Monday, July 30, 2018






ಸ್ವಾತಂತ್ರ್ಯ ದಿನಾಚರಣೆ – ಮಕ್ಕಳಿಗೆ ವಿಶೇಷ ಲೇಖನ


೧೫ ಆಗಸ್ಟ್ ೧೯೪೭ ರಂದು ಭಾರತವು ಸ್ವತಂತ್ರವಾಯಿತು. ನಮ್ಮ ಸ್ವಾತಂತ್ರ್ಯ ಸೈನಿಕರು ಆಂಗ್ಲರ ೧೫೦ ವರ್ಷಗಳ ದಾಸ್ಯತ್ವದಿಂದ ನಮ್ಮ ದೇಶವನ್ನು ಬಿಡಿಸಿದರು. ಆ ನೆನಪಿಗಾಗಿ ನಾವು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತೇವೆ.

ಭಾರತೀಯರಲ್ಲಿ ಒಗ್ಗಟ್ಟಿನ ಅಭಾವ, ಸ್ವಾತಂತ್ರ್ಯ ಪಡೆಯಲು ವಿಳಂಬ

ಭಾರತವು ಸ್ವತಂತ್ರವಾಗುವ ಮೊದಲು ಮೊಗಲರು, ಪೋರ್ತುಗೀಜರು, ಆದಿಲಶಾಹ, ಕುತುಬಶಾಹ ಮತ್ತು ಆಂಗ್ಲರಂತಹ ಅನೇಕರು ಭಾರತವನ್ನು ಆಳಿದರು. ಇವರೆಲ್ಲರೂ ಭಾರತದಲ್ಲಿದ್ದ ಸ್ವಾರ್ಥಿ ಮತ್ತು ಭ್ರಷ್ಟ ಜನರನ್ನು ತಮ್ಮ ಪಕ್ಷದಲ್ಲಿ ಸೇರಿಸಿಕೊಂಡು ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸೈನಿಕರ ಮೇಲೆ ದೌರ್ಜನ್ಯ ನಡೆಸಿ ರಾಜ್ಯವಾಳಿದರು. ವ್ಯಾಪಾರ ಮಾಡುವ ನಿಮಿತ್ತ ಆಂಗ್ಲರು ಭಾರತಕ್ಕೆ ಬಂದರು. ಹೀಗೆ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿದ್ದ ಆಂಗ್ಲರು ಲಕಗಟ್ಟಲೆ ಜನರಿದ್ದ ನಮ್ಮ ದೇಶವನ್ನು ೧೫೦ ವರ್ಷಗಳ ಕಾಲ ಆಳಿದರು. ನಮ್ಮಲ್ಲಿ ಐಕ್ಯವಿಲ್ಲದ ಕಾರಣ ಇಷ್ಟು ಕಡಿಮೆ ಸಂಖ್ಯೆಯಲ್ಲಿದ್ದ ಪರಕೀಯರು ನಮ್ಮನ್ನು ಆಳಲು ಸಾಧ್ಯವಾಯಿತು. ‘ನಮ್ಮನ್ನು ಪರಕೀಯರು ಆಳುತ್ತಿದ್ದಾರೆ; ಅವರು ಕ್ರೂರಿಗಳಾಗಿದ್ದಾರೆ’ ಎನ್ನುವುದು ನಮ್ಮ ಗಮನಕ್ಕೆ ಬಂದಿದ್ದರೂ ರಾಷ್ಟ್ರಪ್ರೇಮದ ಅಭಾವದಿಂದಾಗಿ, ನಮ್ಮಲ್ಲಿ ಒಗ್ಗಟ್ಟಿಲ್ಲದೇ ಇದ್ದುದರಿಂದ ಪರಕೀಯರು ನಮ್ಮ ಮೇಲೆ ರಾಜ್ಯವಾಳಲು ಸಾಧ್ಯವಾಯಿತು. ಭಾರತದ ಜನರಿಗೆ ಸ್ವರಾಜ್ಯದ ಬಗ್ಗೆ ಅಭಿಮಾನವಿಲ್ಲ, ರಾಷ್ಟ್ರಪ್ರೇಮ, ಸ್ವರಾಜ್ಯದ ಕುರಿತು ಆದರ, ಒಗ್ಗಟ್ಟು ಮುಂತಾದ ಗುಣಗಳು ನಮ್ಮಲ್ಲಿ ಇಲ್ಲದಿದ್ದುದರಿಂದ ಅಥವಾ ಯೋಗ್ಯ ಸಮಯದಲ್ಲಿ ಈ ಗುಣಗಳನ್ನು ನಾವು ಉಪಯೋಗಿಸದೇ ಇದ್ದುದರಿಂದ ನಾವು ಪಾರತಂತ್ರದಲ್ಲಿರಬೇಕಾಯಿತು.

ಭಾರತದ ತೇಜೋಮಯ ಇತಿಹಾಸ

ಭಾರತದ ಇತಿಹಾಸವನ್ನು ನೋಡಿದರೆ, ಅದು ಅತ್ಯಂತ ಉಜ್ವಲವಾಗಿದೆ. ಅದರಿಂದ ನಾವು ಬಹಳಷ್ಟು ಕಲಿಯಬಹುದು. ಇದಕ್ಕಾಗಿ ಶಿವಾಜಿ ಮಹಾರಾಜರ ಉದಾಹರಣೆಯು ಅತ್ಯಂತ ಆದರ್ಶಪ್ರಾಯವಾಗಿದೆ. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಅವರು ಬೆರಳೆಣಿಕೆಯಷ್ಟು ಮಾವಳಾರನ್ನು ಒಟ್ಟುಗೂಡಿಸಿ ರೋಹಿಡೇಶ್ವರನ ಸನ್ನಿಧಾನದಲ್ಲಿ ಸ್ವರಾಜ್ಯ ಸ್ಥಾಪನೆಯ ಪ್ರತಿಜ್ಞೆಯನ್ನು ಮಾಡಿದ್ದರು. ಅನಂತರ ಒಬ್ಬೊಬ್ಬ ಮಾವಳ (ಧರ್ಮಯೋಧ)ರನ್ನು ಸಜ್ಜುಗೊಳಿಸಿ, ಅವರಿಂದ ಭವಾನಿ ದೇವಿಯ ಉಪಾಸನೆ ಮಾಡಿಸಿಕೊಂಡರು. ಅವರು ಸಮರ್ಥ ರಾಮದಾಸ ಸ್ವಾಮಿಗಳ ಮಾರ್ಗದರ್ಶನದಲ್ಲಿ ಹಿಂದವೀ ಸ್ವರಾಜ್ಯವನ್ನು ಸ್ಥಾಪಿಸಿದರು. ಈ ರಾಜ್ಯವನ್ನು ಸ್ಥಾಪಿಸುವಾಗ, ಇದು ‘ಶ್ರೀಗಳ ರಾಜ್ಯವಾಗಿದೆ’ ಎಂಬ ಒಂದೇ ವಿಚಾರವನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಂಡು ಸ್ಥಾಪಿಸಿದರು.
ಎರಡನೆಯ ಉದಾಹರಣೆಯೆಂದರೆ, ಲೋಕಮಾನ್ಯ ತಿಲಕರು. ಭಾರತವು ಪಾರತಂತ್ರ್ಯದಲ್ಲಿದ್ದಾಗ ‘ಸ್ವರಾಜ್ಯವು ನನ್ನ ಜನ್ಮಸಿದ್ಧ ಹಕ್ಕು ಮತ್ತು ಅದನ್ನು ನಾನು ಪಡೆದೇ ತೀರುತ್ತೇನೆ’ ಎಂದು ಗರ್ಜಿಸಿ, ಭಾರತೀಯರನ್ನು ಜಾಗೃತಗೊಳಿಸಿದ್ದರು. ಅನಂತರ ಸ್ವಾತಂತ್ರ್ಯವೀರ ಸಾವರಕರ, ವಲ್ಲಭಭಾಯಿ ಪಟೇಲ ಮತ್ತು ಇನ್ನಿತರ ಕ್ರಾಂತಿಕಾರಿಗಳು ಮತ್ತು ಸ್ವಾತಂತ್ರ್ಯ ಸೈನಿಕರಿಂದಾಗಿ ಭಾರತವು ತಂತ್ರವಾಯಿತು.

ಸ್ವಾತಂತ್ರ್ಯ ಪಡೆದ ನಂತರದ ಭಾರತದ ಸ್ಥಿತಿ

ಪ್ರಸ್ತುತ ನಾವು ಸ್ವತಂತ್ರ ಭಾರತದಲ್ಲಿ ವಾಸಿಸುತ್ತಿದ್ದೇವೆ. ಇಂದು ನಮ್ಮ ದೇಶದಲ್ಲಿ ನಮಗೆ ಯಾವ ರೀತಿಯ ಚಿತ್ರಣ ಕಾಣಿಸುತ್ತಿದೆ ? ಇಂದು ಎಲ್ಲೆಡೆ ಭಯೋತ್ಪಾದನೆ ಹಬ್ಬಿಕೊಂಡಿದೆ. ಭಾರತದಲ್ಲಿನ ಕಾಶ್ಮೀರ, ಪಂಜಾಬ, ಗುಜಾರಾತ, ಸಿಕ್ಕಿಂ ಮುಂತಾದ ರಾಜ್ಯಗಳ ಮೇಲೆ ಗಡಿಯಲ್ಲಿರುವ ದೇಶಗಳಿಂದ ಆಕ್ರಮಣಗಳಾಗುತ್ತಿವೆ. ಪ್ರತಿದಿನ ಬಹುದೊಡ್ಡ ಪ್ರಮಾಣದಲ್ಲಿ ಅತಿಕ್ರಮಣಕಾರರು ದೇಶದೊಳಗೆ ನುಸುಳಿ ದೊಡ್ಡ ದೊಡ್ಡ ನಗರಗಳಲ್ಲಿ ಬಾಂಬ್ ಸ್ಫೋಟ ನಡೆಸುತ್ತಿದ್ದಾರೆ. ಭಯೋತ್ಪಾದಕರು ನೀಡುತ್ತಿರುವ ಬೆದರಿಕೆಯಿಂದಾಗಿ ಸ್ವಾತಂತ್ರ್ಯೋತ್ಸವ, ಗಣರಾಜ್ಯೋತ್ಸವ ಮುಂತಾದ ರಾಷ್ಟ್ರೀಯ ಹಬ್ಬಗಳನ್ನು ಸಹ ಪೊಲೀಸು ಬಂದೋಬಸ್ತಿನಲ್ಲಿ ಆಚರಿಸಬೇಕಾಗುತ್ತದೆ. ಹಾಗಾದರೆ ನಮ್ಮ ಭಾರತ ದೇಶವು ನಿಜವಾದ ಅರ್ಥದಲ್ಲಿ ಸ್ವತಂತ್ರವಾಗಿದೆಯೇನು ? ಸಂರಕ್ಷಣೆಯು ನಮಗೆ ಲಭಿಸುತ್ತಿದೆಯೇನು? ನಿಮಗೆಲ್ಲ ಏನನಿಸುತ್ತದೆ ?
ಇಲ್ಲವಲ್ಲ ! ಇದಕ್ಕಾಗಿ ನಾವು ರಾಷ್ಟ್ರಾಭಿಮಾನ ಮತ್ತು ಧರ್ಮಾಭಿಮಾನವನ್ನು ಬೆಳೆಸುವುದು ಅತ್ಯಗತ್ಯವಾಗಿದೆ !

ಇದಕ್ಕಾಗಿ ನಾವು (ಮಕ್ಕಳು) ಏನು ಮಾಡಬಹುದು ?

ರಾಷ್ಟ್ರಧ್ವಜದ ಗೌರವವನ್ನು ಕಾಪಾಡೋಣ
ಆಗಸ್ಟ್ ೧೫ ಮತ್ತು ಜನವರಿ ೨೬ ಈ ರಾಷ್ಟ್ರೀಯ ದಿನಗಳಂದು ಚಿಕ್ಕ ಆಕಾರದ ಕಾಗದದ ರಾಷ್ಟ್ರ ಧ್ವಜಗಳನ್ನು ವ್ಯಾಪಕ ಸ್ತರದಲ್ಲಿ ಮಾರಾಟ ಮಾಡುತ್ತಾರೆ. ಚಿಕ್ಕ ಮಕ್ಕಳ ಸಹಿತ ಅನೇಕ ಜನರು ರಾಷ್ಟ್ರಭಕ್ತಿ ಮತ್ತು ಉತ್ಸಾಹವನ್ನು ವ್ಯಕ್ತಪಡಿಸಲು ಈ ರಾಷ್ಟ್ರಧ್ವಜಗಳನ್ನು ಖರೀದಿಸುತ್ತಾರೆ ಮತ್ತು ಅವುಗಳನ್ನು ಹೇಗೇಗೋ ಇಡುತ್ತಾರೆ. ಕೆಲವು ದಿನಗಳ ನಂತರ ಇದೇ ಧ್ವಜಗಳನ್ನು ಹರಿದು ರಸ್ತೆಯ ಮೇಲೆ, ಕಸದ ತೊಟ್ಟಿಯಲ್ಲಿ ಮತ್ತು ಇತರ ಕಡೆಗಳಲ್ಲಿ ಬಿಸಾಡುತ್ತಾರೆ. ಹೀಗೆ ಮಾಡಿ ನಾವು ರಾಷ್ಟ್ರಧ್ವಜವನ್ನು ಅಂದರೆ ರಾಷ್ಟ್ರವನ್ನೇ ಅವಮಾನ ಮಾಡುತ್ತೇವೆ. ನೀವು ಇಂತಹ ಅಯೋಗ್ಯ ಕೃತಿಯನ್ನು ಮಾಡುವಿರೇನು ?
ನಾವೇ ನಮ್ಮ ಧ್ವಜದ ಗೌರವವನ್ನು ಕಾಪಾಡಬೇಕು. ಇತರ ಯಾರಾದರೂ ಧ್ವಜದ ಅಪಮಾನ ಮಾಡುತ್ತಿದ್ದಲ್ಲಿ ಅವರಿಗೆಲ್ಲ ನಾವು ತಿಳಿಸಿ ಹೇಳೋಣ ಮತ್ತು ನಮ್ಮ ರಾಷ್ಟ್ರೀಯ ಕರ್ತವ್ಯವನ್ನು ನಿಭಾಯಿಸೋಣ. ಆಗಸ್ಟ್ ೧೫ ಮತ್ತು ಜನವರಿ ೨೬ ರ ನಂತರ ಇತರೆಡೆಗಳಲ್ಲಿ ಬಿದ್ದಿರುವ ಧ್ವಜಗಳನ್ನು ನಾವು ಎತ್ತಿಡೋಣ. ಇದರ ಕುರಿತು ನಾವು ನಮ್ಮ ಮಿತ್ರರಿಗೂ, ನೆರೆಹೊರೆಯವರಿಗೂ ತಿಳಿಸೋಣ.
ರಾಷ್ಟ್ರೀಯ ಹಬ್ಬಗಳಂದು ಸ್ವಾತಂತ್ರ್ಯವೀರರು ರಾಷ್ಟ್ರಕ್ಕಾಗಿ ಮಾಡಿದ ಪ್ರಯತ್ನಗಳನ್ನು ನೆನಪಿಸಿಕೊಂಡು ಅವರಂತೆ ವರ್ತಿಸಲು ಪ್ರಯತ್ನಿಸೋಣ
ಆಗಸ್ಟ್ ೧೫ ರಂದು ಬೆಳಗ್ಗೆ ಧ್ವಜವಂದನೆಗಾಗಿ ನಾವೆಲ್ಲರೂ ಶಾಲೆಯಲ್ಲಿ ಸೇರೋಣ. ಧ್ವಜವಂದನೆಯಾದ ಬಳಿಕ ಶಾಲೆಗೆ ರಜೆ ಇರುವುದು ಎಲ್ಲರಿಗೂ ಗೊತ್ತಿರುವುದರಿಂದ ಹೆಚ್ಚಿನ ಮಕ್ಕಳು ಶಾಲೆಗೆ ಹೋಗದೇ ಮನೆಯಲ್ಲಿಯೇ ತುಂಬಾ ಹೊತ್ತಿನ ತನಕ ಮಲಗುವುದು, ಮನೆಯಲ್ಲಿ ದೂರದರ್ಶನವನ್ನು ನೋಡುತ್ತಾ ಕುಳಿತುಕೊಳ್ಳುವುದು, ಊರಿಗೆ ಹೋಗುವುದು ಇತ್ಯಾದಿಗಳನ್ನು ಮಾಡುತ್ತಿರುತ್ತಾರೆ. ಅದರ ಬದಲು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ವಾತಂತ್ರ್ಯವೀರರನ್ನು ಮತ್ತು ಕ್ರಾಂತಿಕಾರರನ್ನು ನೆನಪಿಸಿಕೊಂಡು ಅವರಲ್ಲಿರುವ ಯಾವ ಗುಣದಿಂದಾಗಿ ಅವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದರೋ, ಆ ಗುಣಗಳನ್ನು ನಾವು ನಮ್ಮಲ್ಲಿ ತಂದುಕೊಂಡು ಅವರಂತೆ ಆದರ್ಶರಾಗಿ ವರ್ತಿಸಲು ಪ್ರಯತ್ನಿಸೋಣ.
ಮನಸ್ಸು ಸುದೃಢವಾಗಲು ನಾಮಸ್ಮರಣೆ ಮಾಡೋಣ
ಲೋಕಮಾನ್ಯ ತಿಲಕರು, ಸ್ವಾತಂತ್ರ ವೀರ ಸಾವರಕರರು ಮುಂತಾದ ದೇಶಭಕ್ತರು ತಮ್ಮ ಶರೀರ ಮತ್ತು ಮನಸ್ಸುಗಳನ್ನು ಸುದೃಢವಾಗಿಟ್ಟುಕೊಳ್ಳಲು ಸಹ ಪ್ರಯತ್ನ ಮಾಡುತ್ತಿದ್ದರು. ನಮ್ಮ ಮನಸ್ಸು ಸುದೃಢವಾಗಿದ್ದರೆ ನಾವು ಯಾವುದೇ ಪ್ರಸಂಗವನ್ನು ಧೈರ್ಯದಿಂದ ಎದುರಿಸಬಲ್ಲೆವು. ಮನಸ್ಸು ಸುದೃಢವಾಗಲು ನಮ್ಮಲ್ಲಿ ಆತ್ಮವಿಶ್ವಾಸ ಬರುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ನಾವು ನಮ್ಮ ಇಷ್ಟದೇವತೆಯನ್ನು ಸ್ಮರಿಸುತ್ತ ಇರಬೇಕು. ದಿನದಲ್ಲಿ ಸ್ವಲ್ಪ ಸಮಯವಾದರೂ ನಾವು ದೇವರ ನಾಮವನ್ನು ಜಪಿಸಬೇಕು. ಶಾಲೆ ಅಥವಾ ತರಗತಿಗಳಿಗೆ ಹೋಗುತ್ತಿರುವಾಗ – ಬರುತ್ತಿರುವಾಗ, ಊಟ ಮಾಡುತ್ತಿರುವಾಗ ದೂರದರ್ಶನದಲ್ಲಿ ಕಾರ್ಯಕ್ರಮಗಳನ್ನು ನೋಡುತ್ತಿರುವಾಗ, ನಾವು ಮಹತ್ವದ ಕೆಲಸಗಳನ್ನು ಮಾಡದಿರುವ ಸಮಯದಲ್ಲಿ ಮನಸ್ಸಿನಲ್ಲಿ ನಾವು ನಾಮಸ್ಮರಣೆ ಮಾಡಬಹುದು.
ದೇವರ ಆಶೀರ್ವಾದವಿದ್ದರೆ ಯಾವುದೇ ಕೆಲಸಗಳನ್ನು ಮಾಡಲು ಕಷ್ಟವಾಗುವುದಿಲ್ಲ. ಅದಕ್ಕಾಗಿ ಪ್ರತಿಯೊಂದು ಕೃತಿಯನ್ನು ಮಾಡುವಾಗ ದೇವರ ಸ್ಮರಣೆ ಮಾಡುವುದು, ಪ್ರತಿಯೊಂದು ವಿಷಯವನ್ನು ದೇವರಿಗೆ ಹೇಳಿ ಮಾಡುವುದು ಅತ್ಯಗತ್ಯವಾಗಿದೆ.
ಶರೀರವು ಸುದೃಢವಾಗಲು ವ್ಯಾಯಾಮ ಮಾಡುವುದು
ಈಗಿನ ಕಾಲದಲ್ಲಿ ಮನಸ್ಸನ್ನು ಸುದೃಢಗೊಳಿಸುವಂತೆ ನಮ್ಮ ಶರೀರವನ್ನು ಸಹ ಸುದೃಢವನ್ನಾಗಿಡುವುದು ಅತ್ಯಗತ್ಯವಾಗಿದೆ. ಅದಕ್ಕಾಗಿ ನಾವು ಪ್ರತಿದಿನ ವ್ಯಾಯಾಮ ಮಾಡುವುದು ಆವಶ್ಯಕವಾಗಿದೆ. ಪ್ರತಿಯೊಬ್ಬರು ಪ್ರತಿದಿನ ಸೂರ್ಯ ನಮಸ್ಕಾರ ಮಾಡುವುದು ಮತ್ತು ಇತರರು ಯಾರಾದರೂ ನಮ್ಮನ್ನು ಹೊಡೆಯಲು ಬಂದರೆ ಅವರಿಂದ ನಮ್ಮನ್ನು ರಕ್ಷಿಸಿಕೊಳ್ಳಲು ಸ್ವಸಂರಕ್ಷಣೆಯ ತರಬೇತಿ ಪಡೆಯುವುದು ಸಹ ಅಗತ್ಯವಾಗಿದೆ. ಹಾಗಾದರೆ ಇಂದಿನಿಂದಲೇ ವ್ಯಾಯಾಮ ಮಾಡಲು ಪ್ರಾರಂಭಿಸುವಿರಲ್ಲವೇ?
ನಮ್ಮಲ್ಲಿ ನೈತಿಕಮೌಲ್ಯಗಳನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುವುದು ಪ್ರತಿಯೊಂದು ವಿಷಯವನ್ನು ಸಮಯಕ್ಕೆ ಸರಿಯಾಗಿ ಮಾಡುವುದು, ಪ್ರಾಮಾಣಿಕವಾಗಿ ಮಾಡುವುದು, ಸತ್ಯವನ್ನು ಹೇಳುವುದು, ಹಿರಿಯರನ್ನು ಗೌರವಿಸುವುದು, ಅವರಿಗೆ ಎದುರುತ್ತರ ನೀಡದಿರುವುದು ಮುಂತಾದ ವಿಷಯಗಳನ್ನು ಅಂದರೆ ನೈತಿಕ ಮೌಲ್ಯಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದು ಆವಶ್ಯಕವಾಗಿದೆ. ನಾವು ಮಾಡುತ್ತಿರುವ ಪ್ರತಿಯೊಂದು ಕೆಲಸದ ಮೇಲೆ ನಮ್ಮ ಗಮನವಿರಬೇಕು. ನಾವು ಈ ರೀತಿ ವರ್ತಿಸಿದರೆ ಮಾತ್ರ ದೇವರಿಗೆ ಮೆಚ್ಚುಗೆಯಾಗುವಂತೆ ವರ್ತಿಸುತ್ತಿದ್ದೇವೆ ಎಂದಾಗುತ್ತದೆ.
ಆದುದರಿಂದ ಇಂದಿನಿಂದಲೇ ನಾವು ನಮ್ಮ ದೇಶದ ಉತ್ತಮ ಪ್ರಜೆಗಳಾಗಲು ಪ್ರಯತ್ನ ಮಾಡಬೇಕು. ನಮ್ಮ ಪುಸ್ತಕದಲ್ಲಿ ನೀಡಿದ ಪ್ರತಿಜ್ಞೆಯಂತೆ ನಾವು ರಾಷ್ಟ್ರಾಭಿಮಾನ ಮತ್ತು ರಾಷ್ಟ್ರಭಕ್ತಿಯನ್ನು ಜಾಗೃತಗೊಳಿಸೋಣ ಮತ್ತು ಇಡೀ ಜಗತ್ತಿನಲ್ಲಿ ನಮ್ಮ ರಾಷ್ಟ್ರದ ಹೆಸರನ್ನು ಉಜ್ವಲಗೊಳಿಸಲು ಸನ್ನದ್ಧರಾಗಬೇಕು. ಇಂದಿನ ದಿನದಂದು ಭಾರತಮಾತೆಯನ್ನು ಆನಂದದಲ್ಲಿಡುವ ಪ್ರತಿಜ್ಞೆಯನ್ನು ಮಾಡೋಣ.

Categorie

ರೆಂಬ್ರಾಂಟ್

ಡಚ್ ಕಲಾವಿದ ರೆಂಬ್ರಾಂಟ್ ಎಂಬ ಹೆಸರು ಕಲಾ ಇತಿಹಾಸದಲ್ಲಿ ಜಗತ್ಪ್ರಸಿದ್ಧವಾದುದು.  ಜಗತ್ತು ಕಂಡ ಅತ್ಯದ್ಭುತ ಕಲಾವಿದರಲ್ಲಿ ರೆಂಬ್ರಾಂಟ್ ಒಬ್ಬರು.  ತಮ್ಮ ಜೀವಿತಾವಧಿಯಲ್ಲಿ ಸೃಷ್ಟಿಸಿದ ಶ್ರೇಷ್ಠ  ಕಲಾಕೃತಿಗಳಿಂದಾಗಿ ಅವರ ಜೀವನ ಕಾಲವನ್ನು  ಕಲಾಜಗತ್ತಿನ ಸ್ವರ್ಣಯುಗವೆಂದು ಕರೆಯಲಾಗಿದೆ. 

ರೆಂಬ್ರಾಂಟ್ ವಾನ್ ರಿಜ್ನ್ ಅವರು ಈಗ ನೆದರ್ ಲ್ಯಾಂಡ್ಸ್ ಎಂದು ಕರೆಯಲ್ಪಡುತ್ತಿರುವ ಅಂದಿನ ಡಚ್ ಗಣರಾಜ್ಯದ ಲೀಡನ್ ಎಂಬಲ್ಲಿ ಜುಲೈ 15, 1606ರ ವರ್ಷದಲ್ಲಿ ಜನಿಸಿದರು. ಪುಟ್ಟ ವಯಸ್ಸಿನಲ್ಲೇ ಕಲೆಯ ಕಡೆಗೆ ಆಕರ್ಷಿತರಾದ ರೆಂಬ್ರಾಂಟರು ಆ ಕಾಲದ ಶ್ರೇಷ್ಠ ಕಲಾವಿದರೆನಿಸಿದ್ದ ಪೀಟರ್ ಲಾಸ್ಟ್ ಮ್ಯಾನ್, ಜಾಕಬ್ ವಾನ್ ಸ್ವಾನೆನ್ ಬರ್ಗ್ ಮತ್ತು ಜಾಕಬ್ ಪಯ್ನಾಸ್ ಮುಂತಾದವರಲ್ಲಿ ತಮ್ಮ ಕಲಿಕೆಯನ್ನು  ಮಾಡಿದರು.  ತಮ್ಮ ಪ್ರಾರಂಭದ ದಿನಗಳಲ್ಲಿ ಅವರು ತಮ್ಮ ಚಿತ್ರವನ್ನೂ ಒಳಗೊಂಡಂತೆ ಅನೇಕ ವ್ಯಕ್ತಿಚಿತ್ರಗಳನ್ನು ಬಿಡಿಸಿದ್ದರು.

1631ರ ವರ್ಷದಲ್ಲಿ ಆಮ್ಸ್ಟರ್ಡ್ಯಾಮ್ ಪ್ರದೇಶಕ್ಕೆ ಬಂದ ರೆಂಬ್ರಾಂಟ್ ಅಲ್ಲಿ ವೃತ್ತಿಪರ ವ್ಯಕ್ತಿಚಿತ್ರ ಕಲಾವಿದರಾಗಿ ಮಾನ್ಯತೆಗಳಿಸಿದರು.  ಮುಂದೆ ರೆಂಬ್ರಾಂಟ್ ಅವರ ಕುಂಚದಲ್ಲಿ ವಿಧ ವಿಧ ರೀತಿಯ ಪೌರಾಣಿಕ, ಐತಿಹಾಸಿಕ, ಪ್ರಕೃತಿ ಚಿತ್ರಣವೇ ಮುಂತಾದ ಅನೇಕ ವಸ್ತು ವಿಚಾರಗಳ ಕುರಿತಾದ ಚಿತ್ರಗಳು ಮೂಡಲಾರಂಭಿಸಿದವು.  ರೆಂಬ್ರಾಂಟರ ಸಮಕಾಲೀನರು ಬೈಬಲನ್ನು ವರ್ಣಕಲೆಗೆ  ತಂದ ಇವರ ಸಾಮರ್ಥ್ಯವನ್ನು ಅಪಾರವಾಗಿ ಕೊಂಡಾಡಿದ್ದು ಇವರ ಚಿತ್ರಗಳಲ್ಲಿ ಹೊರಹೊಮ್ಮಿರುವ  ಭಾವನಾತ್ಮಕ ಸೂಕ್ಷ್ಮಜ್ಞತೆಗಳನ್ನು ಅಪ್ರತಿಮವೆಂದು ಪರಿಗಣಿಸಿ ಇವರನ್ನು  ಕಲಾಜಗತ್ತಿನ ಪ್ರವಾದಿ ಎಂದು ಬಣ್ಣಿಸಿದ್ದಾರೆ.   ಕಾಲ್ಪನಿಕ ಚಿತ್ರವಿನ್ಯಾಸಗಳಲ್ಲೂ ರೆಂಬ್ರಾಂಟರದು ಅಪ್ರತಿಮ ಸಿದ್ಧಿ. 

ಇಪ್ಪತ್ತನೆಯ ಶತಮಾನದ ಕಲಾಪ್ರವೀಣರ ಪ್ರಕಾರ ರೆಂಬ್ರಾಂಟ್ ವಾನ್ ರಿಜ್ನ್ ಅವರು 600ಕ್ಕೂ ಹೆಚ್ಚು ವರ್ಣ ಚಿತ್ರಗಳನ್ನೂ, 400ಕ್ಕೂ ಹೆಚ್ಚು  ಕೆತ್ತನೆಯ ರೀತಿಯ ಚಿತ್ರಗಳನ್ನೂ. ಸುಮಾರು 2000ದಷ್ಟು ರೇಖಾ ಚಿತ್ರಗಳನ್ನು ಬಿಡಿಸಿದ್ದರೆಂದು ಅಂದಾಜಿಸಿದ್ದಾರೆ.

ನೈಟ್ ವಾಚ್, ಅರಿಸ್ಟಾಟಲ್ ಕಂಟೆಂಪ್ಲೇಟಿಂಗ್ ಎ ಬಸ್ಟ್ ಆಫ್ ಹೋಮರ್, ದಿ ಮಿಲ್, ಅರ್ಟಿಮಿಸಿಯಾ ಮುಂತಾದ ಕಲಾಕೃತಿಗಳು ರೆಂಬ್ರಾಂಟರ ಕಲಾ ನೈಪುಣ್ಯವನ್ನು ಅನನ್ಯವಾಗಿ ಬೆಳಗಿದವು.  ಪ್ರಕೃತಿ ಚಿತ್ರಣದಲ್ಲಿ ಅತ್ಯಂತ ನಿಪುಣರಾದ ಇವರ ಚಿತ್ರಗಳು ಬೆಳಕು ಮತ್ತು ವರ್ಣ ಸಂಯೋಜನೆಗಳನ್ನು  ಅರಿಯಲು ಕಲಾವಿದ್ಯಾರ್ಥಿಗಳಿಗೆ ಶ್ರೇಷ್ಠ ಮಾರ್ಗದರ್ಶಕಗಳಾಗಿವೆ. ಇಂಪ್ರೆಷನಿಸಂ ಪಂಥದ ಪ್ರಮುಖ ಕಲಾಕಾರರಾದ ಇವರ ‘ದಿ ನೈಟ್ ವಾಚ್’ ಸೇರಿದಂತೆ ಹಲವಾರು ಪ್ರಸಿದ್ಧ ಕೃತಿಗಳು ಪ್ರಸ್ತುತ ನೆದರ್ ಲ್ಯಾಂಡಿನ ಕಲಾ ವಸ್ತು ಸಂಗ್ರಹಾಲಯದಲ್ಲಿ ರಕ್ಷಿಸಲ್ಪಟ್ಟಿವೆ.  ರೆಂಬ್ರಾಂಟರ ಮನೆಯನ್ನೂ ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. 

ಅನಾಟಮಿ ಲೆಸ್ಸನ್ ಆಫ್ ಡಾ. ನಿಕೋಲೇಸ್ ಟುಲ್ಪ್ (1632), ಪೋರ್ಟ್ರೈಟ್ ಆಫ್ ದಿ ಶಿಪ್ ಬಿಲ್ಡರ್ ಜಾನ್ ರಿಜ್ಕಸೆನ್ ಅಂಡ್ ಹಿಸ್ ವೈಫ್ (1633), ಬೆಲ್ಶಸ್ಸಾರ್ಸ್ ಫೀಸ್ಟ್ (1635), ನೈಟ್ ವಾಚ್ (1642), ಸಿಂಡಿಕ್ಸ್ ಆಫ್ ಡ್ರೇಪರ್ಸ್ ಗಿಲ್ಡ್ (1662) ಮುಂತಾದ ಚಿತ್ರಗಳು ರೆಂಬ್ರಾಂಟರ ವಿಶ್ವಪ್ರಖ್ಯಾತ ಚಿತ್ರಗಳಲ್ಲಿ ಸೇರಿವೆ. 

ಈ ಮಹಾನ್ ಕಲಾವಿದ ರೆಂಬ್ರಾಂಟರು ಅಕ್ಟೋಬರ್ 4, 1669ರ  ವರ್ಷದಲ್ಲಿ ಈ ಲೋಕವನ್ನಗಲಿದರು.

(ನಮ್ಮ 'ಕನ್ನಡ ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ'  ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)
ಪ್ರೇಮಚಂದ್

ಮುನ್ಷಿ ಪ್ರೇಮಚಂದರು ಭಾರತೀಯ ಸಾಹಿತ್ಯ ಲೋಕದಲ್ಲಿ ಮಹಾನ್ ಹೆಸರು.  ಅವರ ಗೋದಾನ್, ಶತರಂಜ್ ಕೇ ಖಿಲಾಡಿ, ಕೃಷ್ಣ, ವರದಾನ್, ಸೋನೆ ಕೆ ವತನ್ ಮುಂತಾದ ಕಥೆ - ಕಾದಂಬರಿಗಳು ಸಾಹಿತ್ಯ ಲೋಕದ ಅನರ್ಘ್ಯ ರತ್ನಗಳ ಸಾಲಿನಲ್ಲಿ ಚಿರವಿರಾಜಮಾನವಾದಂತಹವು.  ಕನ್ನಡವನ್ನೂ ಒಳಗೊಂಡಂತೆ ಪ್ರೇಮಚಂದರ ಕೃತಿಗಳು ವಿಶ್ವದೆಲ್ಲೆಡೆಯ ಭಾಷೆಗಳಿಗೆ ತರ್ಜುಮೆಗೊಂಡು ಅಪಾರ ಜನಸ್ತೋಮದ ಮನಸೂರೆಗೊಂಡಿವೆ. 

ಪ್ರೇಮಚಂದರು  ಬನಾರಸ್ಸಿಗೆ ನಾಲ್ಕು ಮೈಲಿ ದೂರದ ಲಮಹಿ ಎಂಬ ಗ್ರಾಮದಲ್ಲಿ ಜುಲೈ 31, 1880ರಲ್ಲಿ ಜನಿಸಿದರು.  ತಂದೆ ಅಜಾಯಬ್ ಲಾಲ, ತಾಯಿ ಆನಂದಿದೇವಿ.  ಪ್ರೇಮಚಂದರ ಹುಟ್ಟು ಹೆಸರು ಧನಪತ್ ರಾಯ್.  ಮುಂದೆ ಸರ್ಕಾರಿ ನೌಕರಿ ಸೇರಿದಾಗ ನವಾಬ್ ರಾಯ್ ಎಂಬ ಹೆಸರಿನಿಂದ ಬರೆಯಲಾರಂಭಿಸಿದರು.  ಸರ್ಕಾರ ಅವರ ಮೊಟ್ಟ ಮೊದಲ ಕಥಾ ಸಂಗ್ರಹ ‘ಸಾಜಿ ವತನ್’ ಅನ್ನು ಮುಟ್ಟುಗೋಲು ಹಾಕಿಕೊಂಡಾಗ ಈ ಹೆಸರನ್ನು ಬಿಟ್ಟು ಅಲ್ಲಿಂದ ಮುಂದೆ ‘ಪ್ರೇಮಚಂದ್’ ಎಂಬ ಹೆಸರಿನಲ್ಲಿ ತಾವು ಬರೆದ ಸಾಹಿತ್ಯವನ್ನು ಪ್ರಕಟಿಸತೊಡಗಿದರು.

ಪ್ರೇಮಚಂದರ ತಂದೆ ಅಂಚೆ ಕಚೇರಿಯ ಸಾಮಾನ್ಯ  ಗುಮಾಸ್ತ ಹುದ್ದೆಯಲ್ಲಿದ್ದರು.  ಹೀಗಾಗಿ ಬಾಲ್ಯದ ದಿನಗಳು ತುಂಬಾ ಬಡತನದಲ್ಲಿಯೇ ಕಳೆದವು.  ತಮ್ಮ ಒಂಭತ್ತನೆಯ ವಯಸ್ಸಿನಲ್ಲೇ ತಾಯಿಯನ್ನು ಕಳೆದುಕೊಂಡರು.  ತಂದೆ ಮರುವಿವಾಹವಾಗಿದ್ದರಿಂದ ಅವರಿಗೆ ಮಲತಾಯಿಯೊಡನೆ ಬದುಕು ಸವಿಯಾದುದಾಗಿರಲಿಲ್ಲ.    ಪ್ರೀತಿಯ ಅಭಾವ  ಮತ್ತು ಆರ್ಥಿಕ ದುಸ್ಥಿತಿಯಿಂದಾಗಿ ಒಂಟಿತನದ ಅನಾಥಭಾವವನ್ನು ಅನುಭವಿಸಬೇಕಾಗಿ ಬಂದದ್ದರಿಂದಲೋ ಏನೋ ಇವರ ಮನಸ್ಸು ಪುಸ್ತಕಗಳತ್ತ ಹರಿಯಿತು.  ಚಿಕ್ಕಂದಿನಲ್ಲಿಯೇ ಕೈಗೆ ಸಿಕ್ಕಿದ ಪುಸ್ತಗಳನ್ನೆಲ್ಲಾ ಓದುವುದು, ಚಿಂತನ – ಮಂಥನ ನಡೆಸುವುದು ಇವರ ಪರಿಪಾಠವಾಗಿತ್ತು.  ಹದಿನಾರನೆಯ ವಯಸ್ಸಿನಲ್ಲಿ ತಂದೆಯೂ ನಿಧನರಾದರು.  ಪ್ರೇಮಚಂದರು ಪ್ರೌಢವಯಸ್ಸಿಗೆ ಬರುವ ಹೊತ್ತಿಗೆ ಸಾಕಷ್ಟು ಓದಿಕೊಂಡಿದ್ದರು. 

ಪ್ರೇಮಚಂದರು ತಮ್ಮ ಬದುಕಿನ ಸಂಘರ್ಷದ ಮಧ್ಯೆ ಸೆಣಸಾಡುತ್ತಲೇ ಬನಾರಸ್ಸಿನಲ್ಲಿ ಮೆಟ್ರಿಕ್ ಪರೀಕ್ಷೆ ಪಾಸು ಮಾಡಿಕೊಂಡು 1899ರಲ್ಲಿ ಒಂದು ಮಿಷಿನರಿ ಶಾಲೆಯಲ್ಲಿ 18ರೂಪಾಯಿಗಳ ಸಂಬಳಕ್ಕೆ ಅಧ್ಯಾಪಕರಾಗಿ ಸೇರಿಕೊಂಡರು.  ಮುಂದೆ ಪ್ರಯಾಗ ವಿಶ್ವವಿದ್ಯಾಲಯದಿಂದ ಬಿ.ಎ ಪರೀಕ್ಷೆಯನ್ನೂ ಪಾಸುಮಾಡಿದರು.   ಪ್ರೇಮಚಂದರು ತಾವು 15 ವರ್ಷದವರಿದ್ದಾಗ ಮೊದಲ ವಿವಾಹ ಮಾಡಿಕೊಂಡರು.  ಈ ವೈವಾಹಿಕ ಸಂಬಂಧ ಅವರ ಮನೋವೃತ್ತಿಗೆ ಹೊಂದಾಣಿಕೆಯಾಗಲಿಲ್ಲವಾಗಿ, 1916ರ ವರ್ಷದಲ್ಲಿ ಸ್ವಇಚ್ಛೆಯಿಂದ ಬಾಲವಿಧವೆ ಶಿವರಾಣಿ ದೇವಿಯವರನ್ನು ವಿವಾಹ ಮಾಡಿಕೊಂಡರು. 

ಪ್ರೇಮಚಂದರು ಸಾಹಿತ್ಯ ರಚಿಸಿದ್ದು ಇಪ್ಪತ್ತನೆಯ ಶತಮಾನದ ಪ್ರಾರಂಭ ಕಾಲದಲ್ಲಿ.  ಈಗ ನಾವಿರುವುದು ಇಪ್ಪತೊಂದನೆಯ ಶತಮಾನದಲ್ಲಿ.   ಹೀಗಿದ್ದೂ ಅವರ ಕಥೆಗಳು ಎಲ್ಲ ಕಾಲಪ್ರವಾಹಗಳನ್ನೂ ದಾಟಿ ಉಳಿದು ನಿಂತಿವೆ.  ತಮ್ಮ ಕಾಲದ ಹಾಗೂ ನಂತರದ ಬಹುತೇಕ ಕಥೆಗಾರರ ಮೇಲೆ ಅವರ ಪ್ರಭಾವ ನಿರಂತರವಾಗಿ ಮೂಡಿಬಂದಿರುವುದನ್ನು  ನಾವು ಗುರುತಿಸಬಹುದು.   ಸಾಹಿತ್ಯವನ್ನು ಮನರಂಜನೆಯ ಮಟ್ಟದಿಂದ ಮೇಲೆತ್ತಿ,  ಈ ಬದುಕಿನ ಹಲವು ಸಮಸ್ಯೆಗಳಾದ ಪರಾಧೀನತೆ; ಜಮೀನ್ದಾರರು, ಬಂಡವಾಳಗಾರರು ಹಾಗೂ ಅಧಿಕಾರಿಗಳಿಂದ ಉಂಟಾದ ರೈತರ ಶೋಷಣೆ; ಬಡತನ, ನಿರಕ್ಷರತೆ, ವರದಕ್ಷಿಣೆ, ಮನೆ ಮತ್ತು ಸಮಾಜದಲ್ಲಿ ಸ್ತ್ರೀಯರ ಸ್ಥಾನಮಾನ, ವೇಶ್ಯೆಯರ ಬದುಕು, ವೃದ್ಧರ ವಿವಾಹ, ವಿಧವೆಯರ ಸಮಸ್ಯೆ, ಅಸ್ಪೃಶ್ಯತೆ – ಇವೇ ಮುಂತಾದವುಗಳನ್ನು ಸೇರಿದಂತೆ ಮಧ್ಯಮವರ್ಗದ ಸಂಸಾರಗಳ ನೂರು ನೋವುಗಳನ್ನು, ಸಾವಿರ ಪಾಡುಗಳನ್ನು ಕುರಿತು ಚಿಂತಿಸಿ ಅಭಿವ್ಯಕ್ತಿಸಿದ್ದು ಪ್ರೇಮಚಂದರ ವಿಶಿಷ್ಟತೆಯಾಗಿವೆ.   ಇವೇ ಇವರ ಸಾಹಿತ್ಯದ ಮೂಲ ದ್ರವ್ಯಗಳೂ ಹೌದು.  ಬರೆಯುವಲ್ಲಿನ ಅವರ ಬದ್ಧತೆ ಅಪಾರವಾದದ್ದು.    ಬರೆಯದಿದ್ದರೆ ತಾನು ಬದುಕುವುದೇ ಇಲ್ಲವೇನೋ ಎಂಬಷ್ಟರಮಟ್ಟಿಗೆ ಸಾಹಿತ್ಯರಚನೆ  ಅವರ ಬದುಕಿನ ಅವಿಭಾಜ್ಯ ಅಂಗವಾಗಿಹೋಗಿತ್ತು.

ಮಹಾತ್ಮ ಗಾಂಧಿಯವರನ್ನು ಮೊದಲ ಬಾರಿಗೆ ಕಂಡ ಅನುಭವದ ಬಗ್ಗೆ ಪ್ರೇಮಚಂದರು ಹೇಳುತ್ತಾರೆ:  “ಮಹಾತ್ಮರ ದರ್ಶನ ಎಂಥ ಪವಾಡಮಾಡಿತೆಂದರೆ ನನ್ನಂಥ ಮೃತಪ್ರಾಯ ವ್ಯಕ್ತಿಯೂ ಎಚ್ಚರಗೊಂಡ.  ಆದಾದ ಎರಡು ದಿನಗಳಲ್ಲೇ ನಾನು ಇಪ್ಪತ್ತು ವರ್ಷಗಳಿಂದ ಮಾಡುತ್ತಿದ್ದ ನೌಕರಿಗೆ ರಾಜಿನಾಮೆ ಕೊಟ್ಟೆ”.   ಹೀಗೆ ಗಾಂಧೀ ದರ್ಶನ ಅವರ ಮೇಲೆ ಅಪಾರ ಪ್ರಭಾವ ಬೀರಿತು.    ಹೀಗಿದ್ದಾಗ್ಯೂ ಅವರು  ‘ಗೋದಾನ’, ‘ಮಂಗಳಸೂತ್ರ’ ಮುಂತಾದ ಕಥೆಗಳನ್ನು ಬರೆಯುವ ವೇಳೆಗೆ  ಅವರಲ್ಲಿ ಕ್ರಾಂತಿಕಾರಕ ಸಾಮಾಜಿಕ ಪರಿವರ್ತನೆಯ ನಿಲುವುಗಳು ಹೆಚ್ಚು ಹೆಚ್ಚು ಅಭಿವ್ಯಕ್ತಿಗೊಂಡಿವೆ.

ಪ್ರೇಮಚಂದರು ರಚಿಸಿರುವ ವಿಫುಲವಾದ ಸಾಹಿತ್ಯವನ್ನು ನೋಡಿದರೆ ಒಬ್ಬ ವ್ಯಕ್ತಿ ತನ್ನ ಅಲ್ಪ ಜೀವಿತಾವಧಿಯಲ್ಲಿ ಇಷ್ಟೊಂದು ಕೆಲಸಮಾಡಿರುವುದು ಪವಾಡ ಎಂದೆನಿಸದಿರದು.  ಮೊದಲು ಬೇರೆ-ಬೇರೆ ಹೆಸರಿನ ಸಂಕಲನಗಳಲ್ಲಿ ಸೇರಿ ಆಮೇಲೆ ‘ಮಾನಸ ಸರೋವರ’ ಹಾಗೂ ‘ಗುಪ್ತಧನ್’ ಸಂಪುಟಗಳಲ್ಲಿ ಸಮಗ್ರವಾಗಿ ಪ್ರಕಟವಾಗಿರುವ ಅವರ ಇನ್ನೂರ ಎಪ್ಪತ್ತು ಕತೆಗಳು, ಹನ್ನೊಂದು ಕಾದಂಬರಿಗಳು, ನಾಟಕ, ವಿಮರ್ಶೆ, ಪ್ರಬಂಧ, ಅನುವಾದ, ಸಂಪಾದಕೀಯಗಳು, ಭಾಷಣಗಳು, ಶಿಶುಸಾಹಿತ್ಯ ಹಾಗೂ ಇನ್ನಿತರ ಬರಹಗಳು ಅವರ ಅಸಾಧಾರಣವಾದ ಸೃಜನಶೀಲತೆಗೆ ಜೀವಂತ ಸಾಕ್ಷಿಯಾಗಿವೆ.  ಅವರ ಕಾಲಾನಂತರದಲ್ಲಿ ಅವರ ಇನ್ನಿತರ ಅಪ್ರಕಟಿತ ಬರಹಗಳೂ ಸಾಕಷ್ಟು ಬೆಳಕು ಕಂಡಿವೆ. 

ಹಿಂದಿಯಲ್ಲಿ ಪ್ರೇಮಚಂದರು ‘ಕಾದಂಬರಿ ಸಾಮ್ರಾಟ’ರೆಂದೇ ಪ್ರಸಿದ್ಧರಾಗಿದ್ದಾರೆ.  ಇದು ಸಂಖ್ಯೆಯ ದೃಷ್ಟಿಯಿಂದ ಅನ್ವಯವಾಗದೆ,  ಸಮಕಾಲೀನ ಹಾಗೂ ಭವಿಷ್ಯದ ಬದುಕನ್ನು ಗಾಢವಾಗಿ ಪ್ರಭಾವಗೊಳಿಸಿದರೆಂಬ ನಿಟ್ಟಿನಿಂದ ಅಭಿವ್ಯಕ್ತಿತವಾದ ಗೌರವವೆನಿಸಿದೆ.  ಪ್ರೇಮಚಂದರ  ಹನ್ನೊಂದು ಕಾದಂಬರಿಗಳೆಂದರೆ ‘ಸೇವಾಸದನ್’, ‘ವರದಾನ್’, ‘ಪ್ರೇಮಾಶ್ರಮ್’, ‘ರಂಗಭೂಮಿ’, ‘ಕಾಯಾಕಲ್ಪ್’, ‘ನಿರ್ಮಲಾ’, ‘ಪ್ರತಿಜ್ಞಾ’, ‘ಗಬನ್’, ‘ಕರ್ಮಭೂಮಿ’, ‘ಗೋದಾನ್’ ಮತ್ತು ‘ಮಂಗಳಸೂತ್ರ’.

ಇಷ್ಟೆಲ್ಲಾ ಮಾಡಿದರೂ ಪ್ರೇಮಚಂದರು  ತಾವು ಪತ್ರಿಕೆ ತರಬೇಕು, ಮುದ್ರಣಾಲಯ ಮಾಡಬೇಕು ಎಂಬ ಸಾಹಿತ್ಯಕ ಆಸಕ್ತಿಗಳಲ್ಲಿ ತಮ್ಮ ಹಣವನ್ನೆಲ್ಲಾ ಕಳೆದುಕೊಂಡು ಜೀವನಪೂರ್ತಿ ಬಡತನ ಮತ್ತು ಸಾಲದ ಬಾಧೆಗಳಲ್ಲಿಯೇ  ಒದ್ದಾಡಿದರು.  ಪ್ರೇಮಚಂದರ ಬದುಕಿನ ಬಗೆಗೆ ಅವರ  ಸ್ವಯಂ ಮಾತುಗಳು ಇಂತಿವೆ:  “ಬದುಕು ನನಗೆ ಸದಾ ಕೆಲಸವನ್ನು ಕೊಟ್ಟಿದೆ.  ಕೆಲಸ-ಕೆಲಸ-ಕೆಲಸ.  ನಾನು ಸರ್ಕಾರಿ ನೌಕರಿಯಲ್ಲಿದ್ದಾಗಲೂ ನನ್ನೆಲ್ಲ ಸಮಯವನ್ನು ಸಾಹಿತ್ಯಕ್ಕಾಗಿ ನೀಡುತ್ತಿದ್ದೆ.  ಕೆಲಸ ಮಾಡುವುದರಲ್ಲಿ ನನಗೆ ಸಂತೋಷ ಸಿಗುತ್ತದೆ.  ಹಣದ ತೊಂದರೆ ಬಂದಾಗ ಕೊಂಚ ನೈರಾಶ್ಯ ಭಾವ ಆವರಿಸುತ್ತದೆ ಎಂಬುದನ್ನು ಬಿಟ್ಟರೆ ನಾನು ಹೇಗಿದ್ದೇನೋ ಅದರಲ್ಲಿಯೇ ಸಂತೃಪ್ತನಾಗಿದ್ದೇನೆ.  ನಾನು ಮಾಡಿದ್ದಕ್ಕಿಂತ ಹೆಚ್ಚು ನನಗೆ ಸಿಕ್ಕಿದೆ.  ಆರ್ಥಿಕವಾಗಿ ನಾನು ಸಂಪನ್ನನಲ್ಲ.  ವ್ಯವಹಾರ ನನಗೆ ಗೊತ್ತಿಲ್ಲ ಮತ್ತು ತೊಂದರೆಗಳಿಂದ ನನಗೆ ಎಂದೂ ಬಿಡುಗಡೆ ಸಿಗಲಿಲ್ಲ.  ನಾನು ಎಂದೂ ಪತ್ರಕರ್ತನಾಗಿರಲಿಲ್ಲ.  ಆದರೆ ಪರಿಸ್ಥಿತಿಗಳು ನನ್ನನ್ನು ಒತ್ತಾಯದಿಂದ ಪತ್ರಕರ್ತನನ್ನಾಗಿ ಮಾಡಿದವು.  ನಾನು ಸಾಹಿತ್ಯದಲ್ಲಿ ಸಂಪಾದಿಸಿದ್ದ – ಅದು ಹೆಚ್ಚೇನಿಲ್ಲ – ಎಲ್ಲವನ್ನೂ ಪತ್ರಿಕೋದ್ಯಮದಲ್ಲಿ ಕಳೆದುಕೊಂಡೆ”.

ಇಷ್ಟಿದ್ದರೂ ಪ್ರೆಮಚಂದರು  ಕೀರ್ತಿ ಹಣಗಳಿಕೆಯ ಸಣ್ಣತನಗಳಿಗೆ ಎಂದೂ  ಮಾರುಹೋಗಲಿಲ್ಲ.   ಬ್ರಿಟಿಷ್ ಸರ್ಕಾರ ಪ್ರಶಸ್ತಿ ಕೊಡಲು ಬಂದಾಗ, ಅದು ತಮ್ಮ ಸ್ವಾತಂತ್ರವನ್ನು ಕಸಿದುಕೊಳ್ಳುತ್ತದೆ ಎಂಬ ಕಾರಣಕ್ಕಾಗಿ ಅದನ್ನು ತಿರಸ್ಕರಿಸಿದರು.  ಸಮಾಜದ ಮಾನವೀಯ ಮೌಲ್ಯಗಳೇ ಅವರ ಚಿಂತನೆಯ ಆಳದಲ್ಲಿ ಪ್ರವಹಿಸುತ್ತಿತ್ತು. 

ಹೀಗೆ ಮಾನವ ಜನಾಂಗದ ಸರ್ವತೋಮುಖ ವಿಕಸನದ ಚಿಂತನೆಗಳಲ್ಲಿ ಪ್ರೇಮಚಂದ್ ತಮ್ಮನ್ನು ತಾವು ತೇಯ್ದುಕೊಂಡರು.   1936ರ ಅಕ್ಟೋಬರ್ 8ರಂದು ಪ್ರೇಮಚಂದ್ ನಿಧನರಾದಾಗ ಅವರಿಗಿನ್ನೂ ಕೇವಲ  56 ವರ್ಷ ವಯಸ್ಸು.  ಅವರು ಬಡವರನ್ನು  ದಲಿತರನ್ನು ಚಿತ್ರಿಸಿದ್ದು ತಮ್ಮ ಕೃತಿಗಳಲ್ಲಿ  ಚಿತ್ರಿಸಿದ್ದು ಮಾತ್ರವಲ್ಲ,  ಸ್ವಯಂ ತಾವೂ  ಕೊನೆಯವರೆಗೂ  ಕಡುಬಡತನದಲ್ಲಿಯೇ ಜೀವಿಸಿದರು.  ಆದರೆ ಅದು ಆರ್ಥಿಕತೆಯ ವಿಚಾರದಲ್ಲಿನ ಮಾತ್ರ.  ವೈಚಾರಿಕತೆಯ ಆಳದ ನಿಟ್ಟಿನಲ್ಲಿ  ಹೇಳುವುದೇ ಆದಲ್ಲಿ, ಪ್ರೇಮಚಂದರು ತಮ್ಮ ಕಾಯಕವೆಂಬ ಕೃತಿಗಳ ಮೂಲಕ  ಅಪಾರ  ಶ್ರೀಮಂತಿಕೆಯನ್ನು ಈ ಲೋಕಕ್ಕೆ ಬಿಟ್ಟುಹೋಗಿದ್ದಾರೆ.  ಈ ಮಹಾನ್ ಚೇತನಕ್ಕೆ ನಮ್ಮ ನಮನ.

ಮಾಹಿತಿ ಆಧಾರ:  ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿರುವ 'ಪ್ರೇಮಚಂದ್' ಗ್ರಂಥ
ಟಿ. ಪಿ. ಕೈಲಾಸಂ

“ಕನ್ನಡಕ್ಕೊಬ್ಬರೇ ಕೈಲಾಸಂ” ಎಂಬುದು ಪ್ರಸಿದ್ಧ ಮಾತು.  ಒಮ್ಮೆ ಕೈಲಾಸಂರ ಆತ್ಮೀಯರೂ, ಅಭಿಮಾನಿಯೂ ಆಗಿದ್ದ ಅ.ನ.ಕೃ ಅವರು ತಮ್ಮದೊಂದು ಲೇಖನದಲ್ಲಿ ಕೈಲಾಸಂರನ್ನು ಕುರಿತು ಅವರು ಜಗತ್ತಿನ ನಾಟಕ ಸಾಹಿತ್ಯದಲ್ಲಿ ಶ್ರೇಷ್ಠ ವಿಡಂಬನಕಾರರ ಪೈಕಿ ಆರನೆಯ ಸ್ಥಾನದಲ್ಲಿದ್ದಾರೆ ಎಂದು ಹೇಳಿ, ಉಳಿದವರು ಮೊಲಿಯರ್, ಅರಿಸ್ಟೋಫೆನಿಸ್, ವಾಲ್ಟೇರ್, ಸ್ವಿಫ್ಟ್ ಹಾಗೂ ಬರ್ನಾಡ್ ಷಾ ಎಂದು ಬರೆದಿದ್ದರು.  ಇದಕ್ಕೆ ಉದಾಹರಣೆಯಾಗಿ ಅವರು ಕೈಲಾಸಂ ಅವರ ‘ನಮ್ ಬ್ರಾಹ್ಮಣ್ಕೆ’, ‘ಟೊಳ್ಳುಗಟ್ಟಿ’, ‘ತಾಳೀ ಕಟ್ಟೋಕ್ಕೂಲೀನೇ?’,  ‘ಬಂಡ್ವಾಳ್ವಿಲ್ಲದ ಬಡಾಯಿ’,  ‘ಹೋಂರೂಲು’ ನಾಟಕಗಳ ಹಲವಾರು ಸನ್ನಿವೇಶಗಳನ್ನು ಉದ್ಘರಿಸುತ್ತಿದ್ದರು. 

ಕೈಲಾಸಂ ಅವರು ಈ ಲೋಕವನ್ನಗಲಿ  ಏಳು ದಶಕಗಳೇ ಕಳೆದಿವೆ.  ಅಂದರೆ ಇಂದಿನ ವೃದ್ಧರಲ್ಲೂ ಬಹಳಷ್ಟು ಜನ ಅವರ ಕಾಲದಲ್ಲಿ ಇರಲಿಲ್ಲ.  ಹಾಗಿದ್ದರೂ ಕೈಲಾಸಂ ಅವರ ಕುರಿತ ಬರಹಗಳು, ಅವರು ಜೋಕುಗಳು, ಉತ್ಸಾಹ ಉಕ್ಕಿಸುವ ಪದ್ಯದ ಧಾಟಿಗಳು ಇವುಗಳೆಲ್ಲದರಿಂದ ಅವರು ಒಂದು ಪ್ರೀತಿಪಾತ್ರ ಕಥಾನಕವಾಗಿ ನಮ್ಮ ನಡುವೆ ಉಳಿದಿದ್ದಾರೆ. 

ಪೌರಾಣಿಕ ನಾಟಕಗಳ ಆವರಣದಲ್ಲಿದ್ದ ಕನ್ನಡ ಜನತೆಗೆ ಸಾಮಾಜಿಕ ಸಮಸ್ಯೆಗಳನ್ನು ರಂಗಮಂಟಪವೇರಿಸಿ ಹೊಸದೊಂದು ಯುಗವನ್ನೇ ಪ್ರಾರಂಭಿಸಿದ ಕೀರ್ತಿ ಕೈಲಾಸಂ ಅವರಿಗೆ ಸಲ್ಲತಕ್ಕದ್ದು ಎಂಬುದಂತೂ ನಿರ್ವಿವಾದ.  ಪ್ರಥಮ ಬಾರಿಗೆ ಈ ಸಾಮಾಜಿಕ ನಾಟಕಯುಗದ ನಾಂದಿಯಾಗಿ ಅವರು ನೀಡಿದ ಕೊಡುಗೆ ‘ಟೊಳ್ಳು ಗಟ್ಟಿ’.  ಇದರಲ್ಲಿ ಕೈಲಾಸಂ ಜನತೆಗೆ ತಮ್ಮನ್ನು ಪರಿಚಯ ಮಾಡಿಕೊಡುತ್ತಾ “ಪ್ರಹಸನ ಪ್ರಪಿತಾಮಹ ಚಂಡ ಪ್ರಚಂಡ ಗುಂಡೂರಾಯ ನಮೋಸ್ತುಮೇ” ಎಂದು ಕನ್ನಡಿ ಹಿಡಿದು ಬಂದು ತಮ್ಮ ಕಾಲಿಗೆ ತಾವೇ ಸಾಷ್ಟಾಂಗವರ್ಪಿಸಿಕೊಂಡರು. 

ಅಂದಿನ ನೂಕುನುಗ್ಗಲಿನ ರಂಗಮಂದಿರದೊಳಗೆ ಗಡ್ಡಗಳಿಲ್ಲದ, ಗದೆ ಕತ್ತಿಗಳನ್ನೇ ಕಾಣದ, ಕಿರೀಟಾದಿ ಆಭರಣರಹಿತವಾದ ಜನಸಾಮಾನ್ಯರು ಪ್ರವೇಶ ಮಾಡುವುದೆಂದರೇನು?  ಇಂತಹ ಸಮಯದಲ್ಲಿ ಕೈಲಾಸಂ ತಮ್ಮ ಹಾವಾಡಿಗನ ಬುಟ್ಟಿಯಲ್ಲಿ ಕಟ್ಟಿ ತಂದ, ಸಾಮಾನ್ಯ ಮಾನವರಾದ ರಂಗಣ್ಣ, ರಾಮಣ್ಣ, ಅಹೋಬ್ಲು, ನಾಗತ್ತೆ, ಸುಬ್ಬಮ್ಮ, ಪಾತು, ಸಾತು, ಬಾಳು, ನರಸಿಂಹಯ್ಯ, ಪೋಸ್ಟ್ ಮನ್, ಗಡಫ್ ಖಾನ್, ಪೋಲಿಕಿಟ್ಟಿ, ಕುಪ್ಪಣ್ಣ ಇತ್ಯಾದಿ ಮಂದಿಯನ್ನು ಧೈರ್ಯವಾಗಿ ರಂಗಮಂಟಪಕ್ಕೇರಿಸಿದರು.  ಈ ಕೈಲಾಸಂ ಪಾತ್ರಗಳ ಮಾತಿನ ಚಕಮಕಿ, ವಿನೋದಪೂರ್ಣ ವಿವಾದಗಳು, ವಿಚಿತ್ರ ಸನ್ನಿವೇಶಗಳು ಜನರನ್ನು ಕಕ್ಕಾಬಿಕ್ಕಿ ಮಾಡಿದವು.  ಈ ವಿಚಿತ್ರ ವ್ಯಕ್ತಿಗಳ ನಡೆ ನುಡಿಗಳ ಆಕರ್ಷಣೆಗೆ ಪ್ರೇಕ್ಷಕರು ಮಾರುಹೋದರು.  ಕನ್ನಡ ನಾಟಕ ರಂಗಕ್ಕೆ ಹತ್ತಿದ್ದ ಪೌರಾಣಿಕ ತೆವಲು ಬಿಟ್ಟುಹೋಯಿತು.  ಸಾಮಾನ್ಯ ಜನರ ದಿನನಿತ್ಯದ ಜೀವನದ ಹಿಂದೆ ಅಡಗಿರುವ ಕಾಪಟ್ಯ, ವಂಚನೆ, ನಟನೆ, ಆಟಾಟೋಪ, ಅಟ್ಟಹಾಸ, ಮೋಸ, ಠಕ್ಕುಗಳನ್ನೆಲ್ಲಾ ಈ ನಾಟಕಗಳು ಬಯಲು ಮಾಡಿದವು.  ಇಂತಹ ವೈವಿಧ್ಯಮಯ ಆಕರ್ಷಣೆ ಎದುರಿನಲ್ಲಿ ದೇವದಾನವರ ನಾಟಕೀಯ  ಆರ್ಭಟಗಳು ಹುಸಿ ಎನಿಸಿದವು.  ಹೀಗೆ ಕನ್ನಡದ ಸಾಮಾಜಿಕ ನಾಟಕಗಳ ಹೊಸ ಯುಗ ಆರಂಭವಾಯಿತು.  ಇದರ ಆದ್ಯ ಪ್ರವರ್ತಕ ಶ್ರೀ ತ್ಯಾಗರಾಜ ಪರಮಶಿವ ಕೈಲಾಸಂ.

ಕೈಲಾಸಂ ಅವರು ಹುಟ್ಟಿದ್ದು ಜುಲೈ 29, 1884ರಲ್ಲಿ.  ಅವರು ಜಸ್ಟೀಸ್ ಪರಮಶಿವ ಐಯ್ಯರ್ ಅವರ ಮಕ್ಕಳು.  ಇವರ ವಿದ್ಯಾಭ್ಯಾಸ ಮೈಸೂರು, ಬೆಂಗಳೂರು, ಹಾಸನಗಳಲ್ಲಾಯಿತು.  ಕಾಲೇಜು ವಿದ್ಯಾಭ್ಯಾಸ ಮತ್ತು ಪ್ರಶಸ್ತಿ ಪಡೆದುದು ಮದ್ರಾಸಿನಲ್ಲಿ,  ಬಾಲ್ಯದಿಂದಲೇ ಕೈಲಾಸಂ ಚಾಣಾಕ್ಷಮತಿ ಎಂದು ಹೆಸರುಗಳಿಸಿದ್ದು ಪರೀಕ್ಷೆಗಳಲ್ಲಿ ‘ಫಸ್ಟ್ ಕ್ಲಾಸು’ಗಳನ್ನೇ ಸಿಗಿದು ಸಿಪ್ಪೆ ಹಾಕಿದ್ದರು.  ಕಡೆಗೆ ಭೂಗರ್ಭ ಶಾಸ್ತ್ರದ ಉನ್ನತ ಪದವಿಗಾಗಿ ಲಂಡನ್ನಿನ ರಾಯಲ್ ಕಾಲೇಜಿಗೆ ಸೇರಿ ಅಲ್ಲಿ ಪ್ರಶಸ್ತಿ ಪಡೆದು ಬಂದರು.  ಇಂಗ್ಲೆಂಡಿನಲ್ಲಿದ್ದ ಹಲವು ವರ್ಷಗಳ ಕಾಲದಲ್ಲಿ ಇವರು ಅಲ್ಲಿನ ಸರ್ಕಸ್ ಕೂಟಗಳು, ನೃತ್ಯಮಂದಿರಗಳು, ನಾಟಕ ರಂಗಗಳ ಅಮೂಲಾಗ್ರ ಪರಿಚಯ ಮಾಡಿಕೊಂಡು ಬಂದರು.  ಇದಲ್ಲದೆ ಯೂಜಿನ್ ಸಾಂಡೋ ಎಂಬ ವ್ಯಾಯಾಮಪಟುವಿನ ಬಳಿ ‘ಫಿಸಿಕಲ್ ಕಲ್ಚರ್’ ಶಿಕ್ಷಣ ಪಡೆದರು.  ಇಂಗ್ಲೆಂಡಿನ ಪುಟ್ ಬಾಲ್ ಟೀಮಿನ ಗೊಲಿಯಾಗಿಯೂ ಆಡುತ್ತಿದ್ದರಂತೆ.  ಇವರ ಮೈಕಟ್ಟು ಅತ್ಯಂತ ದೃಢವಾದುದೂ ಆಗಿತ್ತು.  ಇಷ್ಟಲ್ಲದೆ ಅಲ್ಲಿನ ಸಂಗೀತ ಸಾಹಿತ್ಯಗಳಲ್ಲಿ ಇವರ ಪ್ರೌಢಿಮೆ ಅಸದಳವಾಗಿತ್ತು.  ಇವರ ‘ತಿಪ್ಪಾರಳ್ಳಿ’, ‘ಕೊಳೀಕೆರಂಗಾ’, ‘ನೋಡಿದ್ರಾ ನಂ ನಂಜೀನಾವ’ ಕೇಳಿದರೆ ಪಾಶ್ಚಾತ್ಯರ ಸಂಗೀತದ ಮರ್ಮಗಳ ಐತಿಹ್ಯ ಇವರಿಗೆ ಎಷ್ಟುಮಟ್ಟಿಗೆ ಕರತಲಾಮಲಕವಾಗಿತ್ತೆಂದು ಊಹಿಸಬಹುದು.  ಇವರ ಇಂಗ್ಲಿಷ್ ಕವನಗಳಲ್ಲೂ, ನಾಟಕಗಳಲ್ಲೂ ಕಾಣ ಬರುವ ಶೈಲಿ ಇವರಿಗೆ ಆ ಭಾಷೆಯ ಮೇಲಿದ್ದ ಅಧಿಪತ್ಯವನ್ನು ಶೃತಪಡಿಸುತ್ತದೆ.

ಇವುಗಳೆಲ್ಲಕ್ಕೂ ಹೆಚ್ಚಾಗಿ ಇವರ ವಿನೋದಪ್ರಿಯತೆ ಇವರನ್ನು ಒಬ್ಬ ‘ಜೀನಿಯಸ್’ರನ್ನಾಗಿ ಮಾಡಿತು ಎನ್ನುವುದರಲ್ಲಿ ಸಂದೇಹವಿಲ್ಲ.  ಇವರ ನಾಟಕದ ಪಾತ್ರಗಳನ್ನೇ ಒತ್ತಟ್ಟಿಗಿಟ್ಟರೂ ಇವರು ಕಟ್ಟುತ್ತಿದ್ದ ಅಣಕವಾಡುಗಳು, ಕುಂಟ್ಪದಿಗಳು, ವಕ್ರೋಕ್ತಿಗಳು, ಚುಟುಕಚಾಟೋಕ್ತಿಗಳು, ಜೋಕುಗಳು ಅಸಂಖ್ಯಾತವಾಗಿವೆ.  ಇದನ್ನು ಕೇಳುವ ಜನ ಈಗಲೂ ಹೊಟ್ಟೆ ಹುಣ್ಣಾಗುವಷ್ಟು ನಕ್ಕು ಇಡೀ ಜೀವಮಾನ ಅವನ್ನು ಚಪ್ಪರಿಸುವುದು ವಾಡಿಕೆ.  ಕೈಲಾಸಂ ಎಂದರೆ ಕುಚೋದ್ಯಕ್ಕೆ ಮತ್ತೊಂದು ಹೆಸರು ಎನ್ನುವಷ್ಟು ಇವರ ನುಡಿಕಟ್ಟುಗಳು ಪ್ರಸಿದ್ಧವಾಗಿವೆ.

ಕೈಲಾಸಂ ಸ್ವತಃ ವರದಾಚಾರ್ಯರ ನಾಟಕಗಳಲ್ಲಿ ಪಾತ್ರಧಾರಿಯಾಗಿದ್ದುದಲ್ಲದೆ ಆಚಾರ್ಯರು ತೀರಿಕೊಂಡಾಗ ಅವರ ಕಂಪೆನಿ ಯಜಮಾನ್ಯ ವಹಿಸಿಕೊಂಡುದು ಹಲವರಿಗೆ ತಿಳಿಯದು.  ಅವರಿಗೆ ಅಂದಿನ ಪೌರಾಣಿಕ ನಾಟಕಗಳ ಸಂಪೂರ್ಣ ಪರಿಚಯವೇ ಅಲ್ಲದೆ ಅಯಾ ಹಾಡುಗಳ ಸರ್ವಲಕ್ಷಣಗಳೂ ಗೊತ್ತಿದ್ದವು.  ಸ್ವತಃ ಅವರಿಗೆ ಸಂಗೀತದ ಅನುಭವವೇ ಅಲ್ಲದೆ ಸಂಗೀತ ಲಕ್ಷಣಶಾಸ್ತ್ರದ ಗಾಢ ಪರಿಚಯವಿತ್ತು.  ಶಂಬರನ ಶೃಂಗಾರದಲ್ಲಿ ಅವರು ಹಂಸಧ್ವನಿ, ಶಹನ, ಫರಜ್, ಬೇಗಡೆ, ಕಮಾಚ್ ರಾಗಗಳ ಅತ್ಯುತ್ತಮ ಕೃತಿಗಳನ್ನು ರಚಿಸಿದ್ದಾರೆ. 

ಕೈಲಾಸಂ ಅವರ ನಾಟಕಗಳ ಉದ್ದಕ್ಕೂ ಜನ ಹೊಟ್ಟೆ ಹುಣ್ಣಾಗುವಷ್ಟು ನಗುತ್ತಿದ್ದರೂ ಅದರ ಹಿನ್ನಲೆಯಲ್ಲಿ ನಮ್ಮ ಸಮಾಜದ ಅನಿಷ್ಟ ಪ್ರವೃತ್ತಿಗಳನ್ನು, ಕ್ಷಕಿರಣಗಳನ್ನು ಚೆಲ್ಲಿ ತೋರಿಸಿದ್ದಾರೆ.  ದೊಡ್ಡ ರಕ್ತದವರಾಡುವ ಆಂಗ್ಲೋ ಕನ್ನಡ, ಶೆಟ್ರ ತೆಲುಗು, ಐಯ್ಯರಿ, ಐಯ್ಯಂಗಾರ್ಸ್, ಸಂಕೇತಿಗಳಾಡುವ ವಿಧವಿಧ ಶೃತಿಗಳಿರುವ ತಮಿಳು, ಗಡಫ್ ಖಾನರ ಉರ್ದು ಮಿಶ್ರಿತ ಕನ್ನಡ ಎಷ್ಟೊಂದು ರಸಭರಿತ ಎಂದು ವರ್ಣಿಸಲು ಸಾಧ್ಯವಿಲ್ಲ.  ಇದು ಅತ್ಯಂತ ಶಕ್ತಿಯುತ ಎನ್ನಬೇಕು. 

ಕೈಲಾಸಂ ಭೂಗರ್ಭಶಾಸ್ತ್ರದಲ್ಲಿ ಅತ್ಯುನ್ನತ ಪದವಿ ಪಡೆದು ಶ್ರೀಮಂತ ವಂಶದ ಆಸರೆ ಇದ್ದು, ಸರ್ಕಾರಿ ಉದ್ಯೋಗ ದೊರಕಿದ್ದರೂ ಸಹಾ ಅದನ್ನೆಲ್ಲಾ ತೊರೆದರು.  ಅವರಿಗೆ ಲಂಡನ್ನಿನಲ್ಲಿ ವೈಲ್ಡ್, ಷಾ, ಪೆರಿಡನ್,  ಇಬ್ಸನ್, ಷೇಕ್ಸ್ಪಿಯರನ ನಾಟಕಗಳನ್ನು ನೋಡಿ ಅಂತೆಯೇ ನಮ್ಮ ನಾಟಕವನ್ನು ಇಂದಿನ ಯುಗಕ್ಕೆ ಕೊಂಡೊಯ್ಯುವುದೆಂತು ಎಂಬ ಚಿಂತೆ ಸರ್ವದಾ ಕಾಡುತ್ತಿದ್ದಿತು.  ಅದಕ್ಕಾಗಿ ಅವರು ಸರ್ವಸ್ವವನ್ನೂ ತೊರೆದು ಅಲೆಮಾರಿಯಾದರು.  “ಕೂತಲ್ಲಿ ಕಂಪೆನಿ... ನಿಂತಲ್ಲಿ ನಾಟ್ಕ” ಅವರು ಹೋದಲ್ಲೆಲ್ಲಾ ನಾಟಕವಾಡಿಸುವರು.  ತಾವೇ 4 ಗಂಟೆಗಳ ಕಾಲ ಏಕಪಾತ್ರಾಭಿನಯ ಮಾಡಿ ಪ್ರದರ್ಶನಗಳನ್ನು ನೀಡುತ್ತಿದ್ದರು.  ಅವರಿಗೆ ಕೈ ಬರಹದ ಪ್ರತಿ ಅವಶ್ಯವಿರಲಿಲ್ಲ.  ನಾಲ್ಕಾರು ನಾಟಕಗಳನ್ನೂ, ನೂರಾರು ಹಾಡುಗಳನ್ನೂ, ಹಲವಾರು ಅಣಕುವಾಡುಗಳನ್ನೂ ನೀಡಿ, ಜನರನ್ನು ಚುಚ್ಚಿ ನಗಿಸುವರು.  ಇವರ ಇಡೀ ಜೀವಮಾನವೇ ಹೀಗೆ ಜರುಗಿತು.  ಇವರು ಮಾತನಾಡುವುದನ್ನು ಪೀಡಿಸಿ ಕೆಲವರು ಬರೆದುಕೊಂಡರೆ ಉಂಟು ಇಲ್ಲದಿದ್ದರೆ ಅದೂ ಇಲ್ಲ.  ಇಂದು ಈ ಊರು, ನಾಳೆ ಮತ್ತೊಂದೂರು, ತಂಗುವ ಸ್ಥಳ ಅನಿರ್ದಿಷ್ಟ, ಅಡ್ರೆಸ್ ನಾಪತ್ತೆ ಈ ರೀತಿ ತಿರುಗಿದ ಇವರ ಜೀವನದಲ್ಲಿ ಸುವ್ಯವಸ್ಥಿತ ಕ್ರಮವೆಲ್ಲಿಂದ ಬಂದೀತು?  ಇಷ್ಟಾಗಿ ಸುಮಾರು ಇಪ್ಪತ್ತೈದು ಕನ್ನಡ ನಾಟಕಗಳು, ಆರು ಇಂಗ್ಲಿಷ್ ನಾಟಕಗಳು ಅಚ್ಚಾಗಿವೆ.  ಇದಕ್ಕೆ ಕಾರಣರಾದವರಲ್ಲಿ ಬಿ.ಎಸ್. ರಾಮರಾಯರು, ಕೆ. ಸಂಪದ್ಗಿರಿರಾಯರು, ಜಿ. ಪಿ. ರಾಜರತ್ನಂ, ಕೆ. ವಿ. ಅಯ್ಯರ್, ಟಿ. ತಾತಾಚಾರ್ಯ ಶರ್ಮ, ಎ. ಸೀತಾರಾಂ  ಬಹುಮಟ್ಟಿಗೆ ಕಾರಣರಾದವರು.  ಇದು ಕನ್ನಡ ನಾಡಿನ ಸೌಭಾಗ್ಯ ಎನ್ನಲು ಅಡ್ಡಿ ಇಲ್ಲ. 

ಕೈಲಾಸಂ ಕನ್ನಡದಲ್ಲಿ ದುರಂತ ನಾಟಕಗಳನ್ನೇ ಬರೆಯಲಿಲ್ಲ ಎಂಬುವರನ್ನು ಹೊಡೆದೇಳಿಸುವಂತ ದುರಂತ ನಾಟಕ ‘ಬಹಿಷ್ಕಾರ’.  ಮದುವೆಯಾಗದ ಕನ್ಯೆ, ಉಳಿದ ಕುಟುಂಬದವರಿಗೆ ಆಚಾರದ ಹೆಸರಿನಲ್ಲಿ ಸಮಾಜ ಕೊಡುವ ನರಕಯಾತನೆಯ ಕ್ರೌರ್ಯ ಇದರಲ್ಲಿ ಚಿತ್ರಿತವಾಗಿದೆ.  ಕೈಲಾಸಂರವರಿಗೆ ಇಂಗ್ಲೀಷಿನಲ್ಲಿದ್ದ ಅದ್ವಿತೀಯ ಪಾಂಡಿತ್ಯ. ಷಾ, ವೈಲ್ಡ್, ಇಬ್ಸನ್, ಷೇಕ್ಸ್ಪಿಯರ್ ನಾಟಕಗಳನ್ನು ಇಡೀ ರಾತ್ರಿ ಅಭಿನಯಿಸುವ ಚಟ ಇವರಿಗಿತ್ತು. ಇವುಗಳ ಜೊತೆಗೆ  ಪುರಾಣಗಳ ಅಗಾಧ ಪರಿಚಯದಿಂದಾಗಿ ಅವರು ಪರ್ಪಸ್, ಫುಲ್ಫಿಲ್ಮೆಂಟ್, ಬರ್ಡನ್, ಕರ್ಣ, ಕೀಚಕ ಇತ್ಯಾದಿ ನಾಟಕಗಳನ್ನು ಸೃಷ್ಟಿಸಿ ಹೋಗಿದ್ದಾರೆ.  ಇದಲ್ಲದೆ ಅವರು ಇಂಗ್ಲಿಷಿನಲ್ಲಿ ಹಲವಾರು ಸುಂದರವಾದ ಕವನಗಳನ್ನೂ ರಚಿಸಿದ್ದಾರೆ.  ಪೌರಾಣಿಕ ನಾಟಕಗಳಲ್ಲಂತೂ ಮಹಾಭಾರತ, ರಾಮಾಯಣಗಳಲ್ಲಿ ಕಾಣಬಂದ ವ್ಯಕ್ತಿಗಳನ್ನೆತ್ತಿಕೊಂಡು, ಅವರಿಗೆ ವಿನೂತನ ದೃಷ್ಟಿ ಮತ್ತು ಸಂದರ್ಭಗಳನ್ನು ಕಲ್ಪಿಸಿಕೊಂಡು ಚಿರಸ್ಮರಣೀಯ ಪಾತ್ರಗಳನ್ನು ಹೆಣೆದಿದ್ದಾರೆ.   ಎಷ್ಟು ಬಗೆಯ ಶೃತಿಗಳು, ತಿರುವುಗಳು, ಮರ್ಮಗಳು, ಕ್ಷಣ ಕ್ಷಣಕ್ಕೂ ಎಷ್ಟು ಬಗೆಯ ಬದಲಾವಣೆಗಳು!

ಏಕಲವ್ಯ ಎಂಬ ನಿಷಾಧನು ದ್ರೋಣರು ಅರ್ಜುನನಿಗೆ ಹೇಳಿಕೊಡುತ್ತಿರುವ ಬಿಲ್ಲುವಿದ್ಯೆಯನ್ನು ಮರೆಯಲ್ಲಿ  ನಿಂತು ಕಲಿಯುತ್ತಾನೆ.  ದ್ರೋಣರು ಅವನ ಮಾನಸಿಕ ಗುರು.  ಆದರೇನು ಅವನ ಮುಂದೆ ಅರ್ಜುನ ಒಬ್ಬ ಪೋರನೆನ್ನಬೇಕು.  ಅರ್ಜುನ ಬಿಲ್ಲುವಿದ್ಯೆ ಕಲಿಯುವುದು ವಿಶ್ವದ ಅದ್ವಿತೀಯ ಬಿಲ್ಲುಗಾರನಾಗಲೆಂದು.  ಇವನ ಧ್ಯೇಯ ಅಹಂಕಾರ ಮಿಶ್ರಿತವಾದುದು.  ಇದು ರಾಜಸಗುಣದ ಪ್ರತೀಕ.  ಆದರೆ ಏಕಲವ್ಯ ಕಲಿಯುವ ಧ್ಯೇಯ ತನ್ನ ಜಿಂಕೆಗಳನ್ನು ತೋಳಗಳಿಂದ ರಕ್ಷಿಸಲು.  ಧ್ಯೇಯ ಅತ್ಯುಚ್ಚವಾದುದು.  ಇದರಿಂದಾಗಿ ಏಕಲವ್ಯನ ಮುಂದೆ ಅರ್ಜುನ ಬೀಳಾಗಿ ಕಾಣುತ್ತಾನೆ.  ಬಾಯಿಬಡುಕ, ಬಡಾಯಿಗಾರ, ಸ್ವಾರ್ಥಿ, ಅಹಂಕಾರಿ. ಇವನ ಮಾತುಗಳು ತೂಕವಿಲ್ಲದವು.  ತದ್ವಿರುದ್ದವಾಗಿ ಏಕಲವ್ಯನ ವ್ಯಕ್ತಿತ್ವ ಅತ್ಯುನ್ನತವಾಗಿ ಕಂಗೊಳಿಸುತ್ತದೆ.  ಕಡೆಗೆ ಬಲಗೈ ಹೆಬ್ಬೆಟ್ಟನ್ನು ಗುರುದಕ್ಷಿಣೆಯಾಗಿತ್ತೂ, ಮತ್ತೆ ಎಡಗೈನಲ್ಲಿ ಈಗ ಅದ್ವಿತೀಯ ಬಿಲ್ಲುಗಾರನಾಗುತ್ತಾನೆ.  ಗೀತೆಯ ನಿಷ್ಕಾಮಕರ್ಮದ ಶ್ರೇಷ್ಠ ಬೋಧೆಯ ಪ್ರತೀಕ ಈ ನಾಟಕದಲ್ಲಿ ಅಭಿವ್ಯಕ್ತವಾಗಿದೆ. 

ಡಾ . ಸಿ. ಆರ್. ರೆಡ್ಡಿಯವರು ಮನಸಾರೆ ಹೊಗಳಿ ಕೈಲಾಸಂರನ್ನು “ಒಂದು ಅತಿ ಶ್ರೇಷ್ಠ ವಜ್ರ” ಎಂದು ಬಣ್ಣಿಸಿದುದು ಕರ್ಣ ನಾಟಕದ ಮುನ್ನುಡಿಯಲ್ಲಿದೆ.  ಇಲ್ಲಿ ಕರ್ಣನ ಧೈರ್ಯ, ಸ್ಥೈರ್ಯ, ಶಕ್ತಿಸಾಮರ್ಥ್ಯ, ಸ್ವಾಮಿಭಕ್ತಿ, ನಿಷ್ಠೆ ಹಾಗೂ ಔದಾರ್ಯಗಳು ಆತನನ್ನು ಮುಗಿಲೆತ್ತರಕ್ಕೆ ಏರಿಸಿವೆ.  ಆದರೆ ಎಡೆಬಿಡದೆ ಬೆನ್ನು ಹತ್ತಿದ ವಿಪ್ರಶಾಪ ಆತನನ್ನು ವಿನಾಶಕ್ಕೊಳಗಾಗಿಸುತ್ತದೆ.  ಈ ದುರಂತ ನಾಟಕ ಶ್ರೇಷ್ಠ ಗ್ರೀಕ್  ದುರಂತ ನಾಟಕಕಾರರಾದ ಸೋಫಕ್ಲಿಸ್ ಮತ್ತು ಯುರಿಪಿಡಿಸರನ್ನು ಸ್ಮರಣೆಗೆ ತರುತ್ತದೆ.  ಈ ಇಂಗ್ಲಿಷ್ ನಾಟಕಗಳಲ್ಲಿ ಕೈಲಾಸಂ ನಮ್ಮ ವೇದೋಪನಿಷತ್ತು, ಪುರಾಣಗಳಲ್ಲಿರುವ ಸಿದ್ಧಾಂತ, ತತ್ವಗಳನ್ನು ವಿಫುಲವಾಗಿ ಬಳಸಿಕೊಂಡು ಭಾರತೀಯ ಪರಂಪರೆಯ ಅಂತರಾರ್ಥವನ್ನು ಅತ್ಯಂತ ರಮ್ಯವಾಗಿ ಅಭಿವ್ಯಕ್ತಿಗೊಳಿಸಿದ್ದಾರೆ.  ವಿಪರೀತ ಆಡಂಬರ, ಅಲಂಕಾರಗಳ ಲೇಪ ಹೊಂದಿದ್ದರೂ ಕೈಲಾಸಂರಿಗೆ ಇಂಗ್ಲಿಷಿನ ಮೇಲಿದ್ದ ಪ್ರಭುತ್ವ ಅಗಾಧ ಎನ್ನಬೇಕು.

ಎಂತೂ ಪುರಾಣದ ಮಬ್ಬಿನಲ್ಲಿ ಮೈಮರೆತು, ಸತ್ಯದಿಂದ ದೂರ ಸಾಗಿ ಪುರಾಣಗಳಲ್ಲಿನ ಅದ್ಭುತಗಳನ್ನು ವಿಕೃತಗೊಳಿಸಿ ಇಂದಿನ ಸಮಾಜವನ್ನೇ ರಂಗಮಂಟಪಪದಿಂದ ದೂರತಳ್ಳಿದ್ದ ಜನತೆಗೆ, ಹೊಸ ಬಗೆಯ ಪ್ರತಿಭಾನ್ವಿತವಾದ, ಪ್ರಚಲಿತ ಸಮಸ್ಯೆಗಳತ್ತ ಕಣ್ಣು ಹೊರಳಿಸಿ ಸತ್ಯ ದರ್ಶನ ಮಾಡಿಸಿದ ಇಂದಿನ ಸಾಮಾಜಿಕ ನಾಟಕದ ‘ಪ್ರಪಿತಾಮಹ’ನಾದ ಕೈಲಾಸಂ ಇಡೀ ಜೀವನವನ್ನೇ ಇದಕ್ಕಾಗಿ ತೇದು ಹೋಗಿದ್ದಾರೆ.  ಅವರ  ಹಾಸ್ಯ ಪ್ರವೃತ್ತಿ, ಕುಚೋದ್ಯ ಕಚಗುಳಿ ಇಡುವ ಅಸಾಧಾರಣ ಪ್ರತಿಭೆ ಮೇಲ್ಮುಖ  ಮಾತ್ರ.  ಆದರ ಹಿಂದೆ ಅಡಗಿರುವ ದಾರುಣ ಪರಿಸ್ಥಿತಿಗೆ ಅವರು  ಕನ್ನಡಿ ಹಿಡಿಯಲು ಮರೆಯಲಿಲ್ಲ.  ಅವರ ಪ್ರತಿಭೆ ಬಹುಮುಖವಾದುದು, ಅಗಾಧವಾದುದು. 

ಕೈಲಾಸಂ 1945ರಲ್ಲಿ ಮದರಾಸಿನಲ್ಲಿ ನಡೆದ 29ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷತೆ ವಹಿಸಿದ್ದರು.  ಅವರು ನಿಧನರಾದದ್ದು 23 ನವೆಂಬರ್ 1946ರಲ್ಲಿ.  ಈ ಮಹಾನ್ ಪ್ರತಿಭೆಗೆ ಅವರ ಜನ್ಮದಿನ ಸಂದರ್ಭದಲ್ಲಿ ಶಿರಬಾಗೋಣ.

(ನಮ್ಮ 'ಕನ್ನಡ  ಸಂಪದ'ದಲ್ಲಿ ಮೂಡಿಬರುತ್ತಿರುವ ಬರಹಗಳನ್ನು ನಮ್ಮ 'ಸಂಸ್ಕೃತಿ ಸಲ್ಲಾಪ'  ತಾಣವಾದ www.sallapa.comನಲ್ಲಿ ಆಸ್ವಾದಿಸಲು ತಮ್ಮನ್ನು ಆದರದಿಂದ ಸ್ವಾಗತಿಸುತ್ತಿದ್ದೇವೆ.  ನಮಸ್ಕಾರ)

Sunday, July 29, 2018

ವಿಜ್ಞಾನ ಸಂಬಂಧಿತ ಸರಳ ಚಟುವಟಿಕೆಗಳು – ೪೭

Advertisements
ಧ್ವನಿ ವಾಹಕಗಳು
೧. ಮೇಜಿನ ಒಂದು ತುದಿಯಲ್ಲಿ ನೀವೂ ವಿರುದ್ಧ ತುದಿಯಲ್ಲಿ ನಿಮ್ಮ ಮಿತ್ರನೂ ನಿಂತುಕೊಳ್ಳಿ. ನಿಮಗೆ ಕೇಳಿಸದಷ್ಟು ಕ್ಷೀಣವಾದ ಧ್ವನಿ ಉತ್ಪತ್ತಿ ಆಗುವಂತೆ ಮೇಜನ್ನು ಬೆರಳಿನಿಂದ ಕುಟ್ಟುವಂತೆ ನಿಮ್ಮ ಮಿತ್ರನಿಗೆ ಹೇಳಿ. ತದನಂತರ ಮೇಜಿನ ಇನ್ನೊಂದು ತುದಿಯಲ್ಲಿ ಇರುವ ನೀವು ಮೇಜಿಗೆ ಕಿವಿ ಕೊಟ್ಟು ನಿಂತು ಇನ್ನೊಮ್ಮೆ ಅದೇ ರೀತಿ ಕುಟ್ಟಲು ಹೇಳಿ. ಕುಟ್ಟಿದ್ದು ಸ್ಪಷ್ಟವಾಗಿ ಕೇಳಿಸುತ್ತದಲ್ಲವೇ?. ಮರ ವಾಯುವಿಗಿಂತ ಉತ್ತಮವಾದ ಧ್ವನಿ ವಾಹಕವೇ ಎಂಬುದನ್ನು ನೀವೇ ತೀರ್ಮಾನಿಸಿ.
೨. ಒಂದು ಬಕೆಟ್ಟಿನಲ್ಲಿ ನೀರು ತುಂಬಿಸಿ. ನೀರಿನೊಳಗೆ ಬಾಚಣಿಗೆಯೊಂದನ್ನು ಮುಳುಗಿಸಿ ಅದರ ಹಲ್ಲುಗಳನ್ನು ಬೆರಳಿನಿಂದ ಕೆರೆಯುವಂತೆ ನಿಮ್ಮ ಮಿತ್ತನಿಗೆ ಹೇಳಿ. ಉತ್ಪತ್ತಿಯಾದ ಧ್ವನಿ ನಿಮಗೆ ಕೇಳಿಸುತ್ತದೆಯೇ? ಬಕೆಟ್ಟಿನ ಹೊರಮೈಗೆ ನಿಮ್ಮ ಕಿವಿ ತಾಗಿಸಿದರೆ ಧ್ವನಿ ಕೇಳಿಸುತ್ತದೆಯೇ ಎಂಬುದನ್ನು ಪರಿಶೀಲಿಸಿ. ಧ್ವನಿ ಯಾವ ಮಾಧ್ಯಮಗಳ ಮೂಲಕ ಹಾಯ್ದು ನಿಮ್ಮನ್ನು ತಲುಪಿರಬೇಕು ಎಂಬುದನ್ನು ತರ್ಕಿಸಿ
೩. ಹ್ಯಾಕ್ ಸಾ ಬ್ಲೇಡ್ ಅಥವ ಅದರಂತೆಇರುವ ಯಾವುದಾದರೂ ಲೋಹದ ಪಟ್ಟಿಯೊಂದನ್ನು ಸಂಗ್ರಹಿಸಿ. ಮೇಜಿನ ೊಂದು ತುದಿಯ ಅಂಚಿನಲ್ಲಿ ಒಂದು ಲೋಟ ಇಟ್ಟು ಅದಕ್ಕೆ ಕಿವಿ ತಾಗಿಸಿ ಕುಳಿತುಕೊಳ್ಳಿ. ತುಸು ದೂರದಲ್ಲಿ ಹ್ಯಾಕ್ ಸಾ ಬ್ಲೇಡನ್ನು ಮೇಜಿಗೆ ತಾಗಿಸಿ ನಿಲ್ಲಿಸಿ ಮೀಟಿ ಧ್ವನಿ ಉತ್ಪತ್ತಿ ಮಾಡುವಂತೆ ನಿಮ್ಮ ಮಿತ್ರನಿಗೆ ಹೇಳಿ. ಲೋಟದಿಂದ ಧ್ವನಿ ಹೊರಹೊಮ್ಮುತ್ತಿರುವಂತೆ ಭಾಸವಾಗುವ ವಿದ್ಯಮಾನ ಗಮನಿಸಿ. ಧ್ವನಿ ಯಾವ ಮಾಧ್ಯಮಗಳ ಮೂಲಕ ಹಾಯ್ದು ನಿಮ್ಮನ್ನು ತಲುಪಿರಬೇಕು ಎಂಬುದನ್ನು ತರ್ಕಿಸಿ.
೪. ಕಿವಿಯ ಹತ್ತಿರ ಕೈಗಡಿಯಾರ ಹಿಡಿದರೆ ಅದರ ಟಿಕ್ ಟಿಕ್ ಧ್ವನಿ ಕೇಳಿಸದಂತೆ ಕಿವಿಗೆ ಹತ್ತಿಯ ಬೆಣೆ ಹಾಕಿ. ತದನಂತರ ಕೈಗಡಿಯಾರವನ್ನು ಕಿವಿಯ ಹಿಂಭಾಗದಲ್ಲಿ ಮೂಳೆಗೆ ತಾಗಿಸಿ ಹಿಡಿಯಿರಿ. ಕೈಗಡಿಯಾರದ ಟಿಕ್ ಟಿಕ್ ಧ್ವನಿ ಕೇಳಿಸುವ ವಿದ್ಯಮಾನ ಗಮನಿಸಿ. ಕಿವಿ ಮುಚ್ಚಿದ್ದರೂ ಧ್ವನಿ ಕೇಳಿಸಿದ್ದು ಹೇಗೆ?
೫. ದಾರದ ಒಂದು ತುದಿಯನ್ನು ಹಲ್ಲಿನಲ್ಲಿ ಗಟ್ಟಿಯಾಗಿ ಕಚ್ಚಿ ಹಿಡಿಯಿರಿ. ಇನ್ನೊಂದು ತುದಿಯನ್ನು ದಾರ ಬಿಗಿಯಾಗಿರುವಂತೆ ಕೈನಿಂದ ೆಳೆದು ಹಿಡಿದುಕೊಂಡು ಮೀಟಿ. ಉತ್ಪತ್ತಿಯಾದ ಧ್ವನಿ ಸ್ಪಷ್ಟವಾಗಿ ಕೇಳಿಸುವ ವಿದ್ಯಮಾನ ಗಮನಿಸಿ. ಈ ಪ್ರಯೋಗದಲ್ಲಿ ಧ್ವನಿವಾಹಕಗಳಾಗಿ ಕಾರ್ಯ ನಿರ್ವಹಿಸಿದವು ಯಾವುವು? ತರ್ಕಿಸಿ.
೬. ನೀರು ತುಂಬಿ ಕಾಯಿಸಿದರೆ ಒಡೆಯದ, ರಬ್ಬರ್ ಬಿರಡೆ ಹಾಕಿದರೆ ವಾಯು ಅಭೇದ್ಯ ಆಗಬಲ್ಲ ಅಗಲಕಿರಿದಾದ ಬಾಯಿ ಉಳ್ಳ ಗಾಜಿನ ಬಾಟಲ್ ಅಥವ ಪ್ರಯೋಗಶಾಲೆಗಳಲ್ಲಿ ಉಪಯೋಗಿಸುವ ಬಿರಡೆಯುತ ಗಾಜಿನ ಫ್ಲಾಸ್ಕ್ ಸಂಗ್ರಹಿಸಿ. ಇಂಥ ಬಾಟಲ್ ಲಭ್ಯವಿಲ್ಲದಿದ್ದರೆ ಹಾಳಾದ ಟಂಗ್ಸ್ಟನ್ ಫಿಲಮೆಂಟ್ ವಿದ್ಯತ್ ಬಲ್ಬಿನಿಂದ ಒಂದನ್ನು ದೊಡ್ಡವರ ನೆರವಿನಿಂದ ನೀವೇ ತಯಾರಿಸಿ ಅದಕ್ಕೆ ತಕ್ಕುದಾದ ರಬ್ಬರ್ ಬಿರಡೆ ಸಂಗ್ರಹಿಸಿ. ಬಾಟಲಿನ ಬಿರಡೆಯ ಒಳತುದಿಗೆ ಬಳುಕದ ತಂತಿಯ ತುಂಡನ್ನು ಚು್ಚಿ ನಿಲ್ಲಿಸಿ. ಅದರ ತುದಿಗೆ ಪುಟ್ಟಗಂಟೆಮಣಿಯೊಂದನ್ನು ಭದ್ರವಾಗಿ ಸಿಕ್ಕಿಸಿ.  ಬಿರಡೆ ಹಾಕಿದ ಬಾಟಲನ್ನು ಅಲುಗಾಡಿಸಿ ಗಂಟೆಮಣಿ ಹೊಮ್ಮಿಸುವ ನಾದ ಎಷ್ಟು ಜೋರಾಗಿ ಕೇಳಿಸುತ್ತದೆ ಎಂಬುದನ್ನು ಗಮನಿಸಿ. ಬಾಟಲಿನೊಳಕ್ಕೆ ತುಸು ನೀರು ಹಾಕಿ ೪-೫ ನಿಮಿಷ ಕಾಲ ಬಿರಡೆ ಹಾಕದೆಯೇ ಕುದಿಸಿ. ಬಾಟಲಿನ ಒಳಗಿದ್ದ ವಾಯುವಿನ ಮೇಲೆ ಇದು ಏನು ಪರಿಣಾಮ ಉಂಟುಮಾಡುತ್ತದೆ ಎಂಬುದು ನಿಮಗೆ ತಿಳಿದೇ ಇದೆ. ನೀರು ಕುದಿಯುತ್ತಿರುವಾಗಲೇ ಬಿಗಿಯಾಗಿ ಬಿರಡೆ ಹಾಕಿ ತಕ್ಷಣ ಉಷ್ಣದ ಆಕರವನ್ನು ತೆಗೆಯಿರಿ. ತಕ್ಷಣ ತೆಗೆಯದಿದ್ದರೆ ಸ್ಫೋಟವಾದೀತು. ಬಾಟಲನ್ನು ತಣಿಯಲು ಬಿಡಿ. ವಾಯು ಅಭೇದ್ಯ ಬಿರಡೆ ಹಾಕದೇ ಇದ್ದರೆ ಈ ಅವಧಿಯಲ್ಲಿ ಏನಾಗುತ್ತದೆ ಎಂಬುದೂ ನಿಮಗೆ ತಿಳಿದಿದೆ. ಚೆನ್ನಾಗಿ ತಣಿದ ನಂತರ ಬಾಟಲನ್ನು ಅಲ್ಲಾಡಿಸಿ ಗಂಟೆಮಣಿ ಹೊಮ್ಮಿಸುವ ನಾದ ಎಷ್ಟು ಜೋರಾಗಿ ಕೇಳಿಸುತ್ತದೆ ಎಂಬುದನ್ನು ಗಮನಿಸಿ. ಕಾಯಿಸುವುದಕ್ಕೆ ಮುನ್ನ ಕೇಳಿಸಿದ್ದಕ್ಕೂ ಈಗ ಕೇಳಿಸುತ್ತಿರುವುದಕ್ಕೂ ಏನು ವ್ಯತ್ಯಾಸ? ಏಕೆ?
ಈ ಎಲ್ಲ ಪ್ರಯೋಗಗಳು ಏನನ್ನು ಸಾಬೀತು ಪಡಿಸುತ್ತವೆ? ಅನಿಲ, ದ್ರವ ಮತ್ತು ಘನ ಮಾಧ್ಯಮಗಳ ಪೈಕಿ ಉತ್ತಮ ಧ್ವನಿ ವಾಹಕ ಯಾವುದು ಎಂಬುದನ್ನು ಈ ಪ್ರಯೋಗಗಳಿಂದ ದೊರೆತ ಮಾಹಿತಿ ಆಧರಿಸಿ ಅಂದಾಜಿಸಿ


ಗುರು (ಸಂಸ್ಕೃತ:गुरु,ಅಂದರೆ ಒಂದು ನಿರ್ದಿಷ್ಟ ವಿಭಾಗದಲ್ಲಿ ಹೆಚ್ಚಿನ ಜ್ಞಾನ, ಬುದ್ಧಿವಂತಿಕೆ ಮತ್ತು ನಿಪುಣತೆಯನ್ನು ಹೊಂದಿರುವ, ಮತ್ತು ಇತರರಿಗೆ ನಿರ್ದೇಶನವನ್ನು ನೀಡಲು (ಶಿಕ್ಷಕ) ಈ ಬುದ್ಧಿವಂತಿಕೆಗಳನ್ನು ಬಳಸುವ ವ್ಯಕ್ತಿಯಾಗಿರುತ್ತಾನೆ. ಸಂಸ್ಕೃತದಲ್ಲಿ ಗು ಅಂದರೆ ಅಂಧಕಾರ ಮತ್ತು ರು ಅಂದರೆ ಬೆಳಕು. ಅರಿವಿನ ಅಭಿವೃದ್ಧಿಯ ಒಂದು ಮೂಲತತ್ವವಾಗಿ ಇದು ಕಾಲ್ಪನಿಕತೆಯಿಂದ ನಿಜಸ್ಥಿತಿಯ ನಿರ್ಮಾಣಕ್ಕೆ, ಅಜ್ಞಾನದ ಅಂಧಕಾರದಿಂದ ಜ್ಞಾನದ ಬೆಳಕಿನೆಡೆಗೆ ಕರೆದೊಯ್ಯುತ್ತದೆ. ಇದರ ಮೂಲರೂಪದಲ್ಲಿ ಈ ’ಗುರು’ ಪರಂಪರೆಯ ತತ್ವವು ಭೂಮಿಯಲ್ಲಿಯ ಒಂದು ದೈವಿಕ ಮೂರ್ತರೂಪ(ಸಾಧು) ಎಂದಾಗುತ್ತದೆ. ’ಗುರು’ ಭೂಮಿಯ ಮೇಲಿರುವ ಅತಿಭೌತಿಕ ಹಾಗೂ ಉನ್ನತ ಶಕ್ತಿಯ ಕುರಿತಾದ ಅತ್ಯುನ್ನತ ಜ್ಞಾನವನ್ನು ಹೊಂದಿರುವ ಒಬ್ಬ ವ್ಯಕ್ತಿ ಎಂಬ ಅರ್ಥವನ್ನು ನೀಡುತ್ತದೆ.[೧] ತಂದೆ ತಾಯಂದಿರು, ಶಿಕ್ಷಕರು[೧], ಕೆಲವು ಜ್ಞಾನಾರ್ಜನೆಗೆ ಸಹಾಯಕವಾಗುವಂತಹ ವಸ್ತುಗಳು (ಉದಾಹರಣೆಗೆ ಪುಸ್ತಕ)ಮತ್ತು ಪ್ರತಿ ವ್ಯಕ್ತಿಯಲ್ಲಿರುವ ಬೌದ್ಧಿಕ ಶಿಸ್ತು ಈ ಮೂಲತತ್ವವನ್ನು ಪ್ರತಿಬಿಂಬಿಸುವ ಇತರ ಕೊಂಡಿಗಳು ಎಂದು ಹೇಳಬಹುದಾಗಿದೆ.[೨] ಧಾರ್ಮಿಕಅರ್ಥದಲ್ಲಿ ಈ ಶಬ್ದವನ್ನು ಸಾಮಾನ್ಯವಾಗಿ ಹಿಂದು ಮತ್ತು ಸಿಖ್ಖ್ ಧರ್ಮದಲ್ಲಿ ಹಾಗೂ ಇನ್ನಿತರ ಕೆಲವು ಭಾರತೀಯ ಧರ್ಮಗಳಲ್ಲಿ ಹಾಗೂ ಕೆಲವು ಹೊಸ ಧಾರ್ಮಿಕ ಪಂಥದ ಚಳುವಳಿಗಳಲ್ಲಿ ಈ ಶಬ್ದವನ್ನು ಬಳಸಲಾಗುತ್ತದೆ. ಒಬ್ಬ ಉತ್ತಮ ಗುರುವನ್ನು ಪಡೆದುಕೊಳ್ಳುವುದು ಆತ್ಮಜ್ಞಾನವನ್ನು ಹೊಂದಲು ಒಂದು ಪೂರ್ವ ತಯಾರಿ ಎಂದು ಹೇಳಲಾಗುತ್ತದೆ. ಗುರು ನಾನಕ್, ಸಿಖ್ ಧರ್ಮದ ಸ್ಥಾಪಕರು ಹೇಳಿದರು: "ಸಾವಿರಾರು ಸೂರ್ಯ ಚಂದ್ರ ಹುಟ್ಟಿ ಬಂದರೂ ಕೂಡ ಹೃದಯದ ಒಳಗಿನ ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸುವುದು ಸಾಧ್ಯವಿಲ್ಲ. ಇದನ್ನು ಕೇವಲ ಗುರುವಿನ ಅನುಗ್ರಹದಿಂದ ಮಾತ್ರ ತೊಡೆದುಹಾಕಲ್ಪಡುತ್ತದೆ." [೩] ಸಂಸ್ಕೃತದಲ್ಲಿ "ಗುರು" ಎಂಬ ಪದವನ್ನು ಹಿಂದುತ್ವದಲ್ಲಿ ದೈವಸ್ವರೂಪಿ ವ್ಯಕ್ತಿತ್ವದ ಬೃಹಸ್ಪತಿಗೆ ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ಗುರು ಅಥವಾ ಬೃಹಸ್ಪತಿಯು ಕಲಿಕೆಯ ಮೇಲೆ ಪ್ರಭಾವ ಬೀರುತ್ತಾರೆ ಎಂದು ನಂಬಲಾಗಿದೆ.[clarification needed] ಆದಾಗ್ಯೂ, ಹಿಂದಿಯಂತಹ ಹಲವಾರು ಭಾರತೀಯ ಭಾಷೆಗಳಲ್ಲಿ, ಪಾಶ್ಚಾತ್ಯರ Thursday ಬೃಹಸ್ಪತಿವಾರ ಅಥವಾ ಗುರುವಾರ (ವಾರ ಅಂದರೆ ಸಪ್ತಾಹದ ಒಂದು ದಿನ) ಎಂದು ಕರೆಯಲ್ಪಡುತ್ತದೆ.[ಸೂಕ್ತ ಉಲ್ಲೇಖನ ಬೇಕು] ಇತ್ತೀಚಿನ ದಿನಗಳಲ್ಲಿ ಭಾರತದಲ್ಲಿ, "ಗುರು" ಎಂಬ ಶಬ್ದವು ವ್ಯಾಪಕವಾಗಿ "ಶಿಕ್ಷಕ" ಎಂಬ ಸಾಮಾನ್ಯ ಅರ್ಥದ ಜೊತೆ ಬಳಸಲ್ಪಡುತ್ತದೆ. ಪಾಶ್ಚಾತ್ಯ ಬಳಕೆಯಲ್ಲಿ, ಗುರು ಎಂಬ ಶಬ್ದದ ಅರ್ಥವು ಅನುಯಾಯಿಗಳನ್ನು ಹೊಂದುವ ಸಾಮರ್ಥ್ಯ ಹೊಂದಿರುವ ಯಾವುದೇ ವ್ಯಕ್ತಿಗೂ ಕೂಡಾ ಬಳಸಬಹುದಾಗಿದೆ. ಅವರು ತತ್ವಶಾಸ್ತ್ರದ ಅಥವಾ ಯಾವುದಾದರೂ ಧಾರ್ಮಿಕ ಪಂಥಕ್ಕೆ ಸೇರಬೇಕೆಂದೇನಿಲ್ಲ.[೪] ಇನ್ನೂ ಹೆಚ್ಚಾಗಿ ಪಾಶ್ಚಾತ್ಯರು, ಒಬ್ಬ ವ್ಯಕ್ತಿಯು ಪ್ರಾಪಂಚಿಕವಾದ ವಿಷಯಕ್ಕೆ ಸಂಬಂಧಿಸಿದಂತೆ ಉತ್ತಮ ಜ್ಞಾನ,ನೈಪುಣ್ಯತೆಯನ್ನು ಹೊಂದಿದ್ದರೂ ಕೂಡ ’ಗುರು’ ಎಂಬ ಶಬ್ದವನ್ನು ಬಳಸುತ್ತಾರೆ. ಉದಾಹರಣೆಗೆ ’ವ್ಯವಹಾರ’ ಪ್ರಪಂಚಕ್ಕೆ ಕುರಿತಾದ ಉತ್ತಮ ಜ್ಞಾನ ಹೊಂದಿರುವ ವ್ಯಕ್ತಿಯನ್ನು ’ಗುರು’ ಎಂದು ಕರೆಯಲಾಗುತ್ತದೆ.(eg:management Guru)
Veeresh Arssikere:
*🌻ದಿನಕ್ಕೊಂದು ಕಥೆ🌻*                                                                                                           ಕವಿ ಕಾಳಿದಾಸನಿಗೆ ತಾನು ಜ್ಞಾನಿಯಾಗಿರುವುದರ ಅರಿವು ಕೊಂಚ ಹೆಚ್ಚೆ ಆಗಿತ್ತು. ಒಂದು ಬಾರಿ ಪರ್ಯಟನೆ ಮಾಡುತ್ತ ಒಂದು ಊರಿನ ಬಳಿ ಬಂದಾಗ ಬಹಳ ಬಾಯಾರಿಕೆ ಆಯಿತು. ಊರ ಹೊರಗಿನ ಬಾವಿಯ ಬಳಿ ಒಬ್ಬ ವೃದ್ಧ ಸ್ತ್ರೀ ನೀರು ಸೇದುತ್ತಿದ್ದಳು. ಕಾಳಿದಾಸ ಸ್ತ್ರೀಯ ಬಳಿಸಾರಿ, ತಾಯೆ ನನ್ನ ದಾಹ ಅಡಗಿಸಲು ಕೊಂಚ ನೀರು ಕೊಡುವ ಕೃಪೆ ಮಾಡುತ್ತೀರಾ?? ಎಂದು ಕೇಳಿದ.  ವೃದ್ಧ ಸ್ತ್ರೀ, ನನಗೆ ನಿನ್ನ ಪರಿಚಯವಿಲ್ಲವಲ್ಲ ಮಗೂ, ನೀನು ನಿನ್ನ ಪರಿಚಯ ಹೇಳು, ನಾನು ನೀರು ಕೊಡುತ್ತೇನೆ ಎಂದಳು.
ಆಗ ಕಾಳಿದಾಸ ತನ್ನ ಪರಿಚಯ ನೀಡಲು ಪ್ರಾರಂಭಿಸಿದ.
ಕಾ -  ನಾನೊಬ್ಬ ಪ್ರವಾಸಿ
ಸ್ತ್ರೀ - ಲೋಕದಲ್ಲಿ ಪ್ರವಾಸಿಗರು ಇಬ್ಬರೇ. ಒಬ್ಬ ಸೂರ್ಯ, ಮತ್ತೊಬ್ಬ ಚಂದ್ರ. ಇಬ್ಬರೂ ಹಗಲು ರಾತ್ರಿಗಳನ್ನು ನಡೆಸುತ್ತಿದ್ದಾರೆ.
ಕಾ - ನಾನೊಬ್ಬ ಅತಿಥಿ, ಈಗ ನೀರು ಸಿಗುವುದೇ?
ಸ್ತ್ರೀ - ಲೋಕದಲ್ಲಿ ಅತಿಥಿಗಳೂ ಇಬ್ಬರೇ. ಒಂದು ಧನ, ಮತ್ತೊಂದು ಯೌವ್ವನ. ಇಬ್ಬರೂ ಬಂದು ಹೊರಟು ಹೋಗುತ್ತಾರೆ, ನಿಲ್ಲುವುದಿಲ್ಲ.
ನಿಜ ಹೇಳು, ನೀನು ಯಾರು?
ಕಾ - ನಾನು ಸಹನಶೀಲ. ಈಗಲಾದರೂ ನೀರು ದೊರೆಯುತ್ತದೆಯೇ?
ಸ್ತ್ರೀ - ಲೋಕದಲ್ಲಿ ಸಹನಶೀಲರೂ ಇಬ್ಬರೇ!! ಒಂದು ಭೂಮಿ, ಮತ್ತೊಂದು ವೃಕ್ಷ.  ಭೂಮಿ ಪುಣ್ಯವಂತರೊಡನೆ ಪಾಪಿಷ್ಟರನ್ನೂ ಸಹಿಸುತ್ತಾಳೆ. ಹಾಗೆಯೇ ಮರವು ಕಲ್ಲೆಸೆದರೂ ಸಿಹಿಯಾದ ಹಣ್ಣನ್ನೇ ಕೊಡುತ್ತದೆ.
ಈಗ ಕಾಳಿದಾಸ ಹತಾಶನಾಗತೊಡಗಿದ.
ಕಾ - ನಾನೊಬ್ಬ ಹಠಮಾರಿ
ಸ್ತ್ರೀ - ಇಲ್ಲ, ನೀನು ಹಠಮಾರಿ ಆಗಲು ಹೇಗೆ ಸಾದ್ಯ? ಲೋಕದಲ್ಲಿ ಹಠಮಾರಿಗಳೂ ಇಬ್ಬರೇ...ಒಂದು ಉಗುರು, ಇನ್ನೊಂದು ಕೂದಲು.  ಎಷ್ಟು ಬಾರಿ ಕತ್ತರಿಸಿದರೂ ಮತ್ತೆ ಬೆಳೆಯುತ್ತವೆ.
ಕಾಳಿದಾಸನಿಗೀಗ ಬೇಸರವಾಗತೊಡಗಿತು.
ಕಾ - ನಾನೊಬ್ಬ ಮುರ್ಖ!!
ಸ್ತ್ರೀ - ಆದು ಹೇಗೆ ಸಾಧ್ಯ? ಲೋಕದಲ್ಲಿ ಮೂರ್ಖರೂ ಸಹ ಇಬ್ಬರೇ!! ಒಬ್ಬ ರಾಜ- ಯೋಗ್ಯತೆ ಇಲ್ಲದಿದ್ದರೂ ಎಲ್ಲರ ಮೇಲೂ ಆಳ್ವಿಕೆ ಮಾಡುತ್ತ ದರಬಾರು ಮಾಡುತ್ತಾನೆ.  ಇನ್ನೊಬ್ಬ ಆ ರಾಜನ ಆಸ್ಥಾನ ಪಂಡಿತ. ರಾಜನನ್ನು ಓಲೈಸುವುದಕ್ಕಾಗಿ, ಸುಳ್ಳು ಕಥೆಗಳನ್ನು ನಿಜವೆಂದು ಬಿಂಬಿಸುತ್ತಾನೆ!!
ಈಗ ಕಾಳಿದಾಸ ಏನೂ ಹೇಳುವ ಮನಸ್ಥಿತಿಯಲ್ಲಿ ಉಳಿದಿರಲಿಲ್ಲ. ಆ ವೃದ್ಧ ಸ್ತ್ರೀಯ ಕಾಲಿಗೆ ಬಿದ್ದು ನೀರಿಗಾಗಿ ಬೇಡತೊಡಗಿದ.
ಆಗ ಏಳು ಮಗೂ ಎಂಬ ಧ್ವನಿ ಕೇಳಿ ತಲೆ ಎತ್ತಿ ನೋಡಿದ.  ಅಲ್ಲಿ ವೃದ್ಧ ಸ್ತ್ರೀಯ ಜಾಗದಲ್ಲಿ ಸಾಕ್ಷಾತ್ ಸರಸ್ವತಿ ದೇವಿ ನಿಂತಿದ್ದಳು. ಆಕೆಗೆ ಕೈಮುಗಿದಾಗ ಸರಸ್ವತಿ ದೇವಿ ಹೇಳಿದಳು. "ವಿದ್ಯೆಯಿಂದ ಜ್ಞಾನ ಸಂಪಾದನೆ ಆಗುತ್ತದೆ, ಗರ್ವ ಅಹಂಕಾರವಲ್ಲ!! ನಿನ್ನ ವಿದ್ಯೆಗೆ ದೊರೆತ ಮಾನ ಸನ್ಮಾನಗಳನ್ನೇ ನೀನು ಸರ್ವಸ್ವವೆಂದು ಭಾವಿಸಿದೆ, ನಿನ್ನ ಕಣ್ಣು ತೆರೆಸುವುದು ಅವಶ್ಯಕವಾಗಿತ್ತು."
ಕಾಲಿದಾಸನಿಗೆ ತನ್ನ ತಪ್ಪಿನ ಅರಿವಾಯಿತು. ಕ್ಷಮೆ ಯಾಚಿಸಿ, ದಾಹ ತಣಿಸಿಕೊಂಡು ತನ್ನ ಮುಂದಿನ ದಾರಿ ಹಿಡಿದು ಸಾಗಿದ.
*ನೀತಿ: ವಿದ್ಯೆಗೆ ವಿನಯವೇ ಭೂಷಣ*.                                        ಕೃಪೆ: ಸುಧಾಕರ ಆರ್ ಬಂಡ್ರಿ.              ಸಂಗ್ರಹ ವೀರೇಶ್ ಅರಸಿಕೆರೆ******************************************************************* 🌻 *ದಿನಕ್ಕೊಂದು ಕಥೆ*🌻

💐 *ಕಷ್ಟಕ್ಕಾದವನೆ ಗೆಳೆಯಾ*💐

ದೊಡ್ಡ ಕಾಡಿನಲ್ಲಿ ಮೊಲವೊಂದಿತ್ತು. ಬಹಳ ಸಾಧು ಸ್ವಭಾವದ ಆ ಮೊಲಕ್ಕೆ ಅನೇಕ ಗೆಳೆಯರಿದ್ದರು. ಒಂದು ದಿನ ಚಿಗುರು ಹುಲ್ಲು ತಿನ್ನುತ್ತಿರುವ ವೇಳೆಯಲ್ಲಿ ದೂರದಿಂದ ಬೇಟೆಯ ನಾಯಿಗಳು ತನ್ನ ಕಡೆಗೆ ಧಾವಿಸಿ ಬರುತ್ತಿರುವುದನ್ನು ಕಂಡಿತು.

ಕೂಡಲೇ ಮೊಲವು ಅಲ್ಲಿಯೇ ಮೇಯುತ್ತಾ ನಿಂತಿದ್ದ ಕುದುರೆಯ ಬಳಿಗೆ ಹೋಗಿ "ಕುದುರೆ ಅಣ್ಣ, ಅಲ್ಲಿ ನೋಡು ಬೇಟೆ ನಾಯಿಗಳು ನನ್ನನ್ನು ಕೊಲ್ಲಲು ಓಡಿ ಬರುತ್ತಿವೆ. ನೀನು ತಕ್ಷಣ ನನ್ನನ್ನು ನಿನ್ನ ಬೆನ್ನ ಮೇಲೆ ಕೂಡಿಸಿಕೊಂಡು ದೂರ ಒಯ್ದು ಬಿಡು" ಎಂದು ವಿನಂತಿಸಿತು. ಆಗ ಕುದುರೆಯು "ಮೊಲರಾಯ, ನಿನಗೆ ಸಹಾಯ ಮಾಡಬಹುದಿತ್ತು, ಆದರೆ ನನ್ನ ಒಡೆಯನು ನನಗೆ ಹೊಸ ಕೆಲಸವೊಂದನ್ನು ವಹಿಸಿದ್ದಾನೆ. ಅದನ್ನು ನಾನು ತಕ್ಷಣ ಮಾಡಿ ಮುಗಿಸಬೇಕಿದೆ ನಿನ್ನಂತಹ ಒಳ್ಳೆಯ ಗೆಳೆಯನಿಗೆ ಹೀಗೆ ಹೇಳಲು ಬೇಸರವೆನಿಸುತ್ತದೆ. ಆದರೇನು ಮಾಡಲಿ?
ಅನಿವಾರ್ಯವಾಗಿ ಹೇಳಲೇಬೇಕಾಗಿದೆ. ನಿನಗೇನು ಬಹಳ ಸ್ನೇಹಿತರಿದ್ದಾರೆ ಯಾರಾದರೂ ಸಹಾಯ ಮಾಡುತ್ತಾರೆ" ಎಂದಿತು.

ಕುದುರೆಯ ಮಾತುಗಳನ್ನು ಕೇಳಿ ಮೊಲ ಮುಂದಕ್ಕೆ ಹೊರಟಿತು. ಅಲ್ಲಿ ಒಂದು ಎತ್ತು ಮೇಯುತ್ತಿತ್ತು. ಎತ್ತಿಗೂ ಮೊಲಕ್ಕೂ ಬಹಳ ಸ್ನೇಹ ಈ ಆಪತ್ಸಮಯದಲ್ಲಿ ಎತ್ತು ತನಗೆ ಸಹಾಯ ಮಾಡಬಹುದು ಅನಿಸಿತು, ಅಂತೆಯೇ ಅದು, "ಎತ್ತಣ್ಣಾ, ಬೇಟೆ ನಾಯಿಗಳಿಂದ ನನ್ನನ್ನು ರಕ್ಷಿಸು ಅಂದಿತು." ಆಗ ಆ ಎತ್ತು "ತಮ್ಮಾ, ನಿನ್ನಂತಹ ಗೆಳೆಯನಿಗೆ ಕಷ್ಟ ಬಂದಾಗ ಸಹಾಯ ಮಾಡುವುದು ನನಗೂ ಹೆಮ್ಮೆಯ ವಿಷಯವೇ, ಆದರೆ ಈಗ ಮಾಡಲು ಸಾಧ್ಯವಿಲ್ಲ ಎಂದು ಹೇಳಲು ವ್ಯಥೆಯಾಯಿತು, ಏಕೆಂದರೆ ನಾನು ಈಗ ತಕ್ಷಣ ಒಬ್ಬ ದೂರದ ನೆಂಟರನ್ನು ನೋಡಲು ಹೋಗಬೇಕಾಗಿದೆ. ಅಲ್ಲಿಗೆ ಹೋಗುವುದನ್ನು ತಪ್ಪಿಸಲು ಸಾಧ್ಯವಿಲ್ಲ. ಅದಕ್ಕಾಗಿ ನನ್ನನ್ನು ಕ್ಷಮಿಸು, ಆಗೋ ಅಲ್ಲಿರುವ ಕತ್ತೆಯ ಸಹಾಯ ಕೇಳು" ಎಂದು ಸಲಹೆ ನೀಡಿತು.

ಆಗ ಮೊಲವು ಕತ್ತೆಯ ಬಳಿಗೆ ಹೋಯಿತು. ಆ ಕತ್ತೆಯೂ ಏನೋ ಸಬೂಬು ಹೇಳಿ ಸಹಾಯ ಮಾಡದೆ ತಪ್ಪಿಸಿಕೊಂಡಿತು. ಅಷ್ಟೊತ್ತಿಗೆ ನಾಯಿಗಳು ಸಮೀಪಕ್ಕೆ ಬಂದಿದ್ದವು. ಆಗ ಮೊಲ ಗೆಳೆಯರನ್ನು ನಂಬುವ ಹುಚ್ಚು ಹವ್ಯಾಸ ಬಿಟ್ಟು ಕಾಲುಗಳ ಶಕ್ತಿಯ ಮೇಲೆ ನಂಬಿಕೆಯಿರಿಸಿ ಓಡಲು ಶುರುಮಾಡಿ ಕ್ಷಣಗಳಲ್ಲಿ ನಾಯಿಗಳ ಕಣ್ಣಿಗೆ ಬೀಳದಷ್ಟು ದೂರ ಓಡಿ ಹೋಗಿ ತನ್ನ ಪ್ರಾಣ ಕಾಪಾಡಿಕೊಂಡಿತು.


*ನೀತಿ :*
*ಕಷ್ಟದ ಸಮಯದಲ್ಲಿ ಗೆಳೆತನದ ಗುಟ್ಟು ತಿಳಿಯುವುದು, ಆ ಸಮಯದಲ್ಲಿ ಸಹಾಯ ಮಾಡುವವನೇ ನಿಜವಾದ ಗೆಳೆಯ.*

ಕೃಪೆ: ಕಿಶೋರ್.                                             ಸಂಗ್ರಹ: ವೀರೇಶ್ ಅರಸಿಕೆರೆ.ದಾವಣಗೆರೆ.