್ಕಿನ ಕುದುರೆಗೆ ಬುದ್ಧಿ ಕಲಿಸುವ ಹುನ್ನಾರ ಮಾಡಿತು. ಕೆಲ ಹೊತ್ತಿನ ನಂತರ ವ್ಯಾಪಾರಿ ಪ್ರಯಾಣ ಮುಂದುವರಿಸಲು ಸರಕನ್ನು ಕತ್ತೆಯ ಮೇಲೆ ಏರಿಸಿದಾಗ ಕತ್ತೆ ಅದನ್ನು ಬೀಳಿಸಿ ತಾನೂ ನೆಲಕ್ಕೆ ಬಿದ್ದು ಒದ್ದಾಡತೊಡಗಿತು. ಇದರಿಂದ ವ್ಯಾಪಾರಿ ತುಂಬಾ ದಿಗಿಲಾಯಿತು. "ಅಯ್ಯೋ ಪಾಪ! ಕತ್ತೆಯ ಆರೋಗ್ಯ ಸರಿಯಿಲ್ಲವೆಂದು ತೋರುತ್ತದೆ" ಎಂದುಕೊಂಡು ಆ ಭಾರವಾದ ಬಟ್ಟೆ ಮೂಟೆಗಳನ್ನು ಕುದುರೆ ಮೇಲೆ ಹೊರಿಸಿ ಪ್ರಯಾಣ ಮುಂದುವರಿಸಿದ. ಕತ್ತೆಯನ್ನು ನಿಂದಿಸಿದ ತಪ್ಪಿಗೆ ಕುದುರೆಗೆ ತಕ್ಕ  ಶಿಕ್ಷೆಯಾಯಿತು.


ನೀತಿ
ನಾವು ಇನ್ನೊಬ್ಬರನ್ನು ಅವಮಾನಗೊಳಿಸಿದಾಗ, ಆ ಅವಮಾನದ ಜೊತೆಗೆ ಶಿಕ್ಷೆಯನ್ನು ಸಹ ನಾವು ಒಂದು ದಿನ  ಅನುಭವಿಸಬೇಕಾಗಿರುತ್ತದೆ.


Saturday, September 1, 2018

ತ್ರಿವೇಣಿ

ತ್ರಿವೇಣಿಯವರು ಕನ್ನಡದ ನವೋದಯದ ಮಾರ್ಗದಲ್ಲಿ ಬರೆಯಲು ಪ್ರಾರಂಭಿಸಿದ ಪ್ರಮುಖ ಕಾದಂಬರಿಕಾರರು. ಅವರು ತಮ್ಮ ಕಥೆ ಕಾದಂಬರಿಗಳ ಮೂಲಕ ಪ್ರಗತಿಪರ ಧೋರಣೆಯನ್ನು ಪ್ರತಿಪಾದಿಸಿದ ಬರಹಗಾರ್ತಿಯರಲ್ಲಿ ಪ್ರಮುಖರು.  ಸುಮಾರು ಒಂದು ದಶಕದ ಅವಧಿಯಲ್ಲಿ ರಚಿತವಾದ ಅವರ ಕಥೆ-ಕಾದಂಬರಿಗಳು ಕನ್ನಡದಲ್ಲಿ ಓದುಗರ ಒಂದು ವರ್ಗವನ್ನೇ ಸೃಷ್ಟಿಸಿತು. 

