Saturday, August 25, 2018

ಓಣಂ ಸೊಗಸು

ಇತ್ತೀಚಿನ ಪ್ರಾಕೃತಿಕ ವಿಕೋಪದಲ್ಲಿ ನಲುಗಿರುವ ಕೇರಳ ಪ್ರಾಂತೀಯರಿಗೆ ಓಣಂ ಹಬ್ಬದ ಭಾವವನ್ನು ಸ್ವೀಕರಿಸಲು ಅತ್ಯಂತ ಕಷ್ಟದಾಯಕವಾದ ಸನ್ನಿವೇಶ ನಿರ್ಮಾಣವಾಗಿದೆ. 

ಸನಾತನ ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಹಬ್ಬ ಕೇರಳೀಯರ ಓಣಂ. ಅದಕ್ಕೂ ಕಾರಣವಿದೆ ಉಳಿದೆಲ್ಲ ಹಬ್ಬಗಳು ಧರ್ಮಕ್ಕೆ ಅನುಸಾರವಾಗಿ ಆಚರಿಸಿದರೆ, ಇದನ್ನು ಹಿಂದು-ಮುಸ್ಲಿಂ-ಕ್ರಿಶ್ಚಿಯನ್ ಎಲ್ಲರೂ ಸೇರಿ ಸಾಮರಸ್ಯದಿಂದ ಆಚರಿಸುತ್ತಾರೆ.

ಮಹಾದಾನಿಯಾಗಿರುವ ಮಹಾಬಲಿ ವರ್ಷಕ್ಕೊಮ್ಮೆ ಸಿಂಹ ಮಾಸದ ಶ್ರವಣ ನಕ್ಷತ್ರದಂದು (ತಿರುವೋಣಂ) ಭೂಲೋಕಕ್ಕೆ ಬರುತ್ತಾನೆಂಬುದು ಕೇರಳೀಯರ ಅಚಲ ನಂಬಿಕೆ. ಹಸ್ತಾ ನಕ್ಷತ್ರದಿಂದ (ಅತ್ತಾ ಪತ್ತೋಣಂ) ಮೊದಲ್ಗೊಂಡು ಶ್ರವಣ ನಕ್ಷತ್ರದ ತನಕ 10 ದಿನಗಳ ಕಾಲ ಮಲೆಯಾಳಿಗರು ಓಣಂ ಹಬ್ಬವನ್ನು ಆಚರಿಸುತ್ತಾರೆ. ಪ್ರತಿ ಮನೆಯ ಅಂಗಳದಲ್ಲೂ ಹೆಂಗಳೆಯರು ನಾನಾ ಬಗೆಯ ಹೂಗಳಿಂದ ಪೂಕ್ಕಳಂ(ಹೂವಿನ ರಂಗೋಲಿ) ಬಿಡಿಸಿ ಬಲಿ ಚಕ್ರವರ್ತಿ (ಮಾವೇಲಿ)ಯನ್ನು ಸ್ವಾಗತಿಸುತ್ತಾರೆ.

ಓಣಂ ಹಬ್ಬದಾಚರಣೆಯಲ್ಲಿ ಕೊನೆಯ ಮೂರು ದಿನಗಳನ್ನು ಒನ್ನಾ ಓಣಂ(ಒಂದನೇ ಓಣಂ), ತಿರುಓಣಂ(ಪ್ರಧಾನ ಅಥವಾ ನಡು ಓಣಂ), ಮೂನ್ನಾಂ ಓಣಂ(ಕೊನೆಯ ಓಣಂ) ಎಂದು ಆಚರಿಸಲಾಗುತ್ತಿದೆ. ಕೇರಳದಲ್ಲಿ ಪೂಕ್ಕಳಂ ಒಂದು ವಿಶಿಷ್ಟ ಸಂಪ್ರದಾಯ ಮತ್ತು ಕಲೆಯಾಗಿದ್ದು, ಅದಕ್ಕೆ ವಿಶೇಷ ಸ್ಥಾನ ನೀಡಲಾಗಿದೆ. ಓಣಂ ಭೋಜನ(ಓಣಂ ಸದ್ಯ)ಕ್ಕೆ ವಿಶೇಷವಾದ ಮಹತ್ವವಿದೆ. ಅಂದಿನ ಊಟದೊಂದಿಗೆ ಅನೇಕ ಬಗೆಯ ಭಕ್ಷ್ಯ-ಪದಾರ್ಥಗಳನ್ನು ತಯಾರಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ನೆಲದಲ್ಲಿ ಕುಳಿತು ಸಂತಸದಿಂದ ಸವಿಯುವುದು ವಾಡಿಕೆ. ಓಣಂ ಹಬ್ಬದಂದು ಶುಭ್ರವಾದ ಹೊಸ ಉಡುಪು, ಆಭರಣಗಳನ್ನು ಧರಿಸಿ, ದೇವಾಲಯಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವುದು ಸನಾತನ ಸಂಸ್ಕೃತಿಯ ದ್ಯೋತಕವಾಗಿದೆ. ಮನೆಯ ಹಿರಿಯರು ಕಿರಿಯರಿಗೆ ಹಾಗೂ ಬಡ ಬಗ್ಗರಿಗೆ ಹಣ (ಕೈ ನೀಟಂ) ಕೊಡುವರು. ಅಲ್ಲದೆ ಮನರಂಜನೆಗಾಗಿ ಉಯ್ಯಾಲೆ, ಸಿಡಿ ಮದ್ದು ಪ್ರದರ್ಶನ, ದೋಣಿ ವಿಹಾರ, ಪೆಟ್ಟಾಟ (ಓಣ ತಲ್ಲ್), ತಿರುವಾದಿರ ನೃತ್ಯ, ಕಥಕ್ಕಳಿ, ಆನೆಯಂಬಾರಿ, ನೃತ್ಯ, ಸಂಗೀತ ಮೊದಲಾದವುಗಳನ್ನು ಆಯೋಜಿಸಲಾಗುತ್ತದೆ. ದೇವಸ್ಥಾನದಲ್ಲಿ ವಿಶೇಷ ಪೂಜೆ ಹವನಗಳ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವ್ಯವಸ್ಥಿತವಾಗಿ ಕೇರಳದಲ್ಲಿ ಇಂದಿಗೂ ಆಚರಿಸಿಕೊಂಡು ಬರಲಾಗುತ್ತಿದೆ.

ಇನ್ನೊಂದು ಅಂಶವೆಂದರೆ ಈ ಹತ್ತು ದಿನಗಳ ಕಾಲ ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರು ಭೂಮಿಯ ಮೇಲಿರುತ್ತಾರೆಂಬುದು ಜನರ ಪ್ರತೀತಿ. ಅಲ್ಲದೆ ಈ ದಿನಗಳಲ್ಲಿ ದವಸ ಧಾನ್ಯಗಳನ್ನು ಕಟಾವುಗೈದು ಮನೆಗಳನ್ನು ತುಂಬಿಸಲಾಗುತ್ತದೆ.

ಕೊಲ್ಲಂ ಜಿಲ್ಲೆಯ ತ್ಯಕ್ಕಾಕರ ಎಂಬಲ್ಲಿನ ಪ್ರಸಿದ್ಧ ದೇವಾಯಲದಲ್ಲಿ ಮಹಾಬಲಿಯನ್ನು ಪಾತಾಳಕ್ಕೆ ತಳ್ಳಲಾಗಿದೆ ಎಂಬ ಐತಿಹ್ಯದೊಂದಿಗೆ ಇಲ್ಲಿ ವಾಮನ ಮೂರ್ತಿಯನ್ನು ಪ್ರತಿಷ್ಠಾಪಿಸಿ 10 ದಿನಗಳ ಕಾಲ ಪೂಜೆ ನೆರವೇರಿಸಲಾಗುತ್ತದೆ. ತಮಿಳುನಾಡು ಮತ್ತು ಕರ್ನಾಟಕದಲ್ಲೂ ಓಣಂ ಹಬ್ಬವನ್ನು ಆಚರಿಸಲಾಗುತ್ತಿದೆ. ಓಣಂ ಉತ್ಸವಾಚರಣೆಯನ್ನು ಜಾತಿ, ಮತ, ಬಡವ, ಬಲ್ಲಿದ ಎಂಬ ತಾರತಮ್ಯವನ್ನು ಮರೆತು ಎಲ್ಲರೂ ಒಂದಾಗಿ ಸಂತಸದಿಂದ ಆಚರಿಸುತ್ತಾರೆ.

ಕೇರಳದಲ್ಲಿ ಓಣಂ ಹಬ್ಬದ ಮೂಲಕ ಬಲಿ ಚಕ್ರವರ್ತಿಯನ್ನು ಭಜಿಸಿದರೆ, ಕರ್ನಾಟಕದಲ್ಲಿ ದೀಪಾವಳಿಯ ಬಲಿಪಾಡ್ಯಮಿಯಂದು ಮಹಾಬಲಿಯನ್ನು ಪೂಜಿಸಲಾಗುತ್ತಿದೆ.

ಈ ಹಬ್ಬದ ಆಚರಣೆಯಲ್ಲಿರುವ ಸುಂದರತೆಯನ್ನು ಅಭಿಮಾನಿಸುತ್ತಾ, ಈ ಹಬ್ಬವನ್ನು ಸಂತಸ, ಸಾಂಸ್ಕೃತಿಕ ಶ್ರದ್ಧೆ ಮತ್ತು ಪಾರಂಪರಿಕ ಭಕ್ತಿಗಳಿಂದ ಆಚರಿಸುತ್ತಿರುವ ಸಕಲರಿಗೂ ಶುಭ ಹಾರೈಕೆಗಳು.  ಪ್ರಾಕೃತಿಕ ವಿಕೋಪದಲ್ಲಿ ನೋಂದವರಿಗೆ ಬದುಕಿನಲ್ಲಿ ನೆಮ್ಮದಿ, ಸಂತೋಷ ಮತ್ತು ಸಂಮೃದ್ಧಿ ಶೀಘ್ರವಾಗಿ ಬರಲಿ.  ಪ್ರಕೃತಿಗೆ ಎರವಾಗಿ ಅದರ ವಿಕೋಪವನ್ನು ಆಹ್ವಾನಿಸದೆ ಅದರೊಂದಿಗೆ ನಲ್ಮೆಯಿಂದ ಬದುಕುವ ಸದ್ಬುದ್ಧಿ ಸಕಲ ಲೋಕಿಗರಿಗೂ ಬರಲಿ.

(ಕೆಲ ವರ್ಷದ ಹಿಂದೆ ವಿಜಯಕರ್ನಾಟಕ ಪತ್ರಿಕೆಯಲ್ಲಿ ಬಂದ ನಿಶಾ ಉಪ್ಪಳ ಅವರ ಬರಹವನ್ನು ಮೂಲ ವಿಷಯಕ್ಕೆ ಆದರಿಸಿದ್ದೇನೆ)

No comments:

Post a Comment