ಎವಿಜಿ ವಿಚಾರ ಲಹರಿ
food for thought
POSTED IN ವಿಜ್ಞಾನ – ಮಾಡಿ ಕಲಿ
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೭೧
ಘರ್ಷಣೆ ಬಲದ ಸಾಮರ್ಥ್ಯವನ್ನು ನಿರ್ಲಕ್ಷಿಸಬೇಡಿ
ಘರ್ಷಣೆ ಬಲಕ್ಕೆ ಸಂಬಂಧಿಸಿದಂತೆ ಈಗಾಗಲೇ ಒಂದು ಚಟುವಟಿಕೆ ಮಾಡಿದ್ದೀರಿ. ಈಗ ಇನ್ನೊಂದು ಚಟುವಟಿಕೆ ಮಾಡಿ. ಘರ್ಷಣೆ ಬಲದ ಸಾಮರ್ಥ್ಯ ಏನು ಎಂಬುದನ್ನು ಈ ಚಟುವಟಿಕೆ ನಿಮಗೆ ಮನವರಿಕೆ ಮಾಡಿ ಕೊಡುತ್ತದೆ.
ಹೆಚ್ಚುಕಮ್ಮಿ ಸಮಗಾತ್ರದ ಯಾವುದಾದರೂ ಎರಡು ಪುಸ್ತಕಗಳನ್ನು ತೆಗೆದುಕೊಳ್ಳಿ. ಒಂದು ಪುಸ್ತಕದ ಹಾಳೆಯ ಮೇಲೆ ಇನ್ನೊಂದು ಪುಸ್ತಕದ ಹಾಳೆ ಬರುವಂತೆ ಎರಡೂ ಪುಸ್ತಕಗಳ ಹಾಳೆಗಳನ್ನು ಹೆಣೆಯಿರಿ.
ತದನಂತರ ಒಂದು ಪುಸ್ತಕದ ಪುಟಗಳನ್ನು ಹೊಲಿದಿರುವ ಭಾಗವನ್ನು ಒಂದು ಕೈನಲ್ಲಿಯೂ ಇನ್ನೊಂದರದ್ದನ್ನು ಇನ್ನೊಂದು ಕೈನಲ್ಲಿಯೂ ಹಿಡಿದು ಎಳೆಯುವುದರ ಮುಖೇನ ಪುಸ್ತಕಗಳನ್ನು ಪ್ರತ್ಯೇಕಿಸಿ!
ಸಾಧ್ಯವಾಗದಿದ್ದರೆ ಒಂದು ಪುಸ್ತಕವನ್ನು ನೀವೂ ಇನ್ನೊಂದನ್ನು ನಿಮ್ಮ ಮಿತ್ರರ ಪೈಕಿ ಯಾರಾದರೊಬ್ಬರು ಹಿಡಿದು ಎಳೆದರೂ ಸರಿ.
ಫಲಿತಾಂಶ ನಿಮ್ಮನ್ನು ಮೂಕವಿಸ್ಮಿತರನ್ನಾಗಿಸುತ್ತದೆ. ನೀವು ವೀಕ್ಷಿಸಿದ ವಿದ್ಯಮಾನ ಘಟಿಸಲು ಕಾರಣವೇನು ಎಂಬುದನ್ನು ಪತ್ತೆ ಹಚ್ಚಿ.
Advertisements
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೭೦
ಆಕಾಶದ ಬಣ್ಣ ನೀಲಿ ಏಕೆ ಎಂಬುದರ ವೈಜ್ಞಾನಿಕ ವಿವರಣೆಯನ್ನು ಮನೆಯಲ್ಲಿಯೇ ಪರೀಕ್ಷಿಸಿ.
[ಎಚ್ಚರಿಕೆ: ಈ ಪ್ರಯೋಗದಲ್ಲಿ ನಾಟಕೀಯವಾದದ್ದೇನೂ ಜರಗುವುದಿಲ್ಲ. ಎಂದೇ, ಅತಿಯಾದ ನಿರೀಕ್ಷೆ ಬೇಡ. ತತ್ವ ಗ್ರಹಿಸಲು ನೆರವು ನೀಡುವುದಷ್ಟೇ ಇದರ ಉದ್ದೇಶ]
ಭೂಮಿಯನ್ನು ಸುತ್ತುವರಿದಿರುವ ವಾಯುಮಂಡಲದಲ್ಲಿ ಪ್ರಧಾನವಾಗಿ ಇರುವುದು ಕೆಲವು ಅನಿಲಗಳ ಅಣುಗಳ ಮತ್ತು ಧೂಳಿನ ಕಣಗಳ ಮಿಶ್ರಣ ಎಂಬುದು ನಿಮಗೆ ತಿಳಿದಿದೆ. ಏಳು ಬಣ್ಣಗಳು ಸೇರಿ ಆದ ಸೂರ್ಯನ ಬಿಳಿ ಬೆಳಕು ವಾಯುಮಂಡಲವನ್ನು ದಾಟುವಾಗ ಈ ಅಣುಗಳಿಗೆ ಮತ್ತು ಧೂಳಿನ ಕಣಗಳಿಗೆ ಢಿಕ್ಕಿ ಹೊಡೆಯುವುದು ಅನಿವಾರ್ಯ. ಕೆಂಪು, ಕಿತ್ತಳೆ ಮುಂತಾದ ಕೆಲವು ಬಣ್ಣಗಳ ಕಿರಣಗಳು ಢಿಕ್ಕಿ ಹೊಡೆದರೂ ಹೆಚ್ಚು ಕಮ್ಮಿ ಅಬಾಧಿತವಾಗಿ ನೇರವಾಗಿಯೇ ಪ್ರಸರಿಸುತ್ತವೆ ಎಂದೂ ನೀಲಿ ಬಣ್ಣದ ಬೆಳಕಿನ ಕಿರಣಗಳು ಎಲ್ಲ ದಿಕ್ಕುಗಳಿಗೆ ಚದರಿ ಹೋಗುತ್ತದೆಂದೂ ವಿಜ್ಞಾನ ಪಠ್ಯಪುಸ್ತಕಗಳಲ್ಲಿ ನೀವು ಓದಿರುತ್ತೀರಿ. ನೀಲಿ ಬಣ್ಣದ ಬೆಳಕು ಅತಿ ಹೆಚ್ಚು ಚದರುವುದು ನಿಜವೇ. ನೀವೇ ಪರೀಕ್ಷಿಸಿ ನೋಡಿ.
ಒಂದು ಗಾಜಿನ ಬಾಟಲ್ ಅಥವ ಲೋಟದಲ್ಲಿ ಸುಮಾರು ೨೫೦-೪೦೦ ಮಿಲೀ ನೀರು ತೆಗೆದುಕೊಂಡು ಅದಕ್ಕೆ ೧/೨ ಚಮಚೆಯಷ್ಟು ಹಾಲು ಹಾಕಿ ಚೆನ್ನಾಗಿ ಕಲಕಿ. (ಬಿಳಿ ಬಣ್ಣದ ಸಾಬೂನಿನ ದುರ್ಬಲ ದ್ರಾವಣವೂ ಆದೀತು). ಎಲ್ಇಡಿ ಟಾರ್ಚ್ ಲೈಟಿನೊಂದಿಗೆ ( ಬಿಳಿ ಬೆಳಕನ್ನು ಇದು ನೀಡುತ್ತದೆ) ಈ ಬಾಟಲ್ ಸಹಿತ ಕತ್ತಲೆ ಕೋಣೆಯೊಂದರಲ್ಲಿ ಮುಂದೆ ವಿವರಿಸಿದ ಕಾರ್ಯ ನಿರ್ವಹಿಸಿ, ವೀಕ್ಷಣೆಗಳನ್ನು ಮಾಡಿ.
೧. ಬೆಳಕಿನ ಕಿರಣಗಳು ಮೇಲಿನಿಂದ ದ್ರಾವಣವನ್ನು ಪ್ರವೇಶಿಸುವಂತೆ ಟಾರ್ಚ್ ಲೈಟ್ ಹಿಡಿದು ಪಕ್ಕದಿಂದ ದ್ರಾವಣದ ಬಣ್ಣ ಗಮನಿಸಿ.
೨. ಬೆಳಕಿನ ಕಿರಣಗಳು ಪಕ್ಕದಿಂದ ದ್ರಾವಣವನ್ನು ಪ್ರವೇಶಿಸುವಂತೆ ಟಾರ್ಚ್ ಲೈಟ್ ಹಿಡಿದು ಮೇಲಿನಿಂದ ಮತ್ತು ಬೆಳಕಿನ ಕಿರಣ ದ್ರಾವಣವನ್ನು ಪ್ರವೇಶಿಸಿದ ನೇರದಲ್ಲಿಯೇ ಎದುರಿನಿಂದ ವೀಕ್ಷಿಸಿ, ದ್ರಾವಣದ ಬಣ್ಣಗಳನ್ನು ವೀಕ್ಷಿಸಿ.
೩. ಬೆಳಕಿನ ಕಿರಣಗಳು ಮೇಲಿನಿಂದ ಅಥವ ಕೆಳಗಿನಿಂದ ದ್ರಾವಣವನ್ನು ಪ್ರವೇಶಿಸುವಂತೆ ಟಾರ್ಚ್ ಲೈಟ್ ಹಿಡಿದು ವಿರುದ್ಧ ದಿಕ್ಕಿನಿಂದ (ಅರ್ಥಾತ್, ಕೆಳಗಿನಿಂದ ಅಥವ ಮೇಲಿನಿಂದ) ದ್ರಾವಣದ ಬಣ್ಣಗಳನ್ನು ವೀಕ್ಷಿಸಿ.
ಬೆಳಕಿನ ಕಿರಣಗಳು ದ್ರಾವಣವನ್ನು ಪ್ರವೇಶಿಸಿದ ನೇರಕ್ಕೆ ಲಂಬವಾಗಿರುವ ದಿಕ್ಕಿನಿಂದ ನೋಡಿದಾಗ ಎಲ್ಲ ಪಕ್ಕಗಳಲ್ಲಿ ನಸು ನೀಲಿಯಾಗಿ ದ್ರಾವಣ ಗೋಚರಿಸುತ್ತದಲ್ಲವೇ? ಯಾವ ನೇರದಲ್ಲಿ ನೋಡಿದಾಗ ತುಸು ಕೆಂಪಾಗಿ ಗೋಚರಿಸಿತು ಎಂಬುದನ್ನು ನೀವೇ ಹೇಳಿ. ನೀಲಿ ಬಣ್ಣದ ಬೆಳಕನ್ನು ಹಾಲಿನ (ಅಥವ ಸಾಬೂನಿನ) ಅಣುಗಳು ಹೆಚ್ಚು ಚದರಿಸಿದ್ದೇ ಇದಕ್ಕೆ ಕಾರಣ. ವಾಯುಮಂಡಲದಲ್ಲಿ ಜರಗುವ ವಿದ್ಯಮಾನಕ್ಕೆ ಸಮನಾದ ವಿದ್ಯಮಾನ ಇದು.
[ಕತ್ತಲೆ ಕೋಣೆಯಲ್ಲಿ ‘ಫ್ಲಾಷ್’ ಬಳಸದೆಯೇ ಈ ವಿದ್ಯಮಾನವನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಹೇಗೆಂಬುದು ನನಗೆ ಗೊತ್ತಿಲ್ಲ. ಎಂದೇ, ನಾನು ವೀಕ್ಷಿಸಿದ್ದರ ನೈಜ ಛಾಯಾಚಿತ್ರಗಳನ್ನು ತೋರಿಸಲು ಸಾಧ್ಯವಾಗಿಲ್ಲ. ಫ್ಲಾಷ್ ಉಪಯೋಗಿಸಿ ಸೆರೆಹಿಡಿದ ಚಿತ್ರಗಳು ನೈಜತೆಯನ್ನು ಬಿಂಬಿಸುವುದಿಲ್ಲವಾದರೂ ಕೆಲವನ್ನು ಇಲ್ಲಿ ಲಗತ್ತಿಸಿದ್ದೇನೆ. ಇವನ್ನು ಮಾರ್ಗದರ್ಶಿ ಎಂದು ಮಾತ್ರ ಪರಿಗಣಿಸಿ]
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೬೯
ಬಲೂನಿನೊಂದಿಗೆ ಮನರಂಜನೆ – ೨
ಗಾಳಿ ತುಂಬಿಸಿದ ಬಲೂನಿಗೆ ಸೂಜಿ ಚುಚ್ಚಿದರೆ ಏನಾಗುತ್ತದೆ? ಇದೆಂಥ ಪ್ರಶ್ನೆ ‘ಒಡೆದು ಹೋಗುತ್ತದೆ’ ಎಂದು ಎಲ್ಲರಿಗೂ ತಿಳಿದಿದೆ ಅನ್ನುತ್ತೀರಾ? ಒಡೆದು ಹೋಗದಂತೆ ಸೂಜಿ ಚುಚ್ಚುವ ತಂತ್ರವೊಂದಿದೆ. ಆ ತಂತ್ರ ಪ್ರಯೋಗಿಸಿದರೆ ಬಲೂನು ಒಡೆದು ಹೋಗುವುದಿಲ್ಲ. ಬಲು, ಬಲು ನಿಧಾನವಾಗಿ ಗಾಳಿ ಹೊರಹೋಗುತ್ತದೆ. ರಬ್ಬರಿನ ಅಣುಗಳ ಬಂಧದ ಕುರಿತಾದ ಮಾಹಿತಿ ಇದ್ದವರು ಈ ತಂತ್ರದ ಯಶಸ್ಸಿಗೆ ವೈಜ್ಞಾನಿಕ ವಿವರಣೆ ನೀಡಬಹುದು.
ಗಾಳಿ ತುಂಬಿದ ಮಧ್ಯಮ ಅಥವ ದೊಡ್ಡ ಗಾತ್ರದ ಬಲೂನು ತೆಗೆದುಕೊಳ್ಳಿ (ಚಿತ್ರ ೧).
ಸಪುರವಾದ ಉದ್ದನೆಯ ಸೂಜಿ (ಸ್ವೆಟ್ಟರ್ ಹೆಣೆಯಲು ಉಪಯೋಗಿಸುವಂಥದ್ದು ಸಂಗ್ರಹಿಸಿ). ತೆಂಗಿನ ಗರಿಯ ಕಡ್ಡಿಯಿಂದ ಮಾಡಿದ ಪೊರಕೆಯ ನಯವಾದ ಮೊನಚಾದ ಕಡ್ಡಿಯೂ ಆದೀತು (ಚಿತ್ರ ೨)-ನಾನು ಉಪಯೋಗಿಸಿವುದು ಇದನ್ನೇ.
ಗಾಳಿ ತುಂಬಿದ ಬಲೂನಿನ ಗಂಟು ಹಾಕಿದ ಮೂತಿಯ ಬಳಿ ಕಡ್ಡಿಯ ಮೊನಚು ತುದಿಯನ್ನು ಇಟ್ಟು ಎಡಕ್ಕೂಬಲಕ್ಕೂ ಕಡ್ಡಿಯನ್ನು ತಿರುಗಿಸುತ್ತಾ ಬಲು ಜಾಗರೂಕತೆಯಿಂದ ನಿಧಾನವಾಗಿ ಒತ್ತಿದರೆ ಬಲೂನನ್ನು ಒಡೆಯದೇ ಸೂಕ್ಷ್ಮ ರಂಧ್ರ ಮಾಡಿಕೊಂಡು ಕಡ್ಡಿ ಒಳಹೋಗುತ್ತದೆ (ಚಿತ್ರ ೩).
ತದನಂತರ ನಿಧಾನವಾಗಿ ಕಡ್ಡಿಯನ್ನು ತಿರುಗಿಸುತ್ತಾ ಮೊನಚು ತುದಿ ಬಲೂನಿನ ಇನ್ನೊಂದು ತುದಿಯನ್ನು ತಲಪುವ ತನಕ ನಿಧಾನವಾಗಿ ಒಳ ತಳ್ಳಿ. ಮೊನಚು ತುದಿ ಇನ್ನೊಂದು ತುದಿಯನ್ನು ತಲುಪಿದಾಗ ಆ ತಾಣದ ಆಚೆಈಚೆ ಬೆರಳುಗಳನ್ನು ಇಟ್ಟು ಬಲೂನು ಹಿಡಿದುಕೊಂಡು ಎಡಕ್ಕೂಬಲಕ್ಕೂ ಕಡ್ಡಿಯನ್ನು ತಿರುಗಿಸುತ್ತಾ ಬಲು ಜಾಗರೂಕತೆಯಿಂದ ನಿಧಾನವಾಗಿ ಒತ್ತಿದರೆ ಬಲೂನನ್ನು ಒಡೆಯದೇ ಸೂಕ್ಷ್ಮ ರಂಧ್ರ ಮಾಡಿಕೊಂಡು ಕಡ್ಡಿ ಹೊರಬರುತ್ತದೆ (ಚಿತ್ರ ೪).
ಅಂತಿಮವಾಗಿ ನೋಡುಗನಿಗೆ ಅಚ್ಚರಿಯಾಗುವ ರೀತಿಯಲ್ಲಿ ಕಡ್ಡಿಗೆ ಬಲೂನು ಪೋಣಿಸಿದಂತೆ ಗೋಚರಿಸುತ್ತದೆ (ಚಿತ್ರ ೫).
ಬಲೂನಿನ ಗಂಟು ಹಾಕಿದ ಮೂತಿಯ ಬಳಿ ಇರುವ ಬಿಂದುಗಳಲ್ಲಿ ಮತ್ತು ಗಂಟು ಹಾಕಿದ ಮೂತಿಯ ನೇರ ವಿರುದ್ದವಾಗಿರುವ ತಾಣದ ಬಿಂದುಗಳಲ್ಲಿ ಮಾತ್ರ ಈ ತಂತ್ರ ಯಶಸ್ವಿಯಾಗುತ್ತದೆ. ಬೇರೆಡೆ ಈ ರೀತಿಯಲ್ಲಿ ಚುಚ್ಚಿದರೂ ಬಲೂನು ಒಡೆದು ಹೋಗುತ್ತದೆ. ಬೇರಡೆ ಇರುವ ಬಿಂದುಗಳಲ್ಲಿ ಬಲೂನು ಒಡೆಯದಂತೆ ಸೂಜಿ ಚುಚ್ಚಲು ಪ್ರಯೋಗಿಸಬೇಕಾದ ತಂತ್ರ ಇಂತಿದೆ – ಗಾಳಿ ತುಂಬಿದ ಮಧ್ಯಮ ಅಥವ ದೊಡ್ಡ ಗಾತ್ರದ ಬಲೂನಿನ ಮೇಲೆ ಎಲ್ಲಿ ಸೂಜಿ ಚುಚ್ಚಬೇಕಾಗಿದೆಯೋ ಅಲ್ಲಿ ಸೆಲಫೇನ್ ಟೇಪಿನ ತುಂಡೊಂದನ್ನು ಅಂಟಿಸಿ. ಇದು ಪಾರಕವಾಗಿರುವುದರಿಂದ ಅಂಟಿಸಿದ್ದು ಸುಲಭವಾಗಿ ಗೋಚರಿಸುವುದಿಲ್ಲ (ಚಿತ್ರ ೬- ಕಪ್ಪು ಗೆರೆಯಿಂದ ಗುರುತಿಸಿದ ಭಾಗದಲ್ಲಿ ಅಂಟಿಸಿದೆ).
ತದನಂತರ ಯುಕ್ತ ಗಾತ್ರದ ಸೂಜಿಯನ್ನು ಚುಚ್ಚಬೇಕಾದ ತಾಣದಿಂದ ತುಸು ದೂರದಲ್ಲಿ ಹಿಡಿದು (ಚಿತ್ರ ೭)
ಒಂದೇ ಸಲಕ್ಕೆ ಬಲೂನ್ ಒಳಕ್ಕೆ ಹೋಗುವಂತೆ ಸೆಲಫೇನ್ ಟೇಪಿನ ಮೂಲಕ ವೇಗವಾಗಿ ಜೋರಾಗಿ ಚುಚ್ಚಿ (ಚಿತ್ರ ೮, ೯).
ಹಿಂದೆ ಮಾಡಿದಂತೆ ನಿಧಾನವಾಗಿ ಚುಚ್ಚಿದರೆ ಬಲೂನು ಒಡೆಯುತ್ತದೆ. ಈ ಎರಡೂ ಚಟುವಟಿಕೆಗಳಲ್ಲಿ ಬಲೂನಿನಲ್ಲಿ ರಂಧ್ರವಾಗುವುದರಿಂದ ನಿಧಾನವಾಗಿ ಗಾಳಿ ಹೊರಹೋಗುತ್ತದಾದರೂ ಬಲೂನು ‘ಠಪ್’ ಎಂದು ಒಮ್ಮೆಲೇ ಒಡೆಯುವುದಿಲ್ಲ. ಆದ್ದರಿಂದ ಈ ಬಲೂನುಗಳನ್ನು ಪುನಃ ಉಪಯೋಗಿಸಲು ಸಾಧ್ಯವಿಲ್ಲ.
(ವಿ ಸೂ: ಅಭ್ಯಾಸವಿಲ್ಲದವರು ಮಾಡುವ ಮೊದಲ ಪ್ರಯತ್ನಗಳು ಯಶಸ್ವಿಯಾಗದೇ ಇರುವ ಸಾಧ್ಯತೆ ಇದೆ. ಎಂದೇ ೬-೭ ಬಲೂನುಗಳನ್ನು ಗಾಳಿ ತುಂಬಿಸಿ ಇಟ್ಟುಕೊಂಡಿರಿ. ಒಮ್ಮೆ ಅಭ್ಯಾಸವಾದರೆ ಬಳಿಕ ಈ ಕಾರ್ಯಗಳನ್ನು ಸುಲಭವಾಗಿ ಮಾಡಬಹುದು)
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೬೮
ಬಲೂನಿನೊಂದಿಗೆ ಮನರಂಜನೆ – ೧
ಗಾಳಿ ತುಂಬಿದ ಬಲೂನನ್ನು ಉರಿಉತ್ತಿರುವ ಮೋಂಬತ್ತಿಯ ಜ್ವಾಲೆಯನ್ನು ತಗುಲಿಸಿದರೆ ಏನಾಗುತ್ತದೆ? ಒಡೆದು ಹೋಗುತ್ತದೆ ಎಂದು ಎಲ್ಲರಿಗೂ ತಿಳಿದಿದೆಯಲ್ಲವೇ? ಚಿತ್ರ ೧ ನೊಡಿ.
ಬಲೂನು ಒಡೆಯಲಿಲ್ಲ. ಚಿತ್ರ ೨ ನೋಡಿ.
ಮೋಂಬತ್ತಿಯ ಜ್ವಾಲೆ ತಗುಲಿದ ತಾಣದಲ್ಲಿ ಮಸಿ ಹಿಡಿದಿದೆ. ನಂಬಲಾಗುತ್ತಿಲ್ಲ ಅಲ್ಲವೇ? ಮುಂದೆ ಕೊಟ್ಟಿರುವ ಕೊಂಡಿಯ ಮೇಲೆ ಕ್ಲಿಕ್ಕಿಸಿ ನೋಡಿದರೆ ನಂಬಲು ಅಗತ್ಯವಾದ ಪುರಾವೆ ದೊರೆಯುತ್ತದೆ. http://www.youtube.com/watch?v=gN8rku8Hf0E&feature=youtu.be
ನೀವು ಈ ಜಾದೂ ಮಾಡಬಹುದು. ಉತ್ತಮ ಗುಣಮಟ್ಟದ ಬಲೂನು ತೆಗೆದುಕೊಳ್ಳಿ (ಆರಂಭದಲ್ಲಿ ಒಂದೆರಡು ಬಲೂನು ಒಡೆಯುವ ಸಾಧ್ಯತೆ ಇರುವುದರಿಂದ ೪-೫ ಬಲೂನು ಸಂಗ್ರಹಿಸಿ ಇಟ್ಟುಕೊಂಡಿರಿ). ಮೊದಲು ಬಲೂನಿನೊಳಕ್ಕೆ ಸುಮಾರು ೨೫೦ ಮಿಲೀ ನಷ್ಟು ನೀರು ತುಂಬಿಸಿ. ತದನಂತರ ಗಾಳಿ ತುಂಬಿಸಿ ಗಂಟು ಹಾಕಿ. ಮೋಂಬತ್ತಿಯನ್ನು ಉರಿಸಿ ನಿಲ್ಲಿಸಿ. ಬಲು ಜಾಗರೂಕತೆಯಿಂದ ನೀರು ಇರುವ ಭಾಗದ ಮಧ್ಯಕ್ಕೆ ಜ್ವಾಲೆ ತಾಕುವಂತೆ ಹಿಡಿದುಕೊಳ್ಳಿ. ತಕ್ಷಣ ಬಲೂನು ಒಡೆಯುವುದಿಲ್ಲ, ಬದಲಾಗಿ ಬಲೂನಿಗೆ ಮಸಿ ಹಿಡಿಯುತ್ತದೆ.
ಉಷ್ಣವಾಹಕಗಳಿಗೆ ಸಂಬಂಧಿಸಿದ ಮಾಹಿತಿ ನಿಮಗಿದ್ದರೆ ಈ ವಿದ್ಯಮಾನಕ್ಕೆ ವೈಜ್ಞಾನಿಕ ವಿವರಣೆ ಕೊಡಲು ನಿಮಗೆ ಕಷ್ಟವಾಗುವುದಿಲ್ಲ.
(ವಿ ಸೂ: ದೀರ್ಘಕಾಲ ಹಿಡಿದರೆ ನೀರಿನ ಮೇಲ್ಮಟ್ಟದ ಅಂಚಿನಲ್ಲಿ ಒಡೆಯುತ್ತದೆ. ಈ ಪ್ರಯೋಗವನ್ನು ಮನೆಯ ಹೊರಗೆ ಅಥವ ಬಚ್ಚಲು ಮನೆಯಲ್ಲಿ ಮಾಡುವುದು ಉತ್ತಮ. ಅಕಸ್ಮಾತ್ ಬಲೂನು ಒಡೆದು ನೀರು ಚಲ್ಲಿದರೆ ಸ್ವಚ್ಛಗೊಳಿಸುವುದು ಸುಲಭ)
ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೬೭
ಮೋಂಬತ್ತಿಯ ತೂಗುತೊಲೆಯಾಟ (ಕ್ಯಾಂಡಲ್ ಸೀ-ಸಾ)
ಅಳತೆಪಟ್ಟಿಯೊಂದನ್ನು ನೇತುಹಾಕಿದಾಗ ಅದು ತನ್ನ ಸಮತೋಲವನ್ನು ಕಾಯ್ದುಕೊಳ್ಳಬೇಕಾದರೆ ಪಾಲಿಸಲೇಬೇಕಾದ ಷರತ್ತುಗಳು ಯಾವುವು ಎಂಬುದನ್ನು ನೀವು ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೬೫ ಮುಖೇನ ನೀವು ಅರ್ಥಮಾಡಿಕೊಂಡಿದ್ದೀರಿ. ಅಂದಮೇಲೆ, ಈ ಮುಂದಿನ ಚಟುವಟಿಕೆಯಲ್ಲಿ ಜರಗುವ ವಿದ್ಯಮಾನದ ಕಾರಣವನ್ನು ವಿವರಿಸುವುದು ನಿಮಗೆ ಕಷ್ಟವಾಗಲಾರದು —
ಎರಡೂ ತುದಿಗಳಲ್ಲಿ ಬತ್ತಿ ಕಾಣುವಂತೆ ಮೋಂಬತ್ತಿಯೊಂದನ್ನು ಸಜ್ಜುಗೊಳಿಸಿ. ದಾರದ ನೆರವಿನಿಂದ ಅದರ ಗುರುತ್ವ ಕೇಂದ್ರ ಇರುವ ತಾಣ ಪತ್ತೆಹಚ್ಚಿ (ಚಿತ್ರ ೧).
ಸರಿಸುಮಾರಾಗಿ ಗುರುತ್ವಕೇಂದ್ರ ಮೂಲಕ ಹಾದುಹೋಗುವಂತೆ ಮೋಂಬತ್ತಿಯ ುದ್ದನೆಯ ಅಕ್ಷಕ್ಕೆ ಲಂಬವಾಗಿ ದೊಡ್ಡ ಸೂಜಿಯೊಂದನ್ನು ತೂರಿಸಿ (ಚಿತ್ರ ೨, ಸೂಜಿಯನ್ನು ತುಸು ಬಿಸಿ ಮಾಡಿದರೆ ಈ ಕಾರ್ಯ ಸುಲಭ).
೨ ಲೋಟ/ಬಾಟಲ್/ಡಬ್ಬಿ ಮುಂತಾದವುಗಳ ನೆರವಿನಿಂದ ಮೋಂಬತ್ತಿಯನ್ನು ತೂಗುತೊಲೆಯಂತೆ ನಿಲ್ಲಿಸಿ (ಚಿತ್ರ ೩).
ಎರಡೂ ತುದಿಯ ಬತ್ತಿಗಳನ್ನು ಒಂದಾದ ತಕ್ಷಣ ಇನ್ನೊಂದರಂತೆ ಬೆಂಕಿಪೆಟ್ಟಿಗೆಯ ನೆರವಿನಿಂದ ಉರಿಸಿ (ಚಿತ್ರ ೪).
ಮುಂದೆ ಜರಗುವ ಮೋಂಬತ್ತಿಯ ತೊನೆದಾಟವನ್ನು ವೀಕ್ಷಿಸಿ, ಕಾರಣ ವಿವರಿಸಿ

