ಬಿ. ಎಂ. ಶ್ರೀ ಅವರ ತಮ್ಮ ಬಿ. ಎಂ. ಕೃಷ್ಣಸ್ವಾಮಿಯವರ ಎರಡನೆಯ ಮಗಳಾದ ತ್ರಿವೇಣಿ ಅವರು ಜನಿಸಿದ್ದು ಸೆಪ್ಟೆಂಬರ್ 1, 1928ರಲ್ಲಿ.  ಅವರ ಹುಟ್ಟು ಹೆಸರು ಭಾಗೀರಥಿ.  ಅವರು ಶಾಲೆಗೆ ಸೇರಿದಾಗ ಅವರ ಹೆಸರು ‘ಅನಸೂಯ’ ಎಂದಾಯಿತು.   ಕಾಲೇಜು ಶಿಕ್ಷಣ ಮೈಸೂರಿನಲ್ಲಿ ಆಯಿತು. 1947ರಲ್ಲಿ ಮಹಾರಾಜಾ ಕಾಲೇಜಿನಿಂದ ಮನ:ಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆ ಬಿ.ಎ.ಪದವಿ ಪಡೆದರು.   ಅಂದಿನ ದಿನಗಳಲ್ಲಿ ನಮಗೆ ಶಾರದಾ ವಿಲಾಸ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿದ್ದ ಶ್ರೀ ಶಂಕರ್ ಅವರ ಪತಿ.  ಮದುವೆಯ ನಂತರ ‘ಅನಸೂಯ ಶಂಕರ್’ ಆದರು.  ಮನೆಯೊಳಗಿನ ಅನಸೂಯ ಶಂಕರ್ ಸಣ್ಣಕಥೆಗಳ ಮೂಲಕ ಕನ್ನಡ ಸಾಹಿತ್ಯ ರಂಗವನ್ನು ಪ್ರವೇಶಿಸಿ ಕಾದಂಬರಗಾರ್ತಿಯಾಗಿ ‘ತ್ರಿವೇಣಿ’ ಎಂಬ ಕಾವ್ಯನಾಮದಿಂದ ಪ್ರಖ್ಯಾತರಾದರು.

 ‘ಶರಪಂಜರ, ‘ಬೆಳ್ಳಿಮೋಡ’, ‘ಕೀಲುಗೊಂಬೆ, ‘ಹೃದಯ ಗೀತೆ, ‘ಬೆಕ್ಕಿನಕಣ್ಣು’, ‘ಬಾನುಬೆಳಗಿತು, ‘ಅವಳ ಮನೆ’, ‘ಕಾಶೀಯಾತ್ರೆ, ‘ಹಣ್ಣೆಲೆ ಚಿಗುರಿದಾಗ’, ‘ಹೂವು ಹಣ್ಣು’,  ‘ಮುಕ್ತಿ’,  ‘ದೂರದ ಬೆಟ್ಟ’,  ‘ಅಪಸ್ವರ’, ‘ಅಪಜಯ’, ‘ತಾವರೆ ಕೊಳ’, ‘ಸೋತು ಗೆದ್ದವಳು’, ‘ಕಂಕಣ’, ‘ಮುಚ್ಚಿದ ಬಾಗಿಲು’, ‘ಮೊದಲ ಹೆಜ್ಜೆ’, ‘ವಸಂತಗಾನ’, ‘ಅವಳ ಮಗಳು’ ಇವು ತ್ರಿವೇಣಿಯವರ  ಕಾದಂಬರಿಗಳಾಗಿವೆ.

‘ಎರಡು ಮನಸ್ಸು, ‘ಸಮಸ್ಯೆಯ ಮಗು’, ‘ ಹೆಂಡತಿಯ ಹೆಸರು’  ಇವು ತ್ರಿವೇಣಿ ಅವರ  ಕಥಾಸಂಕಲನಗಳಾಗಿವೆ.   ಇವುಗಳಲ್ಲಿ ಒಟ್ಟು ನಲವತ್ತೊಂದು ಕಥೆಗಳಿವೆ.  ಮಾನಸಿಕ, ಕೌಟುಂಬಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಚಿತ್ರಿಸುವ ಅವರ ‘ಹೆಂಡತಿಯ ಹೆಸರು’, ‘ಚಂಪಿ’, ‘ಅತಿಥಿ ಬರಲಿಲ್ಲ’, ‘ಸಮಸ್ಯೆಯ ಮಗು’, ‘ಸಲಹೆ’ ಮತ್ತು ಎರಡು ಮನಸ್ಸು’ ಮೊದಲಾದ ಕಥೆಗಳು ಗಮನ ಸೆಳೆಯುತ್ತವೆ. 

ತ್ರಿವೇಣಿಯವರ  ಸಣ್ಣ ಕತೆಗಳ ಸಂಕಲನವಾದ ‘ಸಮಸ್ಯೆಯ ಮಗು’ವಿಗೆ 1962ರಲ್ಲಿ ‘ದೇವರಾಜ ಬಹದ್ದೂರ್  ಪ್ರಶಸ್ತಿ’ ಮತ್ತು 1960ರಲ್ಲಿ ‘ಅವಳ ಮನೆ’ ಕಾದಂಬರಿಗೆ ರಾಜ್ಯ ಪ್ರಶಸ್ತಿ ದೊರಕಿದವು. ‘ಅಪಸ್ವರ’ ಮತ್ತು ‘ಅಪಜಯ’ ಕಾದಂಬರಿಗಳನ್ನು ಮತ್ತು ‘ತ್ರಿವೇಣಿ ಸಪ್ತಕ್’ ಎಂಬ ಹೆಸರಿನಲ್ಲಿ ಏಳು ಸಣ್ಣ ಕತೆಗಳನ್ನು ಹಿಂದಿಗೆ ಎಸ್.ಎಮ್.ರಾಮಸ್ವಾಮಿ ಅವರು ಅನುವಾದ ಮಾಡಿದ್ದಾರೆ. ಮೀರಾ ನರ್ವೆಕರ್ ಎನ್ನುವವರು ‘ಶರಪಂಜರ’ವನ್ನು ‘The mad women’ ಎಂಬ ಹೆಸರಿನಲ್ಲಿ ಇಂಗ್ಳೀಷ್ ಗೆ ಅನುವಾದಿಸಿದ್ದಾರೆ. ‘ಬೆಕ್ಕಿನ ಕಣ್ಣು’ ಕಾದಂಬರಿಯನ್ನು ಶರ್ವಾಣಿಯವರು ತೆಲುಗಿಗೆ ಅನುವಾದಿಸಿದ್ದಾರೆ.

ತ್ರಿವೇಣಿಯವರ ‘ಹಣ್ಣೆಲೆ ಚಿಗುರಿದಾಗ’, ‘ಬೆಳ್ಳಿಮೋಡ’, ‘ಶರಪಂಜರ’, ‘ಮುಕ್ತಿ’, ‘ಹೂವು ಹಣ್ಣು’ ಕಾದಂಬರಿಗಳು ಚಲನಚಿತ್ರಗಳಾಗಿ ಪ್ರೇಕ್ಷಕವರ್ಗದಲ್ಲಿ  ಅವರನ್ನು ಅಮರವಾಗಿಸಿವೆ. 

ತ್ರಿವೇಣಿ ಅವರು ಬರೆದ ಮೊದಲ ಕಾದಂಬರಿ ‘ಅಪಸ್ವರ’ವಾದರೂ ಮೊದಲು ಪ್ರಕಟವಾದದ್ದು ‘ಹೂವು ಹಣ್ಣು’.  ವಿಧವೆಯಾಗಿ ಬಡತನಕ್ಕೆ ಸಿಕ್ಕಿದ ಅನಾಥೆಯೊಬ್ಬಳು ತನ್ನ ವಂಶದ ಕುಡಿಯನ್ನು ಸಾಕಲು ನಡೆಸುವ ಹೋರಾಟದ ಬದುಕು, ಆ ಹಾದಿಯಲ್ಲಿ ಆಕೆ ಒಳಪಡುವ  ಶೋಷಣೆ ಮತ್ತು  ದಾರುಣ ಪರಿಸ್ಥಿತಿಗಳನ್ನು  ಈ ಕಾದಂಬರಿ ಚಿತ್ರಿಸುತ್ತದೆ.  ಸ್ವಾವಲಂಬಿಯಾಗಿ, ಸ್ವತಂತ್ರಳಾಗಿ ಬಾಳಬೇಕೆಂಬ ಹಿರಿಯಾಸೆ ಹೊತ್ತು ಬಂದ ಹೆಣ್ಣು ಪರಾವಲಂಬಿಯಾದರೆ ಅವಳ ಬಾಳು ಎಷ್ಟು ಅಸಹನೀಯವಾಗುತ್ತದೆ ಎಂಬುದನ್ನು ‘ಅಪಸ್ವರ’, ‘ಅಪಜಯ’ ಕಾದಂಬರಿಗಳು ಚಿತ್ರಿಸುತ್ತವೆ. 

‘ಗೃಹಿಣಿಯ ಬದುಕೇ ಹೆಣ್ಣಿನ ಆದರ್ಶ’ ಎಂಬುದನ್ನು ತ್ರಿವೇಣಿ ಅವರ ಕಾದಂಬರಿಗಳು ತೀರ ಸರಳವಾಗಿ ಚಿತ್ರಿಸುತ್ತವೆ.  ಒಲವಿನ ಪತಿ, ತಾಯ್ತನದ ಹಿಗ್ಗು, ತನ್ನದೇ ಆದ ಪುಟ್ಟ ಮನೆ-ಇವನ್ನು ಹೆಣ್ಣು ಎಷ್ಟರಮಟ್ಟಿಗೆ ಬಯಸುತ್ತಾಳೆ ಎಂಬುದನ್ನು ಹೆಣ್ಣಿನ ದೃಷ್ಟಿಯಿಂದ ನಿರೂಪಿಸುವ ಅವರ ಕೆಲವು ಕಾದಂಬರಿಗಳು ಕೇವಲ ಮನೋರಂಜನೆಯನ್ನು ಮಾತ್ರ ನೀಡುತ್ತವೆ.  ‘ವಸಂತ ಗಾನ’, ‘ಬಾನು ಬೆಳಗಿತು’, ಅವಳ ಮನೆ’, ‘ಹೃದಯ ಗೀತೆ’ ಇವು ಈ ಬಗೆಯ ಕಾದಂಬರಿಗಳು. 

ಆಸ್ತಿಗಾಗಿ ಮದುವೆಯಾಗುವುದಾಗಿ ಮಾತು ಕೊಟ್ಟು ಆಸ್ತಿಗೆ ಹಕ್ಕುದಾರ ಬಂದಾಗ ಕೊಟ್ಟ ಮಾತಿನಿಂದ ಹಿಂಜರಿದ ಸ್ವಾರ್ಥಿ ಯುವಕನಿಂದ ಭಗ್ನ ಪ್ರೇಮಿಯಾದ ಸರಳ ಸ್ವಭಾವದ ಮುಗ್ಧಯುವತಿಯ ಮನಸ್ಸನ್ನು ಪರಿಣಾಮಕಾರಿಯಾಗಿ ಚಿತ್ರಿಸುವ ಕಾದಂಬರಿ ‘ಬೆಳ್ಳಿ ಮೋಡ’. 

ಕಾಮದ ಅರಗಿಣಿಯಾಗಿ ಬಾಳೆಲ್ಲ ಕಣ್ಣೀರಿನಿಂದ ತೊಳೆಯುವ ಹೆಣ್ಣಿನ ಅಸಹಾಯಕ ಚಿತ್ರಣ ‘ಕೀಲುಗೊಂಬೆ’ ಕಾದಂಬರಿಯಲ್ಲಿದೆ.  ‘ಮೊದಲ ಹೆಜ್ಜೆ’ಯಲ್ಲಿ ಪುರುಷ ಪ್ರಧಾನ ಸಮಾಜದ ಕಪಿಮುಷ್ಟಿಗೆ ಸಿಲುಕಿ ಬಾಳಿನಲ್ಲಿ ಕಹಿಯನ್ನೇ ಉಂಡ ದುರ್ದೈವಿ ಹೆಣ್ಣಿನ ಚಿತ್ರಣವಿದೆ. 

‘ತಾವರೆ ಕೊಳ’ ಗಂಭೀರವಾದ ವಸ್ತುವನ್ನುಳ್ಳ  ಕಾದಂಬರಿ.  ಮನುಷ್ಯ ಕೇವಲ ಅನ್ನ, ನೀರು, ಗಾಳಿಯಿಂದ ಮಾತ್ರವೇ ಜೀವಿಸಲಾರ, ಅವನ ಜೀವನ ಹಸನಾಗಬೇಕಾದರೆ ಅವನಿಗೆ ಪ್ರೀತಿ, ವಿಶ್ವಾಸ ಅತ್ಯವಶ್ಯಕವಾಗಿ ಬೇಕು ಎಂಬುದನ್ನು ಈ ಕಾದಂಬರಿ ಧ್ವನಿಸುತ್ತದೆ. 

ನಿವೃತ್ತರಾದ ರಾಯರ ಸಂಸಾರದ ಸುತ್ತ ರಚಿತವಾದ ಒಂದು ಸುಂದರ ಕಾದಂಬರಿ ‘ಹಣ್ಣೆಲೆ ಚಿಗುರಿದಾಗ’.  ವಯಸ್ಸಾದರೂ ಮಕ್ಕಳಂತಾಡುವ, ನಾಲಿಗೆ ಚಪಲ ಬಿಡದ, ಮರೆವಿನ ಸ್ವಭಾವದ ರಾಯರ ಪಾತ್ರ ಪುಟದಿಂದ ಪುಟಕ್ಕೆ ಹಾಸ್ಯದ ಹೊನಲನ್ನು ಹರಿಸುತ್ತಾ ಬೆಳೆದು ಬಂದಿದೆ.  ತ್ರಿವೇಣಿಯವರಿಗೆ ಪಾತ್ರ ಚಿತ್ರಣದ ಕಲೆ ಸಿದ್ಧಿಸುತ್ತಿತ್ತು ಎಂಬುದರ ಕುರುಹು ಈ ಕಾದಂಬರಿಯ ರಾಯರ ಪಾತ್ರ ಚಿತ್ರಣದಿಂದ ಗೋಚರವಾಗುತ್ತದೆ.  ಎರಡು ಮೂರು ತಲೆಮಾರಿನವರಲ್ಲಿ ಉಂಟಾಗುವ ಭಿನ್ನಾಭಿಪ್ರಾಯಗಳನ್ನು ಚಿತ್ರಿಸುವುದು ಈ ಕಾದಂಬರಿಯ ಉದ್ದೇಶ. 

ಮನೋವೈಜ್ಞಾನಿಕ ಸಮಸ್ಯೆಗಳನ್ನು ತಮ್ಮ ಕಾದಂಬರಿಯ ವಸ್ತುವನ್ನಾಗಿ ಆಯ್ದುಕೊಂಡು ತ್ರಿವೇಣಿಯವರು ಕನ್ನಡದ ಕಥೆ-ಕಾದಂಬರಿಗಳಿಗೆ ಹೊಸ ತಿರುವನ್ನು ಕೊಟ್ಟರು.  ದೈಹಿಕ ಸ್ವಾಸ್ಥ್ಯದೊಂದಿಗೆ ಮಾನಸಿಕ ಸ್ವಾಸ್ಥ್ಯವೂ ಸೇರಿದಾಗ ವ್ಯಕ್ತಿಯ ಬಾಳು ಸಹನೀಯ ಎಂದು ತಮ್ಮ ಮನೋವೈಜ್ಞಾನಿಕ ಕಾದಂಬರಿಗಳ ಮೂಲಕ ತೋರಿಸಿಕೊಟ್ಟರು.  ‘ಬೆಕ್ಕಿನ ಕಣ್ಣು’, ‘ದೂರದ ಬೆಟ್ಟ’, ‘ಮುಚ್ಚಿದ ಬಾಗಿಲು’, ಮತ್ತು ‘ಶರಪಂಜರ’ ಮೊದಲಾದ ಕಾದಂಬರಿಗಳಲ್ಲಿ ಕೆಲವು ರೀತಿಯ ಮನೋವೈಪರೀತ್ಯಗಳನ್ನು ಚಿಕಿತ್ಸಕ ದೃಷ್ಟಿಯಿಂದ ಕಂಡಿದ್ದಾರೆ. 
 
“ಮನಶ್ಯಾಸ್ತ್ರ ಮನುಷ್ಯನ ಅಧ್ಯಯನದ ವಿಶಿಷ್ಟ ಕ್ಷೆತ್ರವಾಗುವ ಮುನ್ನವೇ ಸಾಹಿತ್ಯ ರಚನೆ ಮಾಡಿದ ಕವಿಗಳು ಮನುಷ್ಯನ ಮನಸ್ಸನ್ನು ಅರ್ಥ ಮಾಡಿಕೊಂಡಿದ್ದರು.  ಸಾಹಿತ್ಯ ಕೃತಿಯಲ್ಲಿ ಪಾತ್ರಗಳ ಸ್ವಭಾವ, ನಡೆನುಡಿಯಲ್ಲಿ ಜೀವನವನ್ನು ಎದುರಿಸುವ ಅಥವಾ ಎದುರಿಸಲು ಹಿಂಜರಿಯುವ ರೀತಿಯಲ್ಲಿ ಪ್ರಕಟವಾಗಬೇಕು ಎಂಬುದು ನೆನಪಿಡಬೇಕಾದ ಅಂಶ.  ತ್ರಿವೇಣಿಯವರು ಮನಶ್ಯಾಸ್ತ್ರವನ್ನು ಕ್ರಿಯೆಯಲ್ಲಿ ಅರಗಿಸಿಕೊಳ್ಳಲು ಶಕ್ತರಾದಾಗ ಯಶಸ್ವಿಯಾಗುತ್ತಾರೆ.  ‘ಬೆಕ್ಕಿನ ಕಣ್ಣು’, ‘ಶರಪಂಜರ’ ಇಂತಹ ಕಾದಂಬರಿಗಳಲ್ಲಿ ಈ ಅಭಿಪ್ರಾಯ ಸಮಂಜಸವೆನಿಸುತ್ತದೆ” ಎಂಬ ಡಾ. ಎಲ್. ಎಸ್. ಶೇಷಗಿರಿರಾಯರ ಅಭಿಪ್ರಾಯಗಳು ಉಲ್ಲೇಖನೀಯವಾಗಿವೆ. 

ತ್ರಿವೇಣಿಯವರು ತಮ್ಮ ಕಾದಂಬರಿಗಳಲ್ಲಿ ಮನೋವಿಜ್ಞಾನವನ್ನು ಬಳಸಿದುದರಿಂದ ಅವರು ಹೊಸ ಹಾದಿಯಲ್ಲಿ ನಡೆದರು. ಎಂದು ತೋರಿದರೂ ಅವರ ಕಾದಂಬರಿಗಳ ಮೌಲ್ಯಗಳು ಅಂದಿನವರೆಗೆ ಕಂಡು ಬಂದಿದ್ದ ಮೌಲ್ಯಗಳಿಂದ ಬಿನ್ನವಾಗಿರಲಿಲ್ಲ ಕನ್ನಡ ಕಾದಂಬರಿ, ಕಥೆಗಳ ಚರಿತ್ರೆಯಲ್ಲಿ ಮಹಿಳೆಯರ ಉತ್ಸಾಹದ ಅಧ್ಯಾಯವನ್ನೇ ಅವರು ತೆರೆದರು ಎನ್ನಬೇಕು. ಸಾಮಾನ್ಯವಾಗಿ ಕೌಟುಂಬಿಕ ಜೀವನ ಇವರ ಕಥಾವಸ್ತು. ಹೃದಯದ ಶ್ರೀಮಂತಿಕೆ ಇವರ ವಸ್ತು.

ಜೀವನದಲ್ಲಿ ಹೆಣ್ಣಿಗೆ ಇರಬೇಕಾದ ಸುಖ, ಸಂಪತ್ತು, ಭೋಗ ಭಾಗ್ಯಗಳು ತ್ರಿವೇಣಿಯವರಿಗೆ ಹೇರಳವಾಗಿದ್ದವು.  ಅವರಿಗೆ ಜೀವನದಲ್ಲಿ ಆಸಕ್ತಿ, ಮೋಹವಿತ್ತು.  ಇದು ಅವರ ಕೃತಿಗಳಲ್ಲಿ ಉದ್ದಕ್ಕೂ ಕಾಣುತ್ತದೆ.  ಒಲವಿನ ಪತಿ, ತಮ್ಮದೇ ಆದ ಮನೆ, ಪ್ರೀತಿಸುವ ಬಂಧು ಬಾಂಧವರು, ಆತ್ಮೀಯ ಸ್ನೇಹಿತರ ಬಳಗ, ಜನಪ್ರಿಯತೆ, ಅಚ್ಚುಮೆಚ್ಚಿನ ವಾಚಕ-ವರ್ಗ ಇಷ್ಟೆಲ್ಲಾ ಇದ್ದರೂ “ತಾನು ತಾಯಿಯಾಗಲಿಲ್ಲ, ತಾವು ಸೇರಿದ ಮನೆಗೆ ಬೆಳಕಾಗಿ ಒಂದು ಮಗುವನ್ನು ಕೊಡಲಿಲ್ಲ” ಎಂಬ ಕೊರಗು ಅವರನ್ನು ಬಾಧಿಸುತ್ತಿತ್ತು.  ದೈಹಿಕವಾಗಿ ದುರ್ಬಲರಾಗಿದ್ದ ತ್ರಿವೇಣಿ ಮೂರು ಸಲ ಗರ್ಭಿಣಿಯಾದಾಗಲೂ ನಿರೀಕ್ಷಿಸಿದ ಅತಿಥಿ ಬರದೆ ತಪ್ಪಿಸಿಕೊಂಡು ಹೋದ ಕಾರಣ ಅವರಿಗೆ ನಿರಾಶೆ ಇಮ್ಮಡಿಸುತ್ತಿತ್ತು.  ಈ ಸಮಯದಲ್ಲಿ ಅವರು ಅನುಭವಿಸಿದ ನಿರಾಶೆ, ಕಾತರ, ದುಃಖ, ಹೆರಿಗೆಯ ನೋವು, ಮೂಕ ಸಂಕಟ – ಇವೆಲ್ಲವನ್ನೂ ಅವರ ‘ಅತಿಥಿ ಬರಲಿಲ್ಲ’ ಎಂಬ ಸಣ್ಣಕಥೆಯಲ್ಲಿ ಹೃದಯಸ್ಪರ್ಶಿಯಾಗಿ ಬಣ್ಣಿಸಿದ್ದಾರೆ.  ಸ್ವಾನುಭವದ ಮೂಸೆಯಿಂದ ಮೂಡಿಬಂದಿರುವ ಈ ಕಥೆ ಓದುಗರ ಮನಸ್ಸನ್ನು ಕಲಕುತ್ತದೆ.

ತಾಯಿಯಾಗಲೆಬೇಕೆಂಬ ಹಠದಿಂದ ‘ಮಗು ಕೊಡು’ ಎಂದು ವಿಧಿಗೆ ಸವಾಲಾಗಿ ನಿಂತ ಅವರು ನಾಲ್ಕನೆಯ ಬಾರಿಗೆ ಗರ್ಭಿಣಿಯಾದಾಗ, ಅವರು ಬಹುದಿನದಿಂದ ಕಾತರಿಸುತ್ತಿದ್ದ ಅತಿಥಿಯೇನೋ ಕಡೆಗೂ ಬಂದಳು.  ಆದರೆ ಅವಳನ್ನು ಸ್ವಾಗತಿಸಿದ ಕೆಲವೇ ದಿನಗಳಲ್ಲಿ ಅತಿಥೇಯಳು ಕಣ್ಮರೆಯಾದುದು ದುರಂತ.  ತಮ್ಮ ಬೆಲೆಯುಳ್ಳ ಬರಹದ ಬಾಳಿನ ಅಂತಿಮ ಅಧ್ಯಾಯವನ್ನೇ ಕಡೆಯ ಕಾದಂಬರಿಯ ವಸ್ತುವಾಗುವಂತೆ ಬಿಟ್ಟುಹೋದರು.  ತಾರುಣ್ಯದ ಹೆಬ್ಬಯಕೆಗಳು ಇನ್ನೂ ಚಿಗುರೊಡೆಯುತ್ತಿರುವಾಗಲೇ ತಮ್ಮ ಮೂವತ್ತೈದನೆಯ ವಯಸ್ಸಿನಲ್ಲಿ 29 ಜುಲೈ 1963ರಲ್ಲಿ ನಿಧನರಾದರು.  ಹೀಗೆ ಕನ್ನಡ ಕಾದಂಬರಿಯ ಸಾಹಿತ್ಯದಲ್ಲಿ ಬಹುಬೇಗ ವಿಶಿಷ್ಟ ಸ್ಥಾನ ಗಳಿಸಿಕೊಂಡ ತ್ರಿವೇಣಿ ಜನಪ್ರಿಯ ಸಾಹಿತಿ ಆಗಿಹೋದರು. 

ತ್ರಿವೇಣಿಯವರಿಂದ ಇನ್ನೂ ಮಹತ್ವದ ಕೃತಿಗಳು ಬರುತ್ತವೆ ಎನ್ನುವ ನಿರೀಕ್ಷೆಗಳಿದ್ದ ಸಮಯದಲ್ಲಿ ಅವರು ಈ ಲೋಕವನ್ನಗಲಿದ್ದು ಕನ್ನಡನಾಡಿಗಾದ ನಷ್ಟ.  ಅಂತಹ ಶ್ರೇಷ್ಠತೆಗೆ ಬೇಕಾದ ಸಕಲ ಉಪಕರಣಗಳೂ ತ್ರಿವೇಣಿ ಅವರಲ್ಲಿತ್ತು ಎಂಬುದು ವಿದ್ವಾಂಸರ ಅಭಿಮತ.  ಆಧುನಿಕ ಕನ್ನಡ ಸಾಹಿತ್ಯದ ಇತಿಹಾಸಕಾರರು ತ್ರಿವೇಣಿಯವರನ್ನು ‘ಪ್ರತಿಭಾವಂತ ಲೇಖಕಿ’, ‘ಜನಪ್ರಿಯ ಲೇಖಕಿ’ ಎಂದು ಗುರುತಿಸಿ ಅವರಿಗೆ ಸಲ್ಲಬೇಕಾದ ಗೌರವಯುತ ಸ್ಥಾನವನ್ನು ನೀಡಿದ್ದಾರೆ.  ಬದುಕನ್ನು ಒಳ್ಳೆಯ ನಿಲುವಿನಿಂದ ನೋಡುವ ಆರೋಗ್ಯಕರ ಧೋರಣೆಯನ್ನು ಪ್ರತಿಪಾದಿಸುವ ಅವರ ಕೃತಿಗಳು ಬಹಳ ಕಾಲದವರೆಗೆ ಕನ್ನಡಿಗರ ಹೃದಯಗಳಲ್ಲಿ ನೆಲೆಸಿರುತ್ತವೆ.  ಈ ಮಹಾನ್ ಲೇಖಕಿಯ ನೆನಪಿಗೆ ನಮ್ಮ ಗೌರವಯುತ ನಮನ.