Monday, December 30, 2019

ಕುವೆಂಪು

ಕರ್ನಾಟಕದಲ್ಲಿ ಮಹಾನ್ ಪಂಡಿತರಿಂದ ಸಾಮಾನ್ಯ ಜನಗಳವರೆಗೆ ಗೊತ್ತಿರುವ ಸಾಹಿತ್ಯ ಕ್ಷೇತ್ರದ ಪ್ರಸಿದ್ಧ ಹೆಸರು ಕುವೆಂಪು.  ಒಂದು ರೀತಿಯಲ್ಲಿ ಎಲ್ಲರೂ ಒಪ್ಪುವ ಹಿರಿಮೆಯ ಹೆಸರು ಕುವೆಂಪು. 

ಇಪ್ಪತ್ತನೆಯ ಶತಮಾನದಿಂದ ಈಚೆಗಿನ ಕನ್ನಡ ಸಾಹಿತ್ಯ ಚರಿತ್ರೆ ಕುವೆಂಪು ಅವರ ಸಾಹಿತ್ಯಕ ಬೆಳವಣಿಗೆ, ಸಾಧನೆ, ಸಿದ್ಧಿಗಳಿಂದ, ಅವರು ಇತರ ಕವಿಗಳ ಮೇಲೆ ಬೀರಿದ ಪ್ರಭಾವದಿಂದ ಕಂಗೊಳಿಸುತ್ತಿದೆ.  ಕಾವ್ಯ, ನಾಟಕ, ಸಣ್ಣ ಕಥೆ, ಕಾದಂಬರಿ, ವಚನ, ಕವನ, ಮಹಾಕಾವ್ಯ, ಸಾಹಿತ್ಯ ವಿಮರ್ಶೆ – ಈ ಒಂದೊಂದು ಪ್ರಕಾರದಲ್ಲೂ ಗಣನೀಯವಾದ ಕೊಡುಗೆಯನ್ನು ಕುವೆಂಪು ನೀಡಿದ್ದಾರೆ.  ಕನ್ನಡಕ್ಕೆ ರಾಷ್ಟ್ರಮಟ್ಟದ ಖ್ಯಾತಿಯನ್ನು ತಂದುಕೊಟ್ಟ ಮೊದಲಿಗರಲ್ಲಿ ಅವರೂ ಒಬ್ಬರು. 

ಕುವೆಂಪು ಅವರ ಪೂರ್ಣ ಹೆಸರು ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ.  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ಬಳಿ ಹರಿಯುತ್ತಿರುವ ತುಂಗಾ ನದಿಯನ್ನು ದಾಟಿ ಒಂಬತ್ತು ಮೈಲು ಹೋದರೆ ಕಾಡಿನ ನಡುವೆ ಬೆಟ್ಟಕ್ಕೆ ಅಂಟಿಕೊಂಡಂತೆ ಇರುವ ಮನೆ ಕುಪ್ಪಳ್ಳಿ.  ಅದೇ ಅವರ ಊರು.  ಅವರು ಹುಟ್ಟಿದ್ದು ಮಾತ್ರ ಕೊಪ್ಪಕ್ಕೆ ಸಮೀಪವಾದ ಹಿರೇಕೊಡಿಗೆಯಲ್ಲಿದ್ದ ತಮ್ಮ ತಾಯಿಯ ತವರುಮನೆಯಲ್ಲಿ.  1904 ಡಿಸೆಂಬರ್ 29ನೇ ತಾರೀಖು.  ಕುವೆಂಪು ಬೆಳೆದದ್ದು ಕುಪ್ಪಳ್ಳಿಯಲ್ಲಿ.  ಮನೆಯ ಸುತ್ತಲಿನ ಸುಂದರ ಪರಿಸರ, ಪ್ರಕೃತಿ ಸಂಪತ್ತು, ಹಿರಿಯರ ಜೊತೆ ಪಾಲ್ಗೊಳ್ಳುತ್ತಿದ್ದ ಶಿಕಾರಿಯಂತಹ ಸಾಹಸ ಯಾತ್ರೆಗಳು, ಈ ಎಲ್ಲವೂ ಕವಿ ಶಿಶುವಿನ, ಕವಿ ಬಾಲಕನ, ಕವಿ ತರುಣನ ಚೇತನದ ಆಳಕ್ಕೆ ನದಿಯಾಗಿ, ಜಲಪಾತವಾಗಿ ಧುಮ್ಮಿಕ್ಕಿ ಮಡುಗಟ್ಟಿನಿಂತುವು.

ಕವಿ ಬಾಲಕನಿಗೆ ಚಿಕ್ಕಂದಿನಿಂದಲೇ ಸಾಹಿತ್ಯ ಸಂಸ್ಕಾರವೂ ದೊರಕಿತು.  ಮನೆಯಲ್ಲಿ ತಂದೆ, ಚಿಕ್ಕಪ್ಪ ಇಬ್ಬರೂ ಸಾಹಿತ್ಯಾಸಕ್ತರು.  ಜೈಮಿನಿ ಭಾರತ, ತೊರವೆ ರಾಮಾಯಣಗಳ ವಾಚನ ಮನೆಯಲ್ಲಿ ನಡೆಯುತ್ತಿತ್ತು.  ಬಾಲಕ ಅದನ್ನು ಆಸಕ್ತಿಯಿಂದ ಕೇಳುತ್ತಿದ್ದ.  ಹುಡುಗನಿಗೆ ಜೊತೆಯ ಇತರ ಬಾಲಕರೊಡನೆ ಮನೆಯೇ ಶಾಲೆಯೂ ಆಯಿತು.  ಅನೇಕ ‘ಐಗಳು’ ಬಂದು ಹೋಗಿ ಮಾಡಿ ವಿದ್ಯಾಭ್ಯಾಸ ಕುಂಟುತ್ತಾ ನಡೆಯಿತು.  ಕಡೆಗೆ ರೋಮನ್ ಕ್ಯಾಥೊಲಿಕ್ ‘ಐಗಳು’ ಒಬ್ಬರು  ಇಂಗ್ಲೀಷ್ ಬಾಷಾ ಸಾಹಿತ್ಯಗಳ ಪರಿಚಯ ನೀಡಿದರು.  ಎಂಟನೇ ವಯಸ್ಸಿನಲ್ಲಿ ಅವರನ್ನು ತೀರ್ಥಹಳ್ಳಿಯ ಶಾಲೆಗೆ ಸೇರಿಸಲಾಯಿತು.  ಮೊದಲನೆಯ ಮಹಾಯುದ್ದದಲ್ಲಿ ಅವರ ಕುಟುಂಬಕ್ಕೆ ಆದ ನಷ್ಟಗಳಿಂದ  ಅವರ ಕುಟುಂಬ ಸಹಾ ತೀರ್ಥಹಳ್ಳಿಗೆ ವಾಸ್ತವ್ಯ ಬದಲಾಯಿಸಿತು.  ಚಿಕ್ಕವರಾದ ಪುಟ್ಟಪ್ಪ, ಅವರ ತಾಯಿ ಮತ್ತು ಪುಟ್ಟಪ್ಪನವರಿಗಿಂತಲೂ ಕಿರಿಯರಾದ ಎರಡು ಹೆಣ್ಣು ಮಕ್ಕಳನ್ನು ಅವರ ತಂದೆ ಅಗಲಿದರು. 

ಮುಂದೆ ಪುಟ್ಟಪ್ಪನವರ ವಿದ್ಯಾಭ್ಯಾಸ ಮೈಸೂರಿನ ಹಾರ್ಡ್ವಿಕ್  ಹೈಸ್ಕೊಲಿನಲ್ಲಿ ಮುಂದುವರೆಯಿತು.  ಷೆಲ್ಲಿ, ವರ್ಡ್ಸ್ ವರ್ತ್, ಕೀಟ್ಸ್ ಮುಂತಾದ ಆಂಗ್ಲ ಕವಿಗಳ ಕವನಗಳನ್ನು ಸ್ವತಂತ್ರವಾಗಿ ಓದುವ ಶಕ್ತಿ ಅವರಿಗೆ ಬಂದಿತ್ತು.  ಟಾಲ್ಸ್ ಟಾಯ್ ಕಾದಂಬರಿಗಳು, ಪೌರಾತ್ಯ, ಪಾಶ್ಚಾತ್ಯ ತತ್ವಜ್ಞರ ಬರವಣಿಗೆಗಳು ಅವರ ಭಾವ ಬುದ್ಧಿಗಳಿಗೆ ಪುಷ್ಟಿ ನೀಡಿದವು.  ಶ್ರೀರಾಮಕೃಷ್ಣಾಶ್ರಮದ ಮೈಸೂರು ಶಾಖೆಯ ಅಧ್ಯಕ್ಷರಾದ ಶ್ರೀ ಸ್ವಾಮಿ ಸಿದ್ದೇಶ್ವರಾನಂದರು ಬಾಲಕನಿಗೆ ತುಂಬ ಪ್ರಿಯರಾಗಿ ಅವನ ಸಕಲ ಯೋಗಕ್ಷೇಮವನ್ನೂ ವಹಿಸಿಕೊಂಡರು.  ಸರ್ವಧರ್ಮ ಸಮನ್ವಯಾಚಾರ್ಯರಾದ ಶ್ರೀರಾಮಕೃಷ್ಣ ಪರಮಹಂಸರೂ ಅವರ ಶಿಷ್ಯರಾದ ಸ್ವಾಮಿ ವಿವೇಕಾನಂದರೂ ಪುಟ್ಟಪ್ಪನವರಿಗೆ ಆದರ್ಶವ್ಯಕ್ತಿಗಳಾದರು. 

ಇಂಗ್ಲೀಷ್ ಕವಿಗಳ ಸಂಮೋಹನ, ಇಂಗ್ಲೀಷ್ ಭಾಷೆ ಛಂದಸ್ಸುಗಳ ಮೇಲಣ ಪ್ರಭುತ್ವ ಇವು ಬಾಲಕ ಪುಟ್ಟಪ್ಪನಲ್ಲಿ ಹೊಸ ಆಸೆ ಆಕಾಂಕ್ಷೆಗಳನ್ನು ಅರಳಿಸಿದವು.  ಹದಿನೆಂಟರ ಹರೆಯದ ಪುಟ್ಟಪ್ಪ 1922ರಲ್ಲಿ ತಮ್ಮ ಇಂಗ್ಲೀಷ್ ಕವನಗಳ ಪುಟ್ಟ ಸಂಕಲನವೊಂದನ್ನು ‘ಬಿಗಿನರ್ಸ್ ಮ್ಯೂಸ್’ ಎಂಬ ಹೆಸರಿನಲ್ಲಿ ಪ್ರಕಟಿಸಿದರು.  ಆಗಿನ್ನೂ ಅವರು ಹೈಸ್ಕೂಲು ಮೂರನೆಯ ತರಗತಿಯ ವಿದ್ಯಾರ್ಥಿ.  ಕವನಗಳನ್ನು ಓದಿದ ಮಿತ್ರರೂ, ಹಿರಿಯರೂ ಕವನಗಳ ಭಾಷೆಗೆ, ಉಪಮೆ ರೂಪಕಗಳಿಗೆ, ವಸ್ತು ವೈವಿಧ್ಯಕ್ಕೆ, ಕಲ್ಪನಾ ಚಾತುರ್ಯಕ್ಕೆ ಮಾರುಹೋದರು.  ಆಕಸ್ಮಿಕ ಎಂಬಂತೆ ಮೈಸೂರಿಗೆ ಬಂದಿದ್ದ ಐರಿಷ್ ಕವಿ ಜೇಮ್ಸ್ ಕಸಿನ್ಸ್ ಅವರಿಗೆ ಪುಟ್ಟಪ್ಪನವರು ತಮ್ಮ ಕವನಗಳನ್ನು ತೋರಿಸಿದರು.  ಕವನಗಳನ್ನು ಓದಿದ ಜೇಮ್ಸ್ ಕಸಿನ್ಸ್ ಮೆಚ್ಚಿ ಪ್ರೋತ್ಸಾಹಿಸುವುದರ ಬದಲು ‘ರವೀಂದ್ರರು ತಮ್ಮ ತಾಯಿನುಡಿಯಾದ ಬಂಗಾಳಿಯಲ್ಲಿ ಬರೆದಂತೆ, ನೀನು ನಿನ್ನ ತಾಯಿನುಡಿಯಾದ ಕನ್ನಡದಲ್ಲಿ ಬರೆ, ಉತ್ತಮ ಕವಿಯಾಗುತ್ತೀಯ’ ಎಂದರು.  ಆ ಕ್ಷಣದಲ್ಲಿ ಪುಟ್ಟಪ್ಪನವರಿಗೆ ಅದನ್ನು ಒಪ್ಪುವ ಮನಸ್ಸು ಮೂಡಲಿಲ್ಲವಾದರೂ ಮುಂದೆ ತಮ್ಮ ‘ಎಪ್ರಿಲ್’ ಎಂಬ ಆಂಗ್ಲಕವನವನ್ನು ‘ಚೈತ್ರ-ವೈಶಾಖ’ ಎಂದು ಅನುವಾದಿಸಿ ಪ್ರಕಟಿಸಿದರು. ಕವಿಯ ಜೀವನವಾಹಿನಿ ಇಂಗ್ಲೀಷಿನಿಂದ ಕನ್ನಡದ ಕಡೆಗೆ ತಿರುಗಿ ಹರಿಯತೊಡಗಿತು.

ಕೆ. ವಿ. ಪುಟ್ಟಪ್ಪನವರ ವಿದ್ಯಾಭ್ಯಾಸ ಮುಂದುವರೆಯಿತು.  ಬಿ.ಎ. ಓದುವ  ಸಮಯದಲ್ಲಿ ಅನಾರೋಗ್ಯ ಉಂಟಾಗಿ ಆಸ್ಪತ್ರೆಗೂ ದಾಖಲಾಗಿ ನಂತರದಲ್ಲಿ ನಾ. ಕಸ್ತೂರಿ ಮತ್ತು ಸ್ವಾಮೀ ಸಿದ್ದೇಶ್ವರಾನಂದರ ಒತ್ತಾಸೆಯಲ್ಲಿ ರಾಮಕೃಷ್ಣಾಶ್ರಮಕ್ಕೆ ವಾಸ್ತವ್ಯ ಬದಲಾಯಿಸಿದರು.  ಅವರ ಓದು ಮುಗಿದು ಅಧ್ಯಾಪಕ ವೃತ್ತಿಯಲ್ಲಿದ್ದಾಗಿನ ದಿನದಲ್ಲಿ ಕೂಡ ಶ್ರೀರಾಮಕೃಷ್ಣಾಶ್ರಮವೇ ಅವರ ಮನೆಯಾಯಿತು.

ಪುಟ್ಟಪ್ಪನವರ ಕನ್ನಡ ಕವನಗಳು ಜನಪ್ರಿಯವಾದವು.  ವಿದ್ಯಾರ್ಥಿಗಳು ಮಾತ್ರವಲ್ಲದೆ ಅಧ್ಯಾಪಕ  ವರ್ಗದಲ್ಲಿದ್ದ ಪ್ರೊ. ಟಿ. ಎಸ್. ವೆಂಕಣ್ಣಯ್ಯ, ಪ್ರೊ. ಎ. ಆರ್. ಕೃಷ್ಣಶಾಸ್ತ್ರಿ ಮತ್ತು ಪ್ರೊ. ಬಿ. ಎಂ. ಶ್ರೀಕಂಠಯ್ಯ ಅವರುಗಳು  ಕವಿಯನ್ನು ಮೆಚ್ಚಿ ಪ್ರಶಂಸಿಸಿದರು.  1942ರಲ್ಲಿ ಪುಟ್ಟಪ್ಪನವರು ಮಹಾತ್ಮಾ ಗಾಂಧೀಜಿಯವರ ದರ್ಶನ ಪಡೆದರು.  ಆದರೆ ರಾಜಕೀಯ ಅವರ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.  ಅಧ್ಯಾತ್ಮ-ಕಾವ್ಯ ಇವೇ ಅವರ ಎರಡು ಕಣ್ಣುಗಳಾದವು.

ಎಂ. ಎ. ತರಗತಿಯಲ್ಲಿ  ಪುಟ್ಟಪ್ಪ ತತ್ವಶಾಸ್ತ್ರ ಆರಿಸಿಕೊಂಡಿದ್ದರು.  ಆದರೆ ಪ್ರೊ. ಎ. ಆರ್. ಕೃಷ್ಣಶಾಸ್ತ್ರಿಯವರ ಒಲುಮೆಯ ಒತ್ತಾಯದಿಂದ ಅದೇ ವರ್ಷ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಆರಂಭವಾದ ಕನ್ನಡ ಎಂ.ಎ.ಗೆ ಸೇರಿದರು.  ಆ ಕ್ಷಣವನ್ನು ಕುವೆಂಪು “ಅಮೃತ ಕ್ಷಣ” ಎಂದು ಕರೆದಿದ್ದಾರೆ.  ವಿದ್ಯಾರ್ಥಿಯಾಗಿಯೇ ಪುಟ್ಟಪ್ಪನವರು ಅನೇಕ ಕವನಗಳನ್ನು ರಚಿಸುತ್ತಾ ಹೋದರು. ಎ. ಆರ್. ಕೃಷ್ಣಶಾಸ್ತ್ರಿಗಳ ಒತ್ತಾಯದಿಂದ ಅವರು ಏರ್ಪಡಿಸಿದ್ದ ಕವಿ ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದರು.  ಅವರನ್ನು ನೋಡುವುದಕ್ಕೆ ಜನ ಸೇರುತ್ತಿದ್ದುದರಲ್ಲಿ ಆಶ್ಚರ್ಯವಿರಲಿಲ್ಲ.  ಏಕೆಂದರೆ ಕೃಷ್ಣಶಾಸ್ತ್ರಿಗಳು ವರ್ಣಿಸಿರುವಂತೆ ವಿದ್ಯಾರ್ಥಿಯಾಗಿದ್ದಾಗ ಅವರು “ಬೇಲೂರು ಗುಡಿಯ ಗೋಡೆಯ ಮೇಲೆ ಕೆತ್ತಿದ ದೇವತಾ ವಿಗ್ರಹದಂತೆ” ಇದ್ದರು. 

ಎಂ. ಎ. ತರಗತಿಯಲ್ಲಿ ಸೇರಿದ ಮೊದಲಲ್ಲಿ ‘ಜಲಗಾರ’, ಅನಂತರ ‘ಯಮನ ಸೋಲು’ ನಾಟಕಗಳನ್ನು ಪುಟ್ಟಪ್ಪನವರು ರಚಿಸಿದರು.  ಅವೆರಡೂ ಭಾರೀ ಯಶಸ್ಸನ್ನು ಗಳಿಸಿದ್ದವು.  ಆ ವೇಳೆಗಾಗಲೇ ಅವರು ‘ಅಮಲನ ಕಥೆ’ ಎಂಬ ತಮ್ಮ ಪ್ರಥಮ ಕನ್ನಡ ಪುಸ್ತಕದಿಂದಲೂ, ‘ಬೊಮ್ಮನಹಳ್ಳಿ ಕಿಂದರಜೋಗಿ’ ನೀಳ್ಗವನದಿಂದಲೂ ಕನ್ನಡ ನಾಡಿನ ಕಾವ್ಯ-ಪ್ರಿಯರ ಹೃದಯದಲ್ಲಿ ಶಾಶ್ವತವಾದ ಸ್ಥಾನವನ್ನು ಗಳಿಸಿಕೊಂಡಿದ್ದರು.  1929 ಅವರ ಮಹತ್ವದ ವರ್ಷ.  ಅವರು ಎಂ.ಎ ಪದವಿ ಪಡೆದದ್ದು, ಕನ್ನಡ ಅಧ್ಯಾಪಕರಾಗಿ ನೇಮಕವಾದದ್ದು, ಮತ್ತು ಬಂಗಾಳದ ಬೇಲೂರು ಮಠದಲ್ಲಿ ರಾಮಕೃಷ್ಣ ಆಶ್ರಮದ ಅಧ್ಯಕ್ಷರೂ ಸ್ವಯಂ ಶ್ರೀ ರಾಮಕೃಷ್ಣ ಪರಮಹಂಸರ ನೇರ ಶಿಷ್ಯರೂ ಆದ ಶೀ ಸ್ವಾಮಿ ಶಿವಾನಂದರಿಂದ ಮಂತ್ರದೀಕ್ಷೆ ಸ್ವೀಕಾರ ಮಾಡಿದ್ದು ಇವು ಮೂರೂ ಘಟನೆಗಳೂ ನಡೆದವು. 

1930ರಲ್ಲಿ ಕುವೆಂಪುರವರ ಕವನ ಸಂಕಲನ ‘ಕೊಳಲು’ ಪ್ರಕಟವಾಯಿತು.  ಮುನ್ನುಡಿ ಬರೆದ ಆಚಾರ್ಯ ಬಿ.ಎಂ.ಶ್ರೀ  ಅಪಾರ ಮೆಚ್ಚುಗೆ ವ್ಯಕ್ತಪಡಿಸಿದರು.   ಕೊಳಲಿನ ಅತ್ಯುತ್ಕೃಷ್ಟವಾದ ಕವನಗಳಲ್ಲಿ ಒಂದಾದ ‘ಸುಗ್ಗಿ ಬರುತಿದೆ’ ಎಂಬುದರ ಮೊದಲ ಚರಣ ಹೀಗಿದೆ:

ಅಡಿಯ ಗೆಜ್ಜೆ ನಡುಗೆ, ಹೆಜ್ಜೆಯಿಡುತ ಸುಗ್ಗಿ ಬರುತಿದೆ
ಸುಗ್ಗಿ ಬರೆ ಹಿಗ್ಗಿ ತಿರೆ ಸಗ್ಗ ಸೊಗವ ತರುತಿದೆ
ಕಣಿವೆಯಿಳಿದು ತೆಮರನೇರಿ,
ತರುಗಳಲ್ಲಿ ತಳಿರ ಹೇರಿ,
ಹೊಸತು ಜೀವಕಳೆಯ ಬೀರಿ,
ಸುಗ್ಗಿ ಮೂಡುತಿರುವುದು
ಬನದ ಬಿನದದಿನಿದು ನಿನದ ಮನದೊಳಾಡುತಿರುವುದು

ಡಿ. ವಿ. ಗುಂಡಪ್ಪನವರು ಈ ಪಂಕ್ತಿಗಳನ್ನು ಉದ್ಧರಿಸಿ ಹೇಳಿ “ಇದನ್ನು ಬರೆಯುವ ಕವಿಗಳಿದ್ದಾರೆ.  ಇನ್ನು ಕನ್ನಡಕ್ಕೆ ಭಯವಿಲ್ಲ” ಎಂದು ಉದ್ಗರಿಸಿದರಂತೆ!  1936ರಲ್ಲಿ ಅವರ ಖಂಡಕಾವ್ಯ ‘ಚಿತ್ರಾಂಗದಾ’ ಪ್ರಕಟವಾಯಿತು.  ಇದು ಕನ್ನಡದ ಮೊದಲ ಖಂಡಕಾವ್ಯ.  1937ರಲ್ಲಿ ಅವರ ಮದುವೆಯಾಯಿತು.  ಸಂಸಾರ ಅವರಿಗೆ ಪೂಜೆಯಾಯಿತು.   

1933ರಿಂದ 36ರವರೆಗೆ ಅವರು ಕಾದಂಬರಿಯ ರಚನೆಯಲ್ಲಿ ತೊಡಗಿದರು.  1938ರಲ್ಲಿ ‘ಕಾನೂರು ಹೆಗ್ಗಡಿತಿ’ ಪ್ರಕಟವಾಯಿತು. ಕನ್ನಡದಲ್ಲಿ ಆ ಪ್ರಮಾಣದಲ್ಲಿ ರಚಿತವಾದ ಪ್ರಪ್ರಥಮ ಸಾಮಾಜಿಕ ಕಾದಂಬರಿ ಅದೇ.  ಅದರ ವೈಶಿಷ್ಟ್ಯಗಳು ಅನೇಕ.  ಅಂದಿನ ದಿನ ಮಲೆನಾಡಿನ ಕಾಡು ಬೆಟ್ಟಗಳ ಚಿತ್ರಣ; ವಿವಿಧ ರೀತಿಯ ಭೇಟೆಗಳ ವಾಸ್ತವಿಕ ವರ್ಣನೆ;  ಕನ್ನಡ ನಾಡಿನ ಇತರ ಭಾಗಗಳಿಗಿಂತ ತೀರ ಭಿನ್ನವಾಗಿದ್ದ ಪ್ರದೇಶವೊಂದರ ಆತ್ಮೀಯವಾದ ಪರಿಚಯ;  ಆಳವಾದ ಜೀವನಾನುಭವದ ರಮ್ಯ ನಿರೂಪಣೆ; ರಾಗದ್ವೇಷಗಳ ವರ್ಣರಂಜಿತ ವ್ಯಾಖ್ಯಾನ; ಸಮಯೋಚಿತ ಹಾಸ್ಯ; ಮಲೆನಾಡಿಗೇ ವಿಶಿಷ್ಟವಾದ ಕನ್ನಡ ಭಾಷೆಯ ಸೊಗಸು; ಸಾಮಾಜಿಕ ಪ್ರಜ್ಞೆ; ಮಣ್ಣನ್ನು ನಿಜವಾಗಿ ಬಲ್ಲ ವಿರಳ ಲೇಖಕರಲ್ಲಿ ಒಬ್ಬರಾದ ಈ ಕವಿ ಸಹಜವಾಗಿ, ಅಪ್ರಯತ್ನ ಪೂರ್ವಕವಾಗಿ, ವ್ಯಾಪಕವಾಗಿ ಹೊಮ್ಮಿಸಿರುವ ಮಣ್ಣಿನ ವಾಸನೆ; ಇನ್ನೂ ಅನೇಕ. 

ಕುವೆಂಪು ಅವರ ಮತ್ತೊಂದು ಕಾದಂಬರಿ “ಮಲೆಗಳಲ್ಲಿ ಮದುಮಗಳು” ಕಾನೂರು ಹೆಗ್ಗಡತಿ ಪ್ರಕಟವಾದ ಮೂವತ್ತು ವರ್ಷಗಳ ಬಳಿಕ ಪ್ರಕಟವಾಯಿತು.  ಇದರ ವಸ್ತು ಶುದ್ಧ ಕಾಮ.  ಇಲ್ಲಿ ಕಾಮಕ್ಕೆ ಉದಾತ್ತತೆಯ ದರ್ಬಾರು ಪೋಷಾಕನ್ನಾಗಲಿ, ನಮ್ಮ ಇತರ ಅನೇಕ ಲೇಖಕರು ಆರೋಪಿಸುವ ಬಡತನದ ಚಿಂದಿಯನ್ನಾಗಲಿ ಉಡಿಸಿಲ್ಲ.  ಕಾಮ ಮತ್ತು ಅದರ ಸಹಚರಿಯಾದ ಜೀವ ಕಾಮಗಳು ಇಲ್ಲಿ ಸಹಜ ಸ್ಥಿತಿಯಲ್ಲಿ, ಸ್ವಚ್ಚಂದವಾಗಿ ವಿಹರಿಸಿವೆ.  ಕನ್ನಡದ ಅತ್ಯುತ್ತಮ ಕಾದಂಬರಿಗಳು ‘ಕಾನೂರು ಹೆಗ್ಗಡತಿ ಮತ್ತು ‘ಮಲೆಗಳಲ್ಲಿ ಮದುಮಗಳು’.

1945ರಲ್ಲಿ ಕುವೆಂಪು ಕನ್ನಡ ಪ್ರಾಧ್ಯಾಪಕರೂ ಇಲಾಖೆಯ ಮುಖ್ಯಸ್ಥರೂ ಆದರು.  1949ರಲ್ಲಿ ಅವರ ಮೇರುಕೃತಿ ‘ಶ್ರೀರಾಮಾಯಣ ದರ್ಶನಂ’ ಪ್ರಕಟವಾಯಿತು.  25,000 ಪಂಕ್ತಿಗಳ ಮಹಾಕಾವ್ಯವಿದು.  ಕುವೆಂಪು ವಾಲ್ಮೀಕಿ ರಾಮಾಯಣವನ್ನು ಉತ್ತಮ ಪಡಿಸುತ್ತೇನೆ ಎಂದು ಈ ಕಾರ್ಯಕ್ಕೆ ಹೋಗಿಲ್ಲ.  ಈ ಯುಗದ ಹೊಸ ಕಾಣ್ಕೆಯ ಹಿನ್ನಲೆಯಲ್ಲಿ ಹೊಸ ರೀತಿಯಿಂದ ಹೇಳುತ್ತೇನೆ ಎಂದರು.  ಅವರ ಕಣ್ಣಿನಲ್ಲಿ ರಾಮಾಯಣ ಬರಿಯ ಕಥೆಯಲ್ಲ.  ಇತಿಹಾಸವೂ ಅಲ್ಲ.  ಅಲೌಕಿಕ ಸತ್ಯಗಳನ್ನು ಪ್ರತಿಮಿಸುವ ಸತ್ಯಸ್ಯ ಸತ್ಯ ಘಟನೆ.  ಶ್ರೀರಾಮ ಆ ಲೋಕದಿಂದ ಅವತರಿಸಿ ಬಂದು ಈ ಲೋಕ ಸಂಭವೆಯಾದ ಸೀತೆಯನ್ನು ವರಿಸುತ್ತಾನೆ.  ಆ ನೆಪದಿಂದ ಮೃತ್ ಶಕ್ತಿಯನ್ನು – ಎಂದರೆ ಬರೀ ಇಂದ್ರಿಯ ಜಗತ್ತೇ ಸತ್ಯ ಎಂಬುದನ್ನು ಮರ್ದಿಸಿ ಚೈತನ್ಯ ಶಕ್ತಿಯನ್ನು ಎಂದರೆ ಆತ್ಮದ ಶಕ್ತಿಯನ್ನು ಬೆಳಗುತ್ತಾನೆ.

 ಕುವೆಂಪು ಷೇಕ್ಸ್ ಪಿಯರನ ನಾಟಕಗಳ ರೂಪಾಂತರವಾದ ‘ಬಿರುಗಾಳಿ’(ದಿ ಟೆಂಪೆಸ್ಟ್) ಮತ್ತು ‘ರಕ್ತಾಕ್ಷಿ’(ಹ್ಯಾಮ್ಲೆಟ್)ಗಳನ್ನು ನೀಡಿದ್ದಾರೆ.  ‘ವಾಲ್ಮೀಕಿಯ ಭಾಗ್ಯ’, ‘ನನ್ನ ಗೋಪಾಲ’(ಮಕ್ಕಳಿಗಾಗಿ ಬರೆದದ್ದು), ‘ಸ್ಮಶಾನ ಕುರುಕ್ಷೇತ್ರ’ ನಾಟಕಗಳನ್ನೂ ಬರೆದರು.  ‘ಸ್ಮಶಾನ ಕುರುಕ್ಷೇತ್ರ’ ನಾಟಕ ರಚಿಸಿದಾಗ ಅವರಿಗೆ ಕೇವಲ ಇಪ್ಪತ್ತಾರು ವರ್ಷ.  ಆ ತಾರುಣ್ಯದಲ್ಲೇ ಜೀವನವನ್ನು ಸಮಗ್ರವಾಗಿ ನೋಡಿ, ಬದುಕಿಗೆ ಏನೇನೂ ಅರ್ಥವಿಲ್ಲ ಎಂಬುದನ್ನೂ, ಅಥವ ಬದುಕಿನ ಅರ್ಥ ಇಷ್ಟೇ ಎಂಬುದನ್ನು ನಿರ್ಣಯಿಸಿ ಕಾವ್ಯವಾಣಿಯಲ್ಲಿ ಮಹಾದೇವ ಮಹಾರುದ್ರನ ಬಾಯಲ್ಲಿ  ಹೀಗೆ ಹಾಡಿಸಿರುವುದು ಆಶ್ಚರ್ಯದ ಸಂಗತಿಗಳಲ್ಲಿ ಒಂದಾಗಿದೆ:

ಎಲ್ಲ ದಾನಗಳು, ಎಲ್ಲ ಧರ್ಮಗಳು
ಕಡೆಗಿಲ್ಲಿಗೇ – ಎನ್ನ ಬಳಿಗೆ!
ಎಲ್ಲ ಪಾಪಗಳು, ಎಲ್ಲ ಎಲ್ಲ ಪುಣ್ಯಗಳು
ಕಡೆಗೊಂದು ನಗೆಗೇ – ಭಸ್ಮಮೆನಗೆ!

ಅವರ ನಾಟಕಗಳ ಪಂಕ್ತಿಯಲ್ಲಿ ಕಲೆಯ ದೃಷ್ಟಿಯಿಂದಲೂ, ದರ್ಶನ ದೃಷ್ಟಿಯಿಂದಲೂ ಅತ್ಯಂತ ಉತ್ತಮವಾದದ್ದು ‘ಬೆರಳ್ ಗೆ-ಕೊರಳ್’.  ಅಲ್ಲಿನ ಮೂರು ದೃಶ್ಯಗಳನ್ನು ಕವಿ ‘ಗುರು’, ‘ಕರ್ಮ’ ಮತ್ತು ‘ಯಜ್ಞ’ ಎಂದು ಕರೆದಿದ್ದಾರೆ.  ಏಕಲವ್ಯನ ಬೆರಳನ್ನು ದಕ್ಷಿಣೆಯಾಗಿ ಕೇಳಿ, ಅವನ ಮಾತೃ ಶಾಪಕ್ಕೆ ತುತ್ತಾಗಿ ದ್ರೋಣರು ತಮ್ಮ ಕೊರಳನ್ನೇ ಬಲಿಯಾಗಿ ತೆತ್ತರು ಎಂಬುದು ಕುವೆಂಪು ಅವರ ಕಾಣ್ಕೆ. 

ಕುವೆಂಪು ಸಾವಿರಾರು ಕವನಗಳನ್ನು ರಚಿಸಿದ್ದಾರೆ.  ಕಾವ್ಯ ಮೀಮಾಂಸೆಯ ಕ್ಷೇತ್ರಕ್ಕಂತೂ ಅವರು ನೀಡಿರುವ ಕೊಡುಗೆ ಅಪೂರ್ವವಾದುದು ಎಂದು ಎಲ್ಲ ಪಂಡಿತರ ಅಭಿಪ್ರಾಯ.  ಅವರದು ‘ದರ್ಶನ ವಿಮರ್ಶೆ’.

ಕುವೆಂಪು ಅವರದು ಪ್ರಧಾನತಃ ವಿಚಾರಶೀಲ ವ್ಯಕ್ತಿತ್ವ, ಕ್ರಾಂತಿಕಾರಕ ಮನೋಭಾವ.  ಸಮಾಜದಲ್ಲಿನ ಎಲ್ಲ ವಿಧವಾದ ಅಸಮಾನತೆಗಳೂ ಹೋಗಬೇಕು ಎಂದು ಉಗ್ರವಾಗಿ ಗದ್ಯದಲ್ಲಿ, ಹೃದಯಂಗಮವಾಗಿ ಪದ್ಯದಲ್ಲಿ ವಾದಿಸಿದ್ದಾರೆ.  ಅವರು ಮೌಢ್ಯಕ್ಕೆ ಪರಮ ಶತ್ರು.  ಜಾತಿಪದ್ಧತಿ ನಿರ್ಮೂಲಗೊಳ್ಳದೆ ಈ ದೇಶದ ಜನರ ಉದ್ಧಾರ ಅಸಾಧ್ಯ ಎಂದು ಒತ್ತಿ ಒತ್ತಿ ಹೇಳಿದ್ದಾರೆ.  ಅವರು ಸದಾ ಜಪಿಸುತ್ತಿದುದು “ವಿಶ್ವಮಾನವ ಮಂತ್ರ”.  “ಜಾತಿ, ದೇಶ, ಭಾಷೆ ಇವುಗಳ ಕಿರು ಪ್ರಪಂಚದಿಂದ ಮನುಷ್ಯ ಒಂದಲ್ಲ ಒಂದು ದಿನ ಹೊರಬಂದು ವಿಶಾಲವಾದ ವಿಶ್ವಮಾನವನಾಗುತ್ತಾನೆ” ಎಂಬ ವಿಶ್ವಾಸ ಅವರಲ್ಲಿ ಅಚಲವಾಗಿತ್ತು.  “ಯಾವ ವ್ಯಕ್ತಿಯೂ ಯಾವುದೇ ಜಾತಿಯ ಶಿಶುವಲ್ಲ; ಪ್ರತಿಯೊಬ್ಬ ವ್ಯಕ್ತಿಯ ಹೃದಯದಲ್ಲೂ ಅವನದೇ ಆದ ಧರ್ಮ ಇದೆ.  ಈ ಜಗತ್ತಿನಲ್ಲಿ ಎಷ್ಟು ಜನ ವ್ಯಕ್ತಿಗಳಿದ್ದಾರೆಯೋ ಅಷ್ಟು ಧರ್ಮಗಳಿರಲಿ” ಎಂಬ ಸ್ವಾಮಿ ವಿವೇಕಾನಂದರ ವಾಣಿ ಮಾನವತೆಯ ಜೀವನ ಧರ್ಮವಾಗಲಿ ಎಂಬ ಹಾರೈಕೆ ಅವರದು. 

ತನ್ನ ಮೆಚ್ಚಿನ ಕವಿಗೆ ಕನ್ನಡದ ಜನತೆ, ಸರ್ಕಾರ, ವಿಶ್ವವಿದ್ಯಾನಿಲಯಗಳು, ಕೇಂದ್ರ ಸರ್ಕಾರ, ರಾಜ್ಯ – ಕೇಂದ್ರ ಸಾಹಿತ್ಯ ಅಕಾಡೆಮಿಗಳು – ಎಲ್ಲ ಬಗೆಯ ಅತ್ಯುನ್ನತ ಗೌರವಗಳನ್ನೂ ನೀಡಿವೆ.  1956ರಲ್ಲಿ ಅವರು ಮೈಸೂರು ವಿಶ್ವವಿದ್ಯಾಲಯದ ಉಪಕುಲಪತಿಗಳಾಗಿದ್ದರು.  1968ರಲ್ಲಿ ‘ಜ್ಞಾನಪೀಠ’ ಪ್ರಶಸ್ತಿ ‘ಶ್ರೀರಾಮಾಯಣದರ್ಶನಂ’ ಕೃತಿಗೆ ದೊರಕಿತು.  1988ರಲ್ಲಿ ಪಂಪ ಪ್ರಶಸ್ತಿ ಕೂಡ ಆ ಕೃತಿಗೆ ನೀಡಲಾಯಿತು. ರಾಷ್ಟ್ರಕವಿ ಗೌರವವನ್ನು ಅರ್ಪಿಸಲಾಯಿತು.   ಈ ಎಲ್ಲಾ ಗೌರವಗಳೂ ಹಿಮಾಚಲ ಭಾರವಾಗಬಹುದಾದವು.  ಆದರೆ ಹೂ ಹಗುರವಾಗಿ ಅವರನ್ನು ಅಲಂಕರಿಸಿದವು.  ಹಲವು ವರ್ಷಗಳ ‘ಉದಯರವಿ’ಯಲ್ಲಿನ ಅವರ ತಪೋಜೀವನವನ್ನು ಅಂತ್ಯಗೊಳಿಸಿದ ಈ ಮಹಾನ್ ವಿಶ್ವಮಾನವರು ನವೆಂಬರ್ 10, 1994ರಂದು ಈ ಲೋಕವನ್ನಗಲಿದರು.

(ಆಧಾರ: ಪ್ರಭುಶಂಕರ ಅವರು ಕುವೆಂಪು ಕುರಿತು ಬರೆದಿರುವ ‘ಸಾಲು ದೀಪಗಳು’ ಕೃತಿಯಲ್ಲಿನ ಬರಹ)

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ' ತಾಣವಾದ www.sallapa.com ನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

Wednesday, June 12, 2019

ನಮ್ಮ ಸೌರ ಮಂಡಲದಲ್ಲಿ ಇರುವ ಗ್ರಹಗಳ ಬಗ್ಗೆ ನಿಮಗೆ ಗೊತ್ತಿರದ ಅಚ್ಚರಿ ಸಂಗತಿಗಳು
 2 months ago

ಅದೊಂದು ಕಾಲವಿತ್ತು, ನಮ್ಮ ಭೂಮಿಯ ಸುತ್ತ ಸೂರ್ಯನು ಸುತ್ತುತ್ತಿದ್ದಾನೆ, ನಮ್ಮ ಭೂಮಿಯ ಮೇಲಿರುವ ನಾವುಗಳೆಲ್ಲಾ ದೇವರು ಎಂದು ನಂಬಿದ್ದಂತಹ ಕಾಲವದು. ಆದರೆ 1543 ರಲ್ಲಿ “ನಿಕೋಲಾಸ್ ಕೊಪೆರ್ನಿಕಸ್” ಎನ್ನುವ ವ್ಯಕ್ತಿಯು ಸೂರ್ಯನ ಸುತ್ತ ಭೂಮಿ ಹಾಗು ಕೆಲ ಗ್ರಹಗಳು ಸುತ್ತುತ್ತಿವೆ ಎಂದು ನಿರೂಪಿಸಿದನು. ಇದನ್ನು ಕೇಳಿದ ಅದೆಷ್ಟೋ ಜನರು ಅವನೊಬ್ಬ ಹುಚ್ಚ ಎಂದು ಆಡಿಕೊಂಡು ನಕ್ಕಿದ್ದರು. ಆದರೆ ಸಮಯ ಕಳೆದಂತೆ ಅವನ ಮಾತುಗಳು ಸತ್ಯ ಎಂದು ಜಗತ್ತಿಗೆ ತಿಳಿಯಲು ಶುರುವಾಯಿತು. ಆಗಲೇ ನೋಡಿ ಮನುಷ್ಯನಿಗೆ ನಮ್ಮ ಸೌರಮಂಡಲದ ಬಗ್ಗೆ ಹೆಚ್ಚು ತಿಳಿದುಕೊಳ್ಳುವ ಕುತೂಹಲ ಹುಟ್ಟಿದ್ದು. ಒಂದೊಂದಾಗಿ ಸೌರ ಮಂಡಲದ ಒಳಗಿರುವ ಗ್ರಹಗಳ ಬಗ್ಗೆ ಅಧ್ಯಯನ ಮಾಡುತ್ತಾ ಹೋದ ಮನುಷ್ಯನು ನಮ್ಮ ಹಾಗೆ ಬೇರೆ ಜೀವಿಗಳು ಇರುವರೇ ಎಂದು ಹುಡುಕಲು ಶುರು ಮಾಡಿದ. ಈ ಹುಡುಕಾಟದಲ್ಲಿ ಸೂರ್ಯ ಹಾಗು ಅವನ ಸುತ್ತ ಸುತ್ತುತ್ತಿರುವ ಗ್ರಹಗಳ ಬಗ್ಗೆ ಹೆಚ್ಚು ಅಧ್ಯಯನ ಮಾಡುತ್ತಾ ಅಚ್ಚರಿ ಸಂಗತಿಗಳನ್ನು ಕಲೆಹಾಕತೊಡಗಿದ. ಇಂದು ನಿಮಗೆ ಇಲ್ಲಿಯವರೆಗೂ ಕಲೆಹಾಕಿರುವ ಆ ಅಚ್ಚರಿ ಸಂಗತಿಗಳ ಬಗ್ಗೆ ತಿಳಿಸುತ್ತೇವೆ. ಮುಂದೆ ಓದಿ.

ಸೂರ್ಯ – Sun

ನಮ್ಮ ಸೌರ ಮಂಡಲದ ಹೃದಯ ಭಾಗವಾಗಿರುವ ಸೂರ್ಯನು 4.5 ಬಿಲಿಯನ್ ವರ್ಷಗಳ ಹಿಂದೆ ನಮ್ಮ ಆಕಾಶಗಂಗೆಯ “ಒರಿಯನ್ ಸ್ಪರ್” ಎನ್ನುವ ಭಾಗದಲ್ಲಿ ಸೃಷ್ಟಿಯಾದನು. ಬಲವಾದ ಗುರುತ್ವಾಕರ್ಷಣೆ ಹಾಗು ಕಾಂತೀಯ ಕ್ಷೇತ್ರ ಹೊಂದಿರುವ ಸೂರ್ಯನನ್ನು 6 ಪದರಗಳಾಗಿ ವಿಂಗಡಿಸಿ ಅಧ್ಯಯನ ಮಾಡಲಾಗಿದೆ. ಆ ಆರು ಪದರಗಳು ಈ ರೀತಿ ಇದೆ “ಕೊರೋನ, ಕ್ರೋಮೋಸ್ಪಿಯರ್, ಫೋಟೋಸ್ಫಿಯರ್, ಕನ್ವೆಕ್ಟಿವ್ ಜೋನ್, ರೇಡಿಯೇಟಿವ್ ಜೋನ್ ಹಾಗು ಕೋರ್”. ಶೇಕಡ 91 ರಷ್ಟು ಹೈಡ್ರೋಜೆನ್, 8.9 ರಷ್ಟು ಹೀಲಿಯಂ ಹಾಗು ಶೇಕಡ 0.1 ರಷ್ಟು ಇಂಗಾಲ ಮತ್ತು ನೈಟ್ರೋಜನ್ ಅನಿಲಗಳಿಂದ ತುಂಬಿರುವ ಸೂರ್ಯನು ಸುಡುವ ಬೆಂಕಿಯ ಉಂಡೆಯಾಗಿದ್ದಾನೆ. ಬರೋಬ್ಬರಿ ಒಂದುಕೋಟಿ ಹದಿನೈದು ಲಕ್ಷ ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಹೊಂದಿರುವ ಸೂರ್ಯನ ಕೋರ್ ಭಾಗದಲ್ಲಿ ಹೈಡ್ರೋಜನ್ ಅಣುಗಳು ಜೊತೆಗೂಡಿ ಹೀಲಿಯಮ್ ಅನಿಲವಾಗಿ ಪರಿವರ್ತನೆಯಾಗುತ್ತದೆ. ಇದರಿಂದ ವಿಕಿರಣ, ವಿದ್ಯುತ್ ಹಾಗು ಸೋಲಾರ್ ಗಾಳಿ ಉತ್ಪತ್ತಿಯಾಗಿ ಭೂಮಿಯ ಮೇಲೆ ಹೊಸ ಜೀವಿ ಸೃಷ್ಟಿಯಾಗಲು ಕಾರಣವಾಗುತ್ತಿದೆ. ಸೂರ್ಯನು ಅದೆಷ್ಟು ದೊಡ್ಡ ನಕ್ಷತ್ರವೆಂದರೆ ಭೂಮಿಯ ಹಾಗೆ ಇರುವ ಇನ್ನೂ 13 ಲಕ್ಷ ಭೂಮಿಗಳನ್ನು ಅದರ ಒಳಗೆ ಹಿಡಿಸಬಹುದಾಗಿದೆ.ಇಷ್ಟೊಂದು ದೊಡ್ಡ ಗಾತ್ರದಲ್ಲಿರುವ ಸೂರ್ಯನ ಗುರುತ್ವಾಕರ್ಷಣೆ ನಮ್ಮ ಸೌರ ಮಂಡಲದಲ್ಲಿರುವ ಎಲ್ಲಾ ಗ್ರಹಗಳನ್ನು ನಿರ್ಧಿಷ್ಟ ಜಾಗದಲ್ಲಿ ಇರುವ ಹಾಗೆ ನೋಡಿಕೊಳ್ಳುತ್ತಿದೆ. ಅಕಸ್ಮಾತ್ ಸೂರ್ಯನು ಇಲ್ಲವಾದಲ್ಲಿ ನಮ್ಮ ಸೌರ ಮಂಡಲದ ಎಲ್ಲಾ ಗ್ರಹ ನಕ್ಷತ್ರಗಳು ಗುರುತ್ವಾಕರ್ಷಣೆ ಕಳೆದುಕೊಂಡು ಚಿಲ್ಲಾ ಪಿಲ್ಲಿಯಾಗಿ ಎಲ್ಲೆಡೆ ಬೀಳುತ್ತವೆ. ಇದೇ ಕಾರಣಕ್ಕೆ ಸೂರ್ಯನು ನಮ್ಮ ಸೌರಮಂಡಲದ ಹೃದಯ ಎಂದು ಕರೆದಿರುವುದು.

2. ಮರ್ಕ್ಯುರಿ – Mercury


ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತ್ಯಂತ ಚಿಕ್ಕ ಗ್ರಹ. ಸೂರ್ಯನಿಂದ 36 ಮಿಲಿಯನ್ ಮೈಲಿಗಳಷ್ಟು ದೂರದಲ್ಲಿರುವ ಈ ಗ್ರಹದ ಉಷ್ಣಾಂಶವು ಬೆಳಗಿನ ಜಾವ  427 ಡಿಗ್ರಿ ಸೆಲ್ಸಿಯಸ್ ಇದ್ದರೆ ರಾತ್ರಿ ಸಮಯದಲ್ಲಿ -273 ಡಿಗ್ರಿ ಸೆಲ್ಸಿಯಸ್ ಇರುತ್ತದೆ. 4880 ಕಿಲೋಮೀಟರ್ ಸುತ್ತಳತೆ ಹೊಂದಿರುವ ಈ ಗ್ರಹವನ್ನು “ಕೋರ್, ಮ್ಯಾನ್ಟಲ್ ಹಾಗು ಕ್ರಸ್ಟ್” ಎನ್ನುವ ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಈ ಗ್ರಹದ ಇನ್ನೊಂದು ವಿಶೇಷತೆ ಏನೆಂದರೆ ಸೂರ್ಯನ ಸುತ್ತ ಸುತ್ತಲು ಕೇವಲ 88 ದಿನಗಳನ್ನು ತೆಗೆದುಕೊಳ್ಳುತ್ತದೆ. ಅಂದರೆ ಪ್ರತಿ 88 ದಿನಕ್ಕೊಮ್ಮೆ ಇಲ್ಲಿ ಹೊಸ ವರ್ಷ ಬರುತ್ತದೆ.

3. ಶುಕ್ರ ಗ್ರಹ – Venus


ಈ ಗ್ರಹವು ನಮ್ಮ ಸೌರ ಮಂಡಲದಲ್ಲಿಯೇ ಅತಿ ಹೆಚ್ಚು ಉಷ್ಣಾಂಶ ಹೊಂದಿರುವ ಗ್ರಹ. ಮರ್ಕುರಿ ಗ್ರಹದ ನಂತರ ಇರುವ ಈ ಗ್ರಹದಲ್ಲಿ ಅನೇಕ ಜ್ವಾಲಾಮುಖಿ ಪರ್ವತಗಳಿದ್ದು ಭೂಮಿಯ ಸುತ್ತಳತೆಯನ್ನೇ ಈ ಗ್ರಹವೂ ಕೂಡ ಹೊಂದಿದೆ. ಭೂಮಿಗೆ ಹಾಗು ಶುಕ್ರ ಗ್ರಹಕ್ಕೆ ಇರುವ ಒಂದೇ ಒಂದು ವ್ಯತ್ಯಾಸವೆಂದರೆ ಈ ಗ್ರಹದಲ್ಲಿ ಇಂಗಾಲದ ಡೈ ಆಕ್ಸೈಡ್ ಹೆಚ್ಚಿದ್ದು ಇದರಿಂದ ಸೂರ್ಯನ ಶಾಖವನ್ನು ಹೆಚ್ಚು ಹೀರಿಕೊಳ್ಳುತ್ತದೆ. ಇದರಿಂದಲೇ ಈ ಗ್ರಹದ ಉಷ್ಣಾಂಶ ಬರೋಬ್ಬರಿ 471 ಡಿಗ್ರಿ ಸೆಲ್ಸಿಯಸ್ ಇದೆ. ನಮ್ಮ ಸೌರ ಮಂಡಲದಲ್ಲಿ ಅತಿ ಹೆಚ್ಚು ತಾಪಮಾನ ಹೊಂದಿರುವ ಗ್ರಹವಿದು. ಈ ಗ್ರಹದ ಮೇಲೆ “ಮ್ಯಾಕ್ಸ್ವೆಲ್ ಮೊಂಟಾಸ್” ಎನ್ನುವ ಜ್ವಾಲಾಮುಖಿ ಪರ್ವತವಿದ್ದು ಅದರ ಎತ್ತರ ಮೌಂಟ್ ಎವರೆಸ್ಟ್ ನಷ್ಟು ಇದೆ. ಈ ಗ್ರಹದ ಮೇಲೆ ಸಲ್ಫೂರಿಕ್ ಆಸಿಡ್ ಮಳೆ ಆಗುವುದಲ್ಲದೆ ಘಂಟೆಗೆ 224 ಮೈಲಿಗಳಷ್ಟು ವೇಗದಲ್ಲಿ ಬೀಸುವ ಬಿರುಗಾಳಿಗಳು ಈ ಗ್ರಹದ ತುಂಬೆಲ್ಲ ಇದೆ. ವಿಜ್ಞ್ಯಾನಿಗಳ ಪ್ರಕಾರ 2.9 ಬಿಲಿಯನ್ ವರ್ಷಗಳ ಹಿಂದೆ ಈ ಗ್ರಹದ ಮೇಲೆ ಭೂಮಿಯ ಮೇಲೆ ಇರುವ ವಾತಾವರಣ ಇತ್ತಂತೆ. ಅಂದರೆ ಈ ಗ್ರಹದ ಮೇಲೆ ಕೂಡ ಜೀವಿಗಳು ಜೀವಿಸುತ್ತಿದ್ದರು ಎಂದು ಅವರು ಹೇಳಿದ್ದಾರೆ. ಈ ಗ್ರಹವನ್ನು ಅಧ್ಯಯನ ಮಾಡಲೆಂದು ಕಳುಹಿಸಿದ ಸ್ಯಾಟಲೈಟ್ಗಳು ಅಲ್ಲಿಯ ವಾತಾವರಣಕ್ಕೆ ಸಿಕ್ಕು ಸುಟ್ಟು ಭಸ್ಮವಾಗಿರುವುದು ಒಂದು ದುರಂತದ ಸಂಗತಿ.

4. ಭೂಮಿ – Earth

ಶುಕ್ರ ಗ್ರಹದ ನಂತರ ಇರುವ ನಮ್ಮ ಈ ಭೂಮಿಯು ಸಂಪೂರ್ಣ ಸೌರಮಂಡಲದಲ್ಲಿಯೇ ಜೀವಿಗಳಿಗೆ ವಾಸಿಸಲು ಯೋಗ್ಯವಾಗಿರುವ ಏಕೈಕ ಗ್ರಹ. 4.53 ಬಿಲಿಯನ್ ವರ್ಷಗಳ ಹಿಂದೆ ಸೃಷ್ಟಿಯಾದ ಈ ನಮ್ಮ ಭೂಮಿಯು ನೀರನ್ನು ಹೊಂದಿರುವ ಏಕೈಕ ಗ್ರಹವಾಗಿದೆ. ಸೂರ್ಯನಿಂದ 149.6 ಮಿಲಿಯನ್ ಕಿಲೋಮೀಟರ್ ಗಳಷ್ಟು ದೂರವಿರುವ ಈ ನಮ್ಮ ಭೂಮಿಯು ಅನೇಕ ಜೀವಿಗಳಿಗೆ ಆಶ್ರಯ ನೀಡಿದೆ. 3.5 ಬಿಲಿಯನ್ ವರ್ಷಗಳ ಹಿಂದೆ ಈ ಗ್ರಹದ ಮೇಲೆ ಜೀವಿಗಳು ಸೃಷ್ಟಿಯಾಗಿದ್ದು ಅಂದಿನಿಂದ ಇಂದಿನವರೆಗು ಸಾಕಷ್ಟು ಬದಲಾವಣೆಯಾಗುವುದರೊಂದಿಗೆ ಅನೇಕ ಜೀವಿಗಳು ಜನ್ಮ ತಾಳಿವೆ. ಆದರೆ ಭೂಮಿಯ ಮೇಲೆ ಮರಗಳು ಭೂಮಿ ಸೃಷ್ಟಿಯಾದ ನಂತರ ತತ್ಕ್ಷಣ ಹುಟ್ಟಿಕೊಳ್ಳಲಿಲ್ಲ. ಸರಿಯಾಗಿ 465 ಮಿಲಿಯನ್ ವರ್ಷಗಳ ಹಿಂದೆ ಮರಗಳು ಈ

Tuesday, January 29, 2019


Monday, November 24, 2008

ಸುಲಭಕನ್ನಡಕೈಗನ್ನಡಿ- (ಆವೃತ್ತಿ ೨.೦)

ನೀವು ಏನಾದರೂ ಬರೆಯುತ್ತಾ ಇದ್ದರೆ ಈ ಕೆಳಗಿನ ಪಟ್ಟಿ ನೋಡಿ. ಇಲ್ಲಿನ ಶಬ್ದವನ್ನ ನೀವು ಬಳಸಿದ್ದರೆ ಅದರ ಬದಲಾಗಿ ಅದರ ಮುಂದೆ ಕೊಟ್ಟಿರುವ ಸುಲಭಕನ್ನಡ ಶಬ್ದ ಬಳಸಬಹುದೋ ನೋಡಿ .. ಇಲ್ಲಿ ಸುಮಾರು ೨೫೦ ಶಬ್ದಗಳಿವೆ.

(ಸು)ದೀರ್ಘ -ಉದ್ದ
ಅಂತರಂಗ-ಒಳಗು
ಅಂತ್ಯ - ಕೊನೆ , ಕಡೆ
ಅಂಧಕಾರ - ಕತ್ತಲು, ಕತ್ತಲೆ
ಅಕಸ್ಮಾತ್ತಾಗಿ-ಪಳಚ್ಚನೆ
ಅಗೋಚರ - ಕಾಣದ
ಅಗ್ನಿ -ಬೆಂಕಿ , ಕಿಚ್ಚು
ಅಗ್ನಿಜ್ವಾಲೆ - ಬೆಂಕಿಯ (ಕೆನ್)ನಾಲಿಗೆ
ಅಜ್ಞಾತ - ತಿಳಿಯದ
ಅಧಿಕ - ಹೆಚ್ಚು
ಅನೇಕ - ಬಹಳ
ಅಪಕ್ವ - ಎಳಸು , ಹಣ್ಣಾಗದ
ಅಪೇಕ್ಷಿತ - ಬಯಸಿದ
ಅಪೇಕ್ಷೆ - ಬಯಕೆ
ಅಭಿಮತ , ಅಭಿಪ್ರಾಯ - ಅನಿಸಿಕೆ
ಅಭಿವೃದ್ಧಿ-ಏಳಿಗೆ
ಅಲರ್ಟ್- ಎಚ್ಚರ , ಕಟ್ಟೆಚ್ಚರ
ಅವನತಿ = ಕೀಳ್ಮೆ , ಇಳಿಥರ
ಅವಿಭಕ್ತ ಕುಟುಂಬ - ಕೂಡುಕುಟುಂಬ
ಅಶುದ್ಧ - ಬೆರಕೆ
ಅಸತ್ಯ -ಸುಳ್ಳು , ಸಟೆ , ಹುಸಿ
ಅಸ್ತಿತ್ವ- ಉಳಿವು , ಇರವು , ಇರುವಿಕೆ
ಆಕರ್ಷಣೆ - ಸೆಳೆತ
ಆಕರ್ಷಿಸು - ಸೆಳೆ
ಆಗಮನ- ಬರವು
ಆಗಮಿಸು - ಬರು
ಆಜ್ಞೆ- ಅಪ್ಪಣೆ
ಆದಿ - ಮೊದಲು
ಆಧಿಕ್ಯ - ಹೆಚ್ಚಳ
ಆರ್ದ್ರ - ಹಸಿ , ತೇವ
ಆಲಂಗಿಸು -ಅಪ್ಪು , ಅಪ್ಪಿಕೋ
ಆಲಿಂಗನ - ಅಪ್ಪುಗೆ
ಆಶ್ಚರ್ಯ - ಅಚ್ಚರಿ
ಆಶ್ರಯ - ಅಸರೆ , ನೆರಳು
ಆಸ್ಥಾನ - ಓಲಗ , ಓಡ್ಡೋಲಗ
ಆಹ್ವಾನ, ಆಮಂತ್ರಣ - ಕರೆ ( ಬರಹೇಳು)
ಇದಮಿತ್ಥಂ - ಇದು ಹೀಗೇ
ಉಗಮವಾಗು - ಹುಟ್ಟು
ಉಚ್ಚ - ಮೇಲ್ಮಟ್ಟದ , ಹಿರಿಯ
ಉತ್ತರ - ಬದಲು , ಜವಾಬು
ಉದ್ದೇಶಿಸಿ - ಕುರಿತು
ಉದ್ಧರಿಸು - ಮೇಲಕ್ಕೆತ್ತು
ಉದ್ಧರಿಸು - ಎತ್ತಿ ಹೇಳು
ಉದ್ಧಾರ - ಮೇಲೆತ್ತುವಿಕೆ
ಉದ್ಭವವಾಗು - ಕಾಣಿಸಿಕೊಳ್ಳು
ಉಪಲಬ್ಧ ಇರು - ಸಿಗುತ್ತ ಇರು
ಉಪಸ್ಥಿತರಿರು - ಹಾಜರಿರು
ಉಪಸ್ಥಿತಿ - ಹಾಜರಿ
ಉಪೇಕ್ಷಿಸು- ಕಡೆಗಾಣು
ಉಭಯ - ಎರಡೂ / ಇಬ್ಬರೂ
ಏಕ - ಒಂದು
ಐಕ್ಯತೆ- ಒಗ್ಗಟ್ಟು
ಐಕ್ಯಮತ- ಒಗ್ಗಟ್ಟು
ಕರ್ತವ್ಯ - ಮಾಡಬೇಕಾದ್ದು , ಮಾಡತಕ್ಕುದು
ಕಾಮ - ಮೈಯಾಸೆ
ಕಾರಾಗೃಹ-ಸೆರೆಮನೆ
ಕಾರ್ಪೆಂಟರ್ - ಬಡಗಿ , ಮರಗೆಲಸಗಾರ
ಕಾಲ-ಹೊತ್ತು
ಕಾಷ್ಠ - ಕಟ್ಟಿಗೆ
ಕುಬ್ಜ -ಕುಳ್ಳ
ಕೃತಜ್ಞ- ಹಂಗಿಗ
ಕ್ಲಿಷ್ಟ - ಕಠಿಣ
ಕ್ಷೀರ ಸಮುದ್ರ - ಹಾಲ್ಗಡಲು
ಖಾಲಿ - ಬರಿದು , ತೆರವು
ಖಾಲಿ ಮಾಡು - ಬರಿದು , ತೆರವುಗೊಳಿಸು
ಗಂಡಾಂತರ - ಕುತ್ತು, ಆಪತ್ತು
ಗರ್ವ - ಸೊಕ್ಕು
ಗಾಢಾಂಧಕಾರ - ಕಗ್ಗತ್ತಲು
ಗರ್ಭ - ಬಸಿರು
ಘಟಿಸು- ಜರುಗು
ಘೋಷಿಸು - ಸಾರು
ಚಿಂತೆ - ಕೊರಗು
ಚೋರ- ಕಳ್ಳ
ಛಿದ್ರವಾಗು - ಒಡೆ, ಒಡೆದುಹೋಗು
ಜಯಾಪಜಯ - ಸೋಲೂಗೆಲವು
ಜಲ - ನೀರು
ಜೀರ್ಣವಾಗು - ಅರಗು
ಜೀರ್ಣಿಸು - ಅರಗಿಸು
ಜೀವನ - ಬದುಕು, ಬಾಳು
ಜೀವಿಸು - ಬದುಕು,ಬಾಳು
ಜ್ಞಾಪಕ - ನೆನಪು
ಜ್ಞಾಪಕಾರ್ಥ - ನೆನಪಿನಲ್ಲಿ, ನೆನಪಿಗಾಗಿ
ಜ್ಞಾಪಿಸು - ನೆನಪಿಸು
ತಕ್ಷಣ - ಕೂಡಲೆ
ತಥಾಸ್ತು- ಹಾಗೇ ಆಗಲಿ , ಹಾಗೇ ಆದೀತು , ಒಪ್ಪಿಗೆ
ತನು - ಮೈ
ತಿರಸ್ಕರಿಸು - ಕಡೆಗಾಣು
ತಿರಸ್ಕಾರ - ಕಡೆಗಾಣುವಿಕೆ
ತುಲನೆ - ಹೋಲಿಕೆ
ತೃಷೆ- ನೀರಡಿಕೆ , ಬಾಯಾರಿಕೆ
ತೈಲ - ಎಣ್ಣೆ
ತ್ಯಜಿಸು - ಬಿಡು
ದಾಹ- ನೀರಡಿಕೆ , ಬಾಯಾರಿಕೆ
ದುಷ್ಕರ್ಮಿ- ಕೇಡಿ
ದೇಹ - ಮೈ
ದೇಹ, ಶರೀರ - ಮೈ
ದ್ವಾರ - ಬಾಗಿಲು -
ಧ್ವಜ- ಬಾವುಟ
ನಗ್ನ - ಬೆತ್ತಲೆ
ನಯನ - ಕಣ್ಣು
ನವ - ಹೊಸ/ ಒಂಬತ್ತು
ನವರಂಧ್ರ- ಒಂಬತ್ತು ತೂತು !
ನವೀನ - ಹೊಸ
ನವೀನತೆ, ನಾವೀನ್ಯ -ಹೊಸತನ
ನಾಮಕರಣ ಮಾಡು - ಹೆಸರಿಡು
ನಿಂದೆ - ತೆಗಳಿಕೆ
ನಿಯಂತ್ರಣ - ಹಿಡಿತ , ಅಂಕೆ
ನಿಯಂತ್ರಣ-ಕಡಿವಾಣ
ನಿರಾಕರಿಸು - ಅಲ್ಲಗಳೆ
ನಿರೀಕ್ಷಿಸು - ಎದುರುನೋಡು , ಇದಿರುನೋಡು
ನಿರ್ಗಮಿಸು - ತೆರಳು , ತೊಲಗು , ಹೊರಡು , ಹೊರಹೋಗು
ನಿಶ್ಚಯಿಸು- ಗೊತ್ತುಪಡಿಸು
ನೀಚ - ಕೀಳು , ಕೆಳಮಟ್ಟದ , ಕೆಳ
ನೇತಾರ - ಮುಂದಾಳು
ನೇತೃತ್ವ - ಮುಂದಾಳ್ತನ
ನೇತ್ರ - ಕಣ್ಣು
ಪಕ್ಷಿ- ಹಕ್ಕಿ
ಪತನ -ಬೀಳು
ಪಥ - ಹಾದಿ ,
ಪರಕೀಯರು -ಹೆರವರು
ಪರಸ್ಪರ - ಒಬ್ಬರನ್ನೊಬ್ಬರು , ತಮ್ಮತಮ್ಮಲ್ಲಿ
ಪರಾಜಿತ - ಸೋತವ
ಪರಿಗಣಿಸು - ಎಣಿಸು
ಪರಿಗಣನೆ - ಎಣಿಕೆ
ಪರೋಕ್ಷ - ಬಲಸು , ಬಳಸಿ
ಪರ್ಯಾಯ - ಬದಲಿ
ಪಶ್ಚಾತ್ತಾಪ -ಹಿನ್ನೋವು
ಪಾಣಿಗ್ರಹಣ ಮಾಡು - ಕೈ ಹಿಡಿ
ಪಾರಂಗತ - ನಿಪುಣ , ಕೋವಿದ , ಬಲ್ಲಿದ
ಪಾರ್ಶ್ವ - ಮಗ್ಗಲು , ಬದಿ , ಪಕ್ಕ
ಪುನಃ /ಪುನರ್ - ಮರು , ಮತ್ತೆ
ಪುನಃ ಪುನಃ - ಮತ್ತೆ ಮತ್ತೆ
ಪುನರ್ಜನ್ಮ - ಮರುಹುಟ್ಟು
ಪುರಾತನ -ಹಳೆಯ , ಹಳೇಯ ( ಬಹಳ ಹಳೆಯ ಎಂದು ಒತ್ತು ಕೊಡಬೇಕಿದ್ದರೆ :) )
ಪುಷ್ಪ -ಹೂ
ಪ್ರಕಾಶ- ಬೆಳಕು
ಪ್ರಕಾಶನ ಮಾಡು , ಪ್ರಕಾಶಿಸು - ಬೆಳಕಿಗೆ ತರು
ಪ್ರಕೋಪ- ಸಿಟ್ಟು
ಪ್ರಗತಿ-ಏಳಿಗೆ
ಪ್ರತಿ -(ಪೂರ್ವಪ್ರತ್ಯಯ) ಎದುರು , ಇದಿರು , ಇದಿರಿಸು ಇತ್ಯಾದಿ
ಪ್ರತಿ -> (ಎ)ಇದಿರು
ಪ್ರತೀದಿನ - ದಿನವೊಂದಕ್ಕೂ ...
ಪ್ರತ್ಯಕ್ಷ - ನೇರ / ಕಣ್ಣಾರೆ
ಪ್ರತ್ಯೇಕ - ಬೇರೆಯೇ
ಪ್ರದಕ್ಷಿಣೆ- ತನ್ನತನ
ಪ್ರದೇಶ - ನಾಡು,ಸೀಮೆ
ಪ್ರಯತ್ನ - ಹವಣಿಕೆ
ಪ್ರಯತ್ನಿಸು - ಹವಣಿಸು
ಪ್ರವಹಿಸು - ಹರಿ
ಪ್ರವೇಶಿಸು - ಒಳಹೊಗು
ಪ್ರಶಂಸಿಸು - ಹೊಗಳು
ಪ್ರಶಂಸೆ - ಹೊಗಳಿಕೆ
ಪ್ರಶಂಸೆ- ಹೊಗಳಿಕೆ
ಪ್ರಸವ - ಹೆರಿಗೆ
ಪ್ರಸವಿಸು - ಹೆರು
ಪ್ರಸಿದ್ಧ - ಹೆಸರಾಂತ - ಹೆಸರುವಾಸಿ
ಪ್ರಸಿದ್ಧಿ- ಹೆಸರು
ಪ್ರಾಂತ್ಯ - ನಾಡು,ಸೀಮೆ
ಪ್ರಾಚೀನತೆ - ಹಳಮೆ
ಪ್ರೇಕ್ಷಣೀಯ - ನೋಡತಕ್ಕ
ಬಂದಿ /ಕೈದಿ - ಸೆರೆಯಾಳು
ಬಂಧನ - ಸೆರೆ
ಬಹಿರಂಗ - ಬಯಲು / ಹೊರಗು
ಬಹಿರಂಗ ಪಡಿಸು - ಬಯಲಿಗೆಳೆ , ಬಯಲುಮಾಡು
ಬಹಿರಂಗ-ಹೊರಗು
ಬಹಿರ್ದೆಸೆ-ಬಯಲಕಡೆ
ಬಾಹ್ಯಾಕಾಶ - ಹೊರ-ಆಗಸ
ಭಕ್ಷಿಸು - ತಿನ್ನು ( ತಿಂದು ಹಾಕು)
ಭಗ್ನಮಂದಿರ - ಪಾಳುಗುಡಿ
ಭರ್ತಿ ಮಾಡು - ತುಂಬು
ಭಾಗವಹಿಸು- ಪಾಲ್ಗೊಳ್ಳು
ಭಿಕ್ಷುಕ - ತಿರುಕ
ಭಿಕ್ಷೆ ಬೇಡು - ತಿರಿ
ಭಿನ್ನ , ಭಿನ್ನತೆ - ಬೇರೆ, ಬೇರೆತನ
ಭೂಕಂಪ - ನೆಲನಡುಕ
ಭೆಟ್ಟಿಯಾಗು - (ಬಂದು) ಕಾಣು , ನೋಡು
ಮಂದಸ್ಮಿತ- ಮುಗುಳ್ನಗೆ
ಮಂದಹಾಸ- ಮುಗುಳ್ನಗೆ
ಮರಣ - ಸಾವು
ಮಹಾದ್ವಾರ- ಹೆಬ್ಬಾಗಿಲು
ಮಾತೃಭಾಷೆ - ತಾಯ್ನುಡಿ
ಮಾತೃತ್ವ - ತಾಯ್ತನ
ಮಾನದಂಡ- ಅಳತೆಗೋಲು
ಮಾರ್ಗ - ಬೀದಿ
ಮುಕ್ತ -ತೆರೆದ , ಬಿಡುಗಡೆ ಹೊಂದಿದ
ಮುಕ್ತಿ - ಬಿಡುಗಡೆ
ಮೃತರಾಗು - ಸಾಯು , ತೀರಿ ಹೋಗು , ತೀರು
ಯಾಚನೆ - ಬೇಡುವಿಕೆ
ಯಾಚಿಸು - ಬೇಡು
ರಕ್ತ - ನೆತ್ತರು
ರಹಸ್ಯ - ಗುಟ್ಟು, (ಒಳ)ಗುಟ್ಟು
ರಾಜ- ಅರಸ
ರಾಜಮಾರ್ಗ - ರಾಜಬೀದಿ
ರಾಜ್ಯ - ನಾಡು,ಸೀಮೆ
ರೋದನ - ಅಳು
ಲಭಿಸು , ಲಭ್ಯವಾಗು - ದೊರಕು , ಸಿಗು
ಲೇಖನ - ಬರಹ
ಲೇಖನಿ - ಲೆಕ್ಕಣಿಕೆ
ವಚನ (ಕೊಡು) - ಮಾತು(ಕೊಡು)
ವರುಣ- ಮಳೆರಾಯ
ವಾಪಸ್ಸಾಗು - ಮರಳು
ವಾಯು - ಗಾಳಿ
ವಿಜೇತ - ಗೆದ್ದವ
ವಿತರಣೆ - ಹಂಚಿಕೆ
ವಿಧ - ಬಗೆ , ತೆರ
ವಿನಂತಿ- ಬಿನ್ನಹ
ವಿನ್ಯಾಸ - ಚಿತ್ತಾರ
ವಿವಾಹ, ಲಗ್ನ - ಮದುವೆ
ವಿಶ್ವಾಸ - ನಂಬುಗೆ
ವಿಸ್ಮಯ - ಸೋಜಿಗ
ವಿಳಂಬ - ತಡ
ವೃದ್ಧಿ - ಹೆಚ್ಚಳ
ವೃದ್ಧಿಸು - ಹೆಚ್ಚು , ಹೆಚ್ಚಿಸು
ವೈಶಿಷ್ಠ್ಯ - ವಿಶೇಷತೆ
ವ್ಯಾಪಿಸು - ಹರಡು
ವ್ಯಾಪ್ತಿ - ಹರಹು
ಶಾಖ - ಕಾವು
ಶಿಬಿರ - ಪಾಳ್ಯ
ಶಿಲೆ - ಕಲ್ಲು
ಶೀತಮಾರುತ - ಚಳಿಗಾಳಿ
ಶುದ್ಧ - ಅಪ್ಪಟ , ಅಚ್ಚ
ಶುಷ್ಕ- ಒಣ
ಶ್ಲಾಘನೆ - ಹೊಗಳಿಕೆ
ಶ್ಲಾಘಿಸು - ಹೊಗಳು
ಶ್ವಾಸ- ಉಸಿರು
ಸಂಬಂಧ- ನಂ(ನೆಂ)ಟು, ನೆಂಟಸ್ತಿಕೆ , ನೆಂಟಸ್ತನ
ಸಂಬಂಧಿ(ಕ) - ನೆಂಟ
ಸಂಭವಿಸು - ಜರುಗು , ಉಂಟಾಗು , ಆಗು
ಸಂವಾದ - ಮಾತುಕತೆ
ಸತ್ಯ - ನಿಜ , ದಿಟ
ಸನ್ನಿಹಿತವಾಗು - ಹತ್ತಿರ ಬರು
ಸನ್ಮಾನ -ಮರ್ಯಾದೆ
ಸಮಯ-ಹೊತ್ತು
ಸಮಾಧಾನ ಮಾಡು - ಸಂತೈಸು
ಸಮಾಸ - ಕೂಡುನುಡಿ
ಸರ್ವ - ಎಲ್ಲ
ಸರ್ವವಿದಿತ- ಎಲ್ಲರಿಗೂ ಗೊತ್ತು.
ಸುವರ್ಣ - ಚಿನ್ನ , ಬಂಗಾರ
ಸೂಕ್ತ - ಸರಿಯಾದ
ಸೈನ್ಯ - ದಂಡು
ಸ್ಟ್ರಿಕ್ಟ್ - ಕಟ್ಟುನಿಟ್ಟು , ಬಿಗಿ
ಸ್ಥಗಿತ- ನಿಲುಗಡೆ
ಸ್ಥಗಿತಗೊಳಿಸು- ನಿಲ್ಲಿಸು
ಸ್ಥಳ - ಎಡೆ
ಸ್ಪರ್ಧಾತ್ಮಕ - ಪೈಪೋಟಿಯ
ಸ್ಪರ್ಧೆ - ಪೈಪೋಟಿ, ಮೇಲಾಟ
ಸ್ಪಷ್ಟ - ನಿಚ್ಚಳ
ಸ್ಮರಣಾರ್ಥ - ನೆನಪಿನಲ್ಲಿ, ನೆನಪಿಗಾಗಿ
ಸ್ಮರಣೆ - ನೆನಪು
ಸ್ಮರಿಸು - ನೆನೆ
ಸ್ಮೃತಿ- ನೆನಪು
ಸ್ವಂತ - ತ(ನ)ನ್ನದು
ಸ್ವಂತಿಕೆ - ತನ್ನತನ
ಸ್ವಚ್ಛ- ಚೊಕ್ಕಟ
ಸ್ವಾಗತಿಸು - ಎದುರ್ಗೊಳ್ಳು
ಸ್ವಾಗತಿಸು - ಬರಮಾಡಿಕೋ, ಇದಿರುಗೊಳ್ಳು
ಸ್ವೀಕರಿಸು - ತೆಗೆದುಕೋ ,ಒಪ್ಪಿಕೋ
ಹಸ್ತಾಂತರಿಸು - ಕೈಗೊಪ್ಪಿಸು
ಹಸ್ತಾಕ್ಷರ - ಕೈಬರಹ